ಕುಂದಾಪುರ: ಉಚಿತ ಆರೋಗ್ಯ ತಪಾಸಣಾ ಮೇಳ
ಕುಂದಾಪುರ: ಆರೋಗ್ಯ ಸುಸ್ಥಿಯಲ್ಲಿರದಿದ್ದರೆ ಎಷ್ಟೇ ಸಂಪತ್ತಿರಲಿ, ಎತ್ತರದ ಸ್ಥಾನಮಾನವಿದ್ದರೂ ಅವೆಲ್ಲಾ ಗೌಣವಾಗುತ್ತದೆ. ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ ಹಾಗೂ ಜವಾಬ್ದಾರಿಯಾಗಿದೆ ಎಂದು ಉಡುಪಿ ರೆಡ್‌ಕ್ರಾಸ್‌ನ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ, ಉಡುಪಿ ಜಿಲ್ಲಾ ಘಟಕ ಹಾಗೂ ಕುಂದಾಪುರ ಘಟಕ, ಮಂಗಳೂರು ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜ್ ಆಶ್ರಯದಲ್ಲಿ ಇಲ್ಲಿನ ಸರಕಾರಿ ಜೂನಿಯರ್ ಕಾಲೇಜಿನ ಲಕ್ಷ್ಮೀ ನರಸಿಂಹ ರೋಟರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಉಚಿತ ಆರೋಗ್ಯ ತಪಾಸಣಾ ಮೇಳ ಹಾಗೂ ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ ಉದ್ಘಾಟಿಸಿ ಮಾತನಾಡಿದರು.
ಇಂದು ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯವಾಗಿದೆ. ಆರೋಗ್ಯದ ಬಗ್ಗೆ ಅಷ್ಟೊಂದು ಕಾಳಜಿ ವಹಿಸದಿರುವುದು ಹಾಗೂಮಾಹಿತಿ ಕೊರತೆಯಿಂದ ಮಹಿಳೆಯರು ಆರೋಗ್ಯ ನಿರ್ಲಕ್ಷಿಸುತ್ತಿದ್ದು, ಅವರಿಗೆ ಸ್ವಾಸ್ಥ್ಯದ ಬಗ್ಗೆ ಹೆಚ್ಚಿನ ಅರಿವು ಅಗತ್ಯವಿದೆ ಎಂದವರು ನುಡಿದರು.
ಕುಂದಾಪುರ ರೆಡ್‌ಕ್ರಾಸ್ ಘಟಕ ಸಭಾಪತಿ ಎಸ್.ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜ್ ವೈದ್ಯರಾದ ಡಾ.ರಚನಾ, ಡಾ.ಪ್ರಜ್ಞಾ, ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ರತ್ನಾಕರ, ಖಚಾಂಚಿ ಶಿವರಾಮ ಶೆಟ್ಟಿ, ಸದಸ್ಯರಾದ ಗಣೇಶ್ ಆಚಾರ್ಯ, ಡಾ.ಸೋನಿ ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಘಟಕ ಕಾರ್ಯದರ್ಶಿ ವೈ.ಸೀತಾರಾಮ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.