ಉಕ್ರೇನ್‌ನಂತಹ ಯುದ್ಧ ಮಾನವೀಯತೆಯ ವಿರುದ್ಧದ ಅಪರಾಧ: ಪೋಪ್

Update: 2023-01-09 15:17 GMT

ವ್ಯಾಟಿಕನ್, ಜ.9: ನಾಗರಿಕ ಪ್ರದೇಶಗಳು ವಿವೇಚನಾರಹಿತ ವಿನಾಶಕ್ಕೆ ಒಳಪಟ್ಟಿರುವ ಉಕ್ರೇನ್‌ನಂತಹ ಯುದ್ಧಗಳು ದೇವರು ಮತ್ತು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಎಂದು ಪೋಪ್ ಫ್ರಾನ್ಸಿಸ್(Pope Francis) ಹೇಳಿದ್ದಾರೆ.

‘ಜಾಗತಿಕ ಸ್ಥಿತಿಗತಿ ಅವಲೋಕನ’ ಎಂದು ಅನೌಪಚಾರಿಕವಾಗಿ ಕರೆಯಲಾಗುವ, ವ್ಯಾಟಿಕನ್‌ಗೆ ಮಾನ್ಯತೆ ಪಡೆದ ರಾಜತಾಂತ್ರಿಕರನ್ನು ಉದ್ದೇಶಿಸಿ ನಡೆಸುವ ವಾರ್ಷಿಕ ಭಾಷಣದಲ್ಲಿ ಅವರು ‘ ಉಕ್ರೇನ್‌ನಲ್ಲಿನ ಯುದ್ಧವು ಸಾವು ಮತ್ತು ವಿನಾಶದ ಮರಣ ಮೃದಂಗ ಬಾರಿಸಿದೆ. ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಯೊಂದಿಗೆ, ಗುಂಡಿನ ದಾಳಿ ಮತ್ತು ಹಿಂಸಾಚಾರದಿಂದ ಮಾತ್ರವಲ್ಲ, ಹಸಿವು ಮತ್ತು ಥರಗುಟ್ಟಿಸುವ ಚಳಿಯಿಂದಾಗಿಯೂ ಹಲವಾರು ಜೀವಗಳ ಸಾವಿಗೆ ಕಾರಣವಾಗುತ್ತದೆ’ ಎಂದು ಹೇಳಿದರು.

ಸಂಪೂರ್ಣ ನಗರ ಅಥವಾ ಅದರ ನಿವಾಸಿಗಳೊಂದಿಗೆ ವಿಶಾಲ ಪ್ರದೇಶವನ್ನು ವಿವೇಚನಾ ರಹಿತವಾಗಿ ನಾಶ ಮಾಡಲು ನಿರ್ದೇಶಿಸಿದ ಪ್ರತಿಯೊಂದು ಯುದ್ಧವೂ ದೇವರು ಮತ್ತು ಮಾನವೀಯತೆಯ ವಿರುದ್ಧದ ಅಪರಾಧವಾಗಿದ್ದು ನಿಸ್ಸಂದಿಗ್ಧವಾಗಿ ಖಂಡನಾರ್ಹವಾಗಿದೆ. ಈಗ ಮತ್ತೊಮ್ಮೆ ಪರಮಾಣು ಯುದ್ಧದ ಬೆದರಿಕೆ ಮುಂಚೂಣಿಗೆ ಬಂದಿರುವುದು ದುಃಖದ ವಿಷಯವಾಗಿದೆ ಎಂದ ಪೋಪ್, ಪರಮಾಣು ಅಸ್ತ್ರಗಳ ಮೇಲೆ ಸಂಪೂರ್ಣ ನಿಷೇಧದ ಆಗ್ರಹವನ್ನು ಪುನರುಚ್ಚರಿಸಿದರು.

Similar News