ಅಸಾಮಾನ್ಯ ವಿಪತ್ತಿನ ಅಪಾಯದಲ್ಲಿ ಪಾಕಿಸ್ತಾನ: ವಿಶ್ವಸಂಸ್ಥೆ

Update: 2023-01-09 16:56 GMT

ಜಿನೆವಾ, ಜ.9: ಕಳೆದ ವರ್ಷದ ವಿನಾಶಕಾರಿ ಪ್ರವಾಹದ ಆಘಾತದಿಂದ ಚೇತರಿಸಿಕೊಳ್ಳಲು ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಸಮುದಾಯದ ನೆರವು ಅತ್ಯಗತ್ಯವಾಗಿದೆ. ಇಲ್ಲವಾದರೆ ಆ ದೇಶ ಅಸಾಧಾರಣ ವಿಪತ್ತಿನ ಬಲೆಯಲ್ಲಿ ಸಿಲುಕಲಿದೆ ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಅಚಿಮ್ ಸ್ಟೈನರ್‌ರನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಸುರಿದ ಅಸಾಮಾನ್ಯ ಮಳೆ ಹಾಗೂ ಅದರಿಂದಾದ ಭೀಕರ ಪ್ರವಾಹದಿಂದ ಪಾಕಿಸ್ತಾನದಲ್ಲಿ 1700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 33 ದಶಲಕ್ಷದಷ್ಟು ಮಂದಿಯ ಮೇಲೆ ಪರಿಣಾಮ ಬೀರಿದೆ. ಪ್ರವಾಹದಿಂದ ಆಗಿರುವ ನಷ್ಟ ಮತ್ತು ಪರಿಹಾರ,ಪುನರ್ವಸತಿ ಕಾರ್ಯಕ್ಕೆ ಅಗತ್ಯವಿರುವ ಕೋಟ್ಯಾಂತರ ಡಾಲರ್ ನಿಧಿಯನ್ನು ದೇಣಿಗೆದಾರರಿಂದ ಸಂಗ್ರಹಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ಪಾಕಿಸ್ತಾನದ ಸಹಯೋಗದಲ್ಲಿ ಜಿನೆವಾದಲ್ಲಿ ಆಯೋಜಿಸಿರುವ ಅಂತರಾಷ್ಟ್ರೀಯ ಸಮಾವೇಶಕ್ಕೂ ಮುನ್ನ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಸ್ಟೈನರ್, ಮುಂಗಾರು ಮಳೆ ಮುಗಿದು ಹಲವು ತಿಂಗಳು ಕಳೆದರೂ ಪರಿಸ್ಥಿತಿ ಇನ್ನೂ ಭೀಕರವಾಗಿಯೇ ಉಳಿದಿದೆ ಎಂದರು.

ಈ ಪ್ರವಾಹದಿಂದ ಆಗಿರುವ ಸಂಪೂರ್ಣ ವಿನಾಶ, ಮಾನವ ಸಂಕಟ, ಆರ್ಥಿಕ ವೆಚ್ಚವನ್ನು ಗಮನಿಸಿದರೆ ಪ್ರವಾಹವು ನಿಜವಾಗಿಯೂ ದುರಂತದ ಘಟನೆಯಾಗಿ ಪರಿವರ್ತನೆಗೊಂಡಿದೆ. ನೆರೆನೀರಿನ ಮಟ್ಟ ಇಳಿದಿರಬಹುದು, ಆದರೆ ಪರಿಣಾಮ ಇನ್ನೂ ಹಾಗೆಯೇ ಉಳಿದಿದೆ. ಬೃಹತ್ ಪ್ರಮಾಣದಲ್ಲಿ ಪುನರ್ನಿಮಾಣ ಮತ್ತು ಪುನರ್ವಸತಿ ಪ್ರಯತ್ನಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸ್ಟೈನರ್ ಹೇಳಿದ್ದಾರೆ.

ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ಹವಾಮಾನ ಅವ್ಯವಸ್ಥೆ ಮತ್ತು ಜಾಗತಿಕ ಹಣಕಾಸು ವ್ಯವಸ್ಥೆಯಿಂದ ಪಾಕಿಸ್ತಾನ ದುಪ್ಪಟ್ಟು ಬಲಿಪಶುವಾಗಿದೆ. ಜಾಗತಿಕ ಹಣಕಾಸು ವ್ಯವಸ್ಥೆ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಒದಗಿಸುತ್ತಿಲ್ಲ ಮತ್ತು ಸಾಲದ ಹೊರೆ ಇಳಿಸುತ್ತಿಲ್ಲ ಎಂದರು.

ಕಳೆದ ವರ್ಷ ದೇಶದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದ ಬಳಿಕ ಪಾಕಿಸ್ತಾನದ ಪುನನಿರ್ಮಾಣ ಪ್ರಯತ್ನಗಳಲ್ಲಿ ಬೆಂಬಲ ನೀಡುವಂತೆ ಗುಟೆರಸ್ ಕರೆ ನೀಡಿದರು. ದೇಶದ ಆರ್ಥಿಕತೆ ಹಣದುಬ್ಬರವನ್ನು ಎದುರಿಸುತ್ತಿರುವ ಸಮಯದಲ್ಲಿ ಮರುನಿರ್ಮಾಣ ಪ್ರಕ್ರಿಯೆಗೆ ಸುಮಾರು 16 ಶತಕೋಟಿ ಡಾಲರ್‌ಗೂ ಹೆಚ್ಚು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಇದೇ ಸಂದರ್ಭ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶಹಬಾರ್ ಶರೀಫ್, ದೇಶದ ಮರುನಿರ್ಮಾಣಕ್ಕೆ ಮುಂದಿನ 3 ವರ್ಷಗಳಲ್ಲಿ ಅಂತರಾಷ್ಟ್ರೀಯ ಪಾಲುದಾರರಿಂದ 8 ಶತಕೋಟಿ ಡಾಲರ್ ನೆರವನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರೂ ಪಾಕ್ ನಿಯೋಗದಲ್ಲಿದ್ದರು.

Similar News