ಅಸ್ಸಾಂ : 500 ಹೆಕ್ಟೇರ್ ಮೀಸಲು ಅರಣ್ಯ ಒತ್ತುವರಿ ತೆರವು

Update: 2023-01-10 18:14 GMT

ಗುವಾಹಟಿ, ಜ. 10: ಅಸ್ಸಾಮ್‌ನ ಲಖಿಮ್‌ಪುರ್ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ 500 ಹೆಕ್ಟೇರ್‌ಗೂ ಅಧಿಕ ಅರಣ್ಯ ಭೂಮಿಯನ್ನು ಮಂಗಳವಾರ ಬುಲ್ಡೋಜರ್‌ಗಳನ್ನು ಬಳಸಿ ತೆರವುಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಹಲವು ಕುಟುಂಬಗಳು ಮೊದಲೇ ತಮ್ಮ ಮನೆಗಳನ್ನು ಕೆಡವಿ ಹೊರಹೋಗಿದ್ದವು.

ತೆರವು ಕಾರ್ಯಾಚರಣೆಯು ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳುವುದಕ್ಕಾಗಿ ರಾಜ್ಯ ಪೊಲೀಸ್ ಮತ್ತು ಕೇಂದ್ರೀಯಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸೇರಿದಂತೆ 800ಕ್ಕೂ ಅಧಿಕ ಭದ್ರತಾಸಿಬ್ಬಂದಿಯನ್ನು ಪಭಮೀಸಲು ಅರಣ್ಯದಲ್ಲಿ ನಿಯೋಜಿಸಲಾಗಿತ್ತು.

2,560.25 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಮೀಸಲು ಅರಣ್ಯದಲ್ಲಿ ಕೇವಲ 29 ಹೆಕ್ಟೇರ್ ಒತ್ತುವರಿಮುಕ್ತವಾಗಿದೆ. ಕಳೆದ ದಶಕಗಳಲ್ಲಿ, ನೂರಾರು ಕುಟುಂಬಗಳು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿವೆ ಎಂದು ಅಧಿಕೃತ ದಾಖಲೆಗಳು ಹೇಳುತ್ತವೆ. ಪ್ರವಾಹಗಳು ಮತ್ತು ಕೊರೆತಗಳಿಂದಾಗಿ ನಿರ್ವಸಿತರಾಗಿರುವ ರಾಜ್ಯದ ವಿವಿಧ ಭಾಗಗಳ ಜನರು ಮತ್ತು ಸ್ಥಳೀಯರು ಮೀಸಲು ಅರಣ್ಯದಲ್ಲಿ ವಾಸಿಸುತ್ತಿದ್ದರು.

ಮೊದಲ ಹಂತದ ತೆರವುಕಾರ್ಯಾಚರಣೆಯಲ್ಲಿ ಮಂಗಳವಾರ ಅದಸೋನ ಮತ್ತು ಮೊಹಗುಲಿ ಗ್ರಾಮಗಳಲ್ಲಿರುವ 500 ಹೆಕ್ಟೇರ್ ಅರಣ್ಯವನ್ನು ಒತ್ತುವರಿಮುಕ್ತಗೊಳಿಸಲಾಗಿದೆ.

Similar News