ದಕ್ಷಿಣ ಕೊರಿಯ ಪ್ರಯಾಣಿಕರ ವೀಸಾ ಅಮಾನತು ಗೊಳಿಸಿದ ಚೀನಾ : ಕಾರಣವೇನು ಗೊತ್ತೇ ?

Update: 2023-01-10 16:28 GMT

ಬೀಜಿಂಗ್,: ಚೀನಾದಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ತಪಾಸಣೆಯನ್ನು ಕಡ್ಡಾಯಗೊಳಿಸಿರುವ ದಕ್ಷಿಣ ಕೊರಿಯದ ಕ್ರಮಕ್ಕೆ ಪ್ರತೀಕಾರವಾಗಿ ಚೀನಾವು ದೇಶಕ್ಕೆ ಬರುವ ಎಲ್ಲಾ ದಕ್ಷಿಣ ಕೊರಿಯನ್ನರ ವೀಸಾಗಳನ್ನು ಮಂಗಳವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಚೀನಿ ಪ್ರಯಾಣಿಕರ ವಿರುದ್ದ ಅನುಸರಿಸುತ್ತಿರುವ ಕ್ರಮಗಳನ್ನು ದಕ್ಷಿಣ ಕೊರಿಯ ರದ್ದುಪಡಿಸುವವರೆಗೆ ಈ ನಿಷೇಧವು ಜಾರಿಯಲ್ಲಿರುವುದೆಂದು ಸಿಯೋಲ್‌ನಲ್ಲಿನ ಚೀನಾದ ರಾಯಭಾರಿ ಕಚೇರಿ ಆನ್‌ಲೈನ್ ಮೂಲಕ ನೀಡಿರುವ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಆದರೆ ಈ ಬಗ್ಗೆ ಅದು ಹೆಚ್ಚಿನ ಯಾವುದೇ ವಿವರಗಳನ್ನು ನೀಡಿಲ್ಲವೆಂದು ತಿಳಿದುಬಂದಿದೆ.

ಚೀನಿ ಪ್ರಯಾಣಿಕರು ತಮ್ಮ ಆಗಮನದ ಹಿಂದಿನ 48 ತಾಸುಗಳೊಳಗೆ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿರುವ ಪ್ರಮಾಣಪತ್ರವನ್ನು ತೋರಿಸಿದಲ್ಲಿ ಮಾತ್ರವೇ ಅವರಿಗೆ ತಮ್ಮ ನೆಲಕ್ಕೆ ಪ್ರವೇಶನೀಡಲಾಗುವುದೆಂದು ಘೋಷಿಸಿರುವ ರಾಷ್ಟ್ರಗಳ ವಿರುದ್ಧ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಚೀನಾ ಈಗಾಗಲೇ ಬೆದರಿಕೆ ಹಾಕಿದೆ.

ಇದಕ್ಕೆ ಪ್ರತಿಯಾಗಿ ಚೀನಾ ಕೂಡಾ ಆ ದೇಶಗಳಿಂದ ಆಗಮಿಸುವ ಪ್ರಯಾಣಿಕರ ವಿರುದ್ಧ ಕೋವಿಡ್ ನಿರ್ಬಂಧಗಳನ್ನು ಹೇರುವುದಾಗಿ ತಿಳಿಸಿದೆ.

ಕೋವಿಡ್19 ಹಾವಳಿಯ ಉಲ್ಬಣದ ಕುರಿತ ದತ್ತಾಂಶಗಳನ್ನು ಚೀನಾವು ತಡೆಹಿಡಿದಿರುವುದಾಗಿ ವಿಶ್ವ ಆರೋಗ್ಯಸಂಸ್ಥೆ ತಿಳಿಸಿದೆ.

Similar News