ಅಮಿತಾಭ್ ಬಚ್ಚನ್‌ರ 'Horrible error' ಟ್ವೀಟ್‌ಗೆ ಝೊಮ್ಯಾಟೊ ಪ್ರತಿಕ್ರಿಯೆ ವೈರಲ್

Update: 2023-01-10 10:01 GMT

ಹೊಸದಿಲ್ಲಿ: ನೀವು ಟ್ವಿಟರ್‌ನ (Twitter) ನಿತ್ಯ ಬಳಕೆದಾರರಾಗಿದ್ದರೆ ಅಮಿತಾಭ್ ಬಚ್ಚನ್ (Amitabh Bachchan) ಅವರ ಟ್ವೀಟ್‌ಗಳನ್ನು ಗಮನಿಸಿಯೇ ಇರುತ್ತೀರಿ. ಅವರು ಟ್ವೀಟ್ ಮಾಡಲು ಪ್ರಾರಂಭಿಸಿದಂದಿನಿಂದ, ಪ್ರತಿ ಟ್ವೀಟ್‌ಗೂ ಕ್ರಮ ಸಂಖ್ಯೆ ನೀಡುತ್ತಿದ್ದಾರೆ ಮತ್ತದನ್ನು ಗಂಭೀರವಾಗಿಯೂ ಪರಿಗಣಿಸಿದ್ದಾರೆ. ಆದರೆ, ಈ ನಡುವೆ 4514ನೇ ಟ್ವೀಟ್ ನಂತರ ತಾವು ತಪ್ಪು ಕ್ರಮ ಸಂಖ್ಯೆಗಳನ್ನು ನಮೂದಿಸುತ್ತಿರುವುದು ಅಮಿತಾಭ್ ಗಮನಕ್ಕೆ ಬಂದಿದೆ. ಕೂಡಲೇ ಜನವರಿ 8ರಂದು ಈ ಕುರಿತು ಟ್ವೀಟ್ ಮಾಡಿರುವ ಅವರು, ಕ್ರಮ ಸಂಖ್ಯೆಯಲ್ಲಿನ ತಪ್ಪನ್ನು 'ಭಾರಿ ಪ್ರಮಾದ' ಎಂದು ಉಲ್ಲೇಖಿಸಿದ್ದಾರೆ.

"ಟ್ವೀಟ್ ಸಂಖ್ಯೆ 4515 ಒಂದು ಭಾರಿ ಪ್ರಮಾದವಾಗಿದೆ. ಟ್ವೀಟ್ ಸಂಖ್ಯೆ 4514ರ ನಂತರದ ಟ್ವೀಟ್‌ಗಳ ಕ್ರಮ ಸಂಖ್ಯೆಗಳೆಲ್ಲ ತಪ್ಪಾಗಿವೆ. ಟ್ವೀಟ್ ಸಂಖ್ಯೆ 5424, 5425, 5426, 4527, 5428, 5429, 5430... ಎಲ್ಲವೂ ತಪ್ಪಾಗಿವೆ. ಅವು ಟ್ವೀಟ್ ಸಂಖ್ಯೆ 4515, 4516, 4517, 4518, 4519, 4520, 4521 ಎಂದಾಗಬೇಕಿತ್ತು. ಕ್ಷಮೆಗಳು" ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.

ಈ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡಲೇ ವೈರಲ್ ಆಗಿ, ಸಾವಿರಾರು ಟ್ವಿಟರ್ ಬಳಕೆದಾರರ ಪ್ರತಿಕ್ರಿಯೆಯನ್ನೂ ಪಡೆಯಿತು. ಆದರೆ, ಈ ಟ್ವೀಟ್‌ಗೆ ಪ್ರತಿಯಾಗಿ ಝೊಮ್ಯಾಟೊ (Zomato) ಕಂಪನಿ ತನ್ನ ಟ್ವಿಟರ್ ಖಾತೆಯಲ್ಲಿ ನೀಡಿರುವ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ.

ಅಮಿತಾಭ್ ಬಚ್ಚನ್ ಅವರ 'ಭಾರಿ ಪ್ರಮಾದ'ದ ಟ್ವೀಟ್ ಅನ್ನು ನಕಲು ಮಾಡಿರುವ ಝೊಮ್ಯಾಟೊ, "ಟ್ವೀಟ್ ಸಂಖ್ಯೆ 4515 ಒಂದು ಭಾರಿ ಪ್ರಮಾದ!! ಚಹಾ ಒಳ್ಳೆಯದು ಎಂದು ಹೇಳಿದ್ದ ನನ್ನ ಎಲ್ಲ ಟ್ವೀಟ್‌ಗಳು ತಪ್ಪಾಗಿವೆ. ಅದರ ಬದಲು ಮೊಮೊಗಳು ಎಂದಿರಬೇಕಿತ್ತು. ಕ್ಷಮೆಗಳು" ಎಂದು ತನ್ನ ಉತ್ಪನ್ನವಾದ ಮೊಮೊಗಳ ಪ್ರಚಾರಕ್ಕೆ ಅದನ್ನು ಬಳಸಿಕೊಂಡಿದೆ.

ಈ ಟ್ವೀಟ್ ಹಲವಾರು ಸಾಮಾಜಿಕ ಬಳಕೆದಾರರ ಗಮನ ಸೆಳೆದಿದ್ದು, ಅಸಂಖ್ಯ ಪ್ರತಿಕ್ರಿಯೆಗಳನ್ನು ಗಳಿಸಿದೆ. ಈ ಪೈಕಿ ಓರ್ವ ಬಳಕೆದಾರ, "ಇಗೋ ನೋಡಿ. ಹೊಸ ಪ್ರವೃತ್ತಿಯನ್ನು ಸೇರಿಕೊಳ್ಳಲು ಉತ್ಪನ್ನಗಳು ಸಿದ್ಧವಾಗಿವೆ" ಎಂದು ಬರೆದಿದ್ದರೆ, ಮತ್ತೊಬ್ಬ ಬಳಕೆದಾರ, "ಚಹಾ>>>ಮೊಮೊಗಳು. ಯಾವುದೇ ದಿನ" ಎಂದು ಪ್ರತಿಕ್ರಿಯಿಸಿದ್ದಾರೆ.

ಅಮಿತಾಭ್ ಬಚ್ಚನ್‌ರ ಒಂದು ಟ್ವೀಟ್ ಅನ್ನು ಝೊಮ್ಯಾಟೊ ಕಂಪನಿಯು ತನ್ನ ಉತ್ಪನ್ನ ಜಾಹೀರಾತಿಗೆ ಬಳಸಿಕೊಂಡಿರುವ ಕ್ರಮ ನಿಜಕ್ಕೂ ವಿನೂತನವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: 'ಪಠಾಣ್' ಟ್ರೈಲರ್ ಬಿಡುಗಡೆ: ಸಾಹಸ ದೃಶ್ಯಗಳಿಂದ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದ ಶಾರೂಖ್ ಖಾನ್

Similar News