ಕಾರಿನಡಿಯಲ್ಲಿ ಮಹಿಳೆಯನ್ನು ಎಳೆದುಕೊಂಡು ಹೋದ ಪ್ರಕರಣ: 6 ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

Update: 2023-01-09 17:36 GMT

ಹೊಸದಿಲ್ಲಿ, ಜ. 9: ದಿಲ್ಲಿಯ ಸುಲ್ತಾನ್‌ ಪುರಿಯಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಗೆ ಢಿಕ್ಕಿ ಹೊಡೆದು, ಕಾರಿನಡಿಯಲ್ಲಿ ಸಿಲುಕಿಕೊಂಡ ಅವರನ್ನು ಹಲವಾರು ಕಿಲೋ ಮೀಟರ್ ದೂರ ಎಳೆದೊಯ್ದ ಪ್ರಕರಣದ ಆರುಮಂದಿ ಆರೋಪಿಗಳಿಗೆ ಸೋಮವಾರ ದಿಲ್ಲಿಯ ನ್ಯಾಯಾಲಯವೊಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಗಳು ಕಾರಿನಿಂದ ಇಳಿಯುವುದನ್ನು ಸಿಸಿಟಿವಿ ಚಿತ್ರಗಳು ತೋರಿಸಿವೆ. ಆದರೆ ಕಾರಿನ ಅಡಿಯಲ್ಲಿ ಮಹಿಳೆ ಸಿಕ್ಕಿಕೊಂಡಿರುವುದು ತಿಳಿದ ಬಳಿಕವೂ ಅವರು ಕಾರು ಚಲಾಯಿಸಿಕೊಂಡು ಹೋಗಿದ್ದಾರೆ ಎಂದು ದಿಲ್ಲಿ ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಮಹಿಳೆಯ ದೇಹವನ್ನು ಕಾರು ಎಳೆದು ಕೊಂಡುಹೋಗುತ್ತಿರುವ ಬಗ್ಗೆ ಆರೋಪಿಗಳಿಗೆ ತಿಳಿದಿತ್ತು ಎನ್ನುವುದು ಅವರ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪ್ರಾಸಿಕ್ಯೂಶನ್ ಹೇಳಿದೆ. ಆದರೆ, ಕಾರಿನ ಅಡಿಯಲ್ಲಿ ಏನಿದೆ ಎಂದು ನೋಡಲು ಕಾರಿನಿಂದ ಇಳಿದ ಇಬ್ಬರು ಆರೋಪಿಗಳ ಗುರುತನ್ನು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಹಿರಂಗಪಡಿಸಲಿಲ್ಲ.

‘‘ನಾವು ಹೊಸದಾಗಿ ಆರು ಸಿಸಿಟಿವಿ ವೀಡಿಯೊಗಳನ್ನು ಪಡೆದುಕೊಂಡಿದ್ದೇವೆ. ಪ್ರತಿಯೊಬ್ಬ ಆರೋಪಿಯ ದಾರಿಯನ್ನು ಪರಿಶೀಲಿಸಿ ಸರಿಯಾದ ಘಟನಾವಳಿಗಳನ್ನು ಸಿದ್ಧಪಡಿಸಿದ್ದೇವೆ. ಅದು ದೊಡ್ಡ ದಾರಿ. ನಾವು ಮೊದಲು ಅವರೆಲ್ಲರನ್ನೂ ಜೊತೆಯಲ್ಲಿ ಕರೆದು ಕೊಂಡು ಹೋದೆವು. ಬಳಿಕ ಒಬ್ಬೊಬ್ಬರನ್ನಾಗಿ ಕರೆದು ಕೊಂಡು ಹೋದೆವು. ಅವರು ಕಾರಿನಿಂದ ಇಳಿಯುವುದನ್ನು ತೋರಿಸುವ ಸಿಸಿಟಿವಿ ಚಿತ್ರಗಳನ್ನು ಪಡೆದುಕೊಂಡಿದ್ದೇವೆ. ನಾವು ಕಾರಿನಿಂದ ಇಳಿಯಲೇ ಇಲ್ಲ ಎಂದು ಅವರು ಮೊದಲು ಹೇಳಿದ್ದರು. ಅವರು ಇಳಿದಿದ್ದರು, ಏನೋ ಸಿಕ್ಕಿ ಹಾಕಿ ಕೊಂಡಿದೆ ಎನ್ನುವುದು ಅವರಿಗೆ ಗೊತ್ತಾಗಿತ್ತು ಮತ್ತು ಆ ಬಳಿಕವೂ ಅವರು ಕಾರು ಚಲಾಯಿಸಿಕೊಂಡು ಹೋದರು’’ ಎಂದು ತನಿಖಾಧಿಕಾರಿ ನ್ಯಾಯಾಲಯದಲ್ಲಿ ಹೇಳಿದರು.

Similar News