75 ವರ್ಷಗಳ ಬಳಿಕ ವಿದ್ಯುತ್ ಸಂಪರ್ಕ ಪಡೆದ ಜಮ್ಮು-ಕಾಶ್ಮೀರದ ಗ್ರಾಮ!

Update: 2023-01-09 17:47 GMT

ಶ್ರೀನಗರ,ಜ.9: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬುಡಕಟ್ಟು ಪ್ರದೇಶದ ತೆಥಾನ್ ನಿವಾಸಿಗಳು ದೇಶಕ್ಕೆ ಸ್ವಾತಂತ್ರ ದೊರೆತು ಸುಮಾರು 75 ವರ್ಷಗಳ ಬಳಿಕ ತಮ್ಮ ಗ್ರಾಮಕ್ಕೆ ಮೊದಲ ಬಾರಿ ವಿದ್ಯುತ್ ಸಂಪರ್ಕ ಲಭಿಸಿದ ಸಂಭ್ರಮದಲ್ಲಿದ್ದಾರೆ.

ಕೇಂದ್ರ ಪ್ರಾಯೋಜಿತ ಪ್ರಧಾನಿ ಅಭಿವೃದ್ಧಿ ಪ್ಯಾಕೇಜ್ ಯೋಜನೆಯಡಿ ಅನಂತನಾಗ್‌ನ ಡೋರು ಬ್ಲಾಕ್‌ನ ತೆಥಾನ್ ಗ್ರಾಮಕ್ಕೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದೆ.

200ಕ್ಕೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮವು ತನ್ನ ಇಂಧನ ಅಗತ್ಯಗಳಿಗಾಗಿ ಸಾಂಪ್ರದಾಯಿಕ ಉರುವಲನ್ನೇ ಅವಲಂಬಿಸಿತ್ತು. ತಮ್ಮ ದೈನಂದಿನ ಅಗತ್ಯಗಳ ನಡುವೆ ಬದುಕುಳಿಯಲು ಜನರು ಮೋಂಬತ್ತಿ ಮತ್ತು ದೀಪಗಳನ್ನು ಬಳಸುತ್ತಿದ್ದರು.

ಅನಂತನಾಗ್ ಪಟ್ಟಣದಿಂದ 45 ಕಿ.ಮೀ.ದೂರದಲ್ಲಿರುವ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ವಿದ್ಯುತ್ ಪರಿವರ್ತಕಗಳು ಮತ್ತು ಕಂಬಗಳು ಅಲ್ಲಿಯ 60 ಮನೆಗಳನ್ನು ಬೆಳಗಿಸಿವೆ.

Similar News