ಎಟಿಎಂ ನಗದು ವಾಹನದ ಭದ್ರತಾ ಸಿಬ್ಬಂದಿಗೆ ಗುಂಡಿಟ್ಟು ಹತ್ಯೆ: 8 ಲಕ್ಷ ರೂ. ಲೂಟಿ ಮಾಡಿ ಪರಾರಿಯಾದ ದುಷ್ಕರ್ಮಿ

Update: 2023-01-10 17:18 GMT

ಹೊಸದಿಲ್ಲಿ: ಎಟಿಎಂಗೆ ನಗದು ತುಂಬಿಸಲು ಬಂದಿದ್ದ ವ್ಯಾನ್‌ನ ಭದ್ರತಾ ಸಿಬ್ಬಂದಿ (security guard) ಮೇಲೆ ಗುಂಡು ಹಾರಿಸಿ ಹತ್ಯೆಗೈದಿರುವ ದುಷ್ಕರ್ಮಿಯೊಬ್ಬ, ವ್ಯಾನ್‌ನಲ್ಲಿದ್ದ ಎಂಟು ಲಕ್ಷ ರೂಪಾಯಿ ನಗದನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಮಂಗಳವಾರ ಸಂಜೆ ದಿಲ್ಲಿಯ ಫ್ಲೈಓವರ್ ಬಳಿ ಇರುವ ICICI ATM ಬಳಿ ಸಂಭವಿಸಿದೆ ಎಂದು ndtv.com ವರದಿ ಮಾಡಿದೆ.

ಮಂಗಳವಾರ ಸಂಜೆ ಐಸಿಐಸಿಐ ಎಟಿಎಂಗೆ ಹಣ ತುಂಬಿಸಲು ನಗದು ವ್ಯಾನ್ ಬಂದು ನಿಂತಾಗ, ಹಿಂಬದಿಯಿಂದ ಬಂದ ದುಷ್ಕರ್ಮಿಯೊಬ್ಬ ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿ, ನಗದಿನೊಂದಿಗೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಗುಂಡೇಟಿಗೆ ಬಲಿಯಾದ ಜೈ ಸಿಂಗ್ (55) ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಈ ಘಟನೆಯು ವಝೀರಾಬಾದ್‌ನ ಜಗತ್‌ಪುರ್ ಫ್ಲೈಓವರ್ ಬಳಿ ಸಂಜೆ ಸುಮಾರು ಐದು ಗಂಟೆಗೆ ನಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ದಿಲ್ಲಿಯ ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ, "ಸಂಜೆ 4:50ಕ್ಕೆ ನಗದು ವ್ಯಾನ್ ಕಿಯೋಸ್ಕ್‌ಗೆ ನಗದು ಭರ್ತಿ ಮಾಡಲು ಎಟಿಎಂ ಬಳಿ ಬಂದಿತ್ತು. ಆ ಕೂಡಲೇ ಹಿಂಬದಿಯಿಂದ ಬಂದ ಓರ್ವ ವ್ಯಕ್ತಿ, ವ್ಯಾನ್‌ನ ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿ, ನಗದಿನೊಂದಿಗೆ ಪರಾರಿಯಾಗಿದ್ದಾನೆ" ಎಂದು ತಿಳಿಸಿದ್ದಾರೆ.

ಆರೋಪಿಯನ್ನು ಪತ್ತೆ ಹಚ್ಚಲು ಹಲವು ತಂಡಗಳನ್ನು ರಚಿಸಲಾಗಿದ್ದು, ಘಟನೆಯ ಸಂದರ್ಭವನ್ನು ಖಚಿತಪಡಿಸಿಕೊಳ್ಳಲು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಬೌಲಿಂಗ್ ಮಾಡಿ ದಾಖಲೆ ನಿರ್ಮಿಸಿದ ಉಮ್ರಾನ್ ಮಲಿಕ್

Similar News