ಮಲಹೊರುವ ಪದ್ಧತಿಗೆ ಬಡತನ, ಜಾತಿ ತಾರತಮ್ಯ ಮೂಲ ಕಾರಣಗಳು: ಅಧ್ಯಯನ ವರದಿ

Update: 2023-01-11 06:00 GMT

ಹೊಸದಿಲ್ಲಿ, ಜ.10: ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅಥವಾ ದೈಹಿಕವಾಗಿ ಮಲಗುಂಡಿ ಸ್ವಚ್ಛಗೊಳಿಸುವ ವೃತ್ತಿಗೆ ಬಡತನ ಮತ್ತು ಜಾತಿ ತಾರತಮ್ಯಗಳು ಮೂಲ ಕಾರಣಗಳೆಂದು ಇತ್ತೀಚಿನ ಅಧ್ಯಯನ ವರದಿಯು ಬೆಟ್ಟು ಮಾಡಿದೆ.

ದಲಿತ ಮಾನವ ಹಕ್ಕುಗಳ ಸಂಸ್ಥೆ ಸೋಷಿಯಲ್ ಅವೇರ್‌ನೆಸ್ ಸೊಸೈಟಿ ಫಾರ್ ಯುಥ್ (ಎಸ್‌ಎಎಸ್‌ವೈ) ಮ್ಯಾನ್ಯುವಲ್ ಸ್ಕಾವೆಂಜಿಂಗ್ ವೃತ್ತಿ ನಿಷೇಧ ಮತ್ತು ಪುನರ್ವಸತಿ (ಪಿಎಎಂಎಸ್‌ಆರ್) ಕಾಯ್ದೆ-2013ರ ಅನುಷ್ಠಾನದ ಸ್ಥಿತಿಗತಿ ಕುರಿತು ತಮಿಳುನಾಡಿನಲ್ಲಿ ನಡೆಸಿದ ಅಧ್ಯಯನ ವರದಿಯನ್ನು ಬಿಡುಗಡೆ ಗೊಳಿಸಿದೆ. ಅಧ್ಯಯನವು ನೈರ್ಮಲ್ಯ ಕಾರ್ಮಿಕರ ಸಂದರ್ಶನಗಳನ್ನು ಒಳಗೊಂಡಿತ್ತು.

ಮ್ಯಾನ್ಯುವಲ್ ಸ್ಕಾವೆಂಜಿಂಗ್ ಜಾತಿ ಆಧಾರಿತ ತಾರತಮ್ಯದಲ್ಲಿ ಆಳವಾಗಿ ಬೇರೂರಿರುವ ಅಮಾನವೀಯ ಮತ್ತು ಅವಮಾನಕರ ವೃತ್ತಿಯಾಗಿದೆ ಮತ್ತು ತಲೆಮಾರುಗಳಿಂದಲೂ ತಮ್ಮ ಮೇಲೆ ಹೇರಲಾಗಿದೆ ಎನ್ನುವುದು ನೈರ್ಮಲ್ಯ ಕಾರ್ಮಿಕರಿಗೆ ಗೊತ್ತಿದೆ. ಆದರೆ ಉದ್ಯೋಗದಾತರು ತಮ್ಮನ್ನು ಶೋಷಿಸುವುದರಿಂದ ಮತ್ತು ಕೆಲವೊಮ್ಮೆ ಕ್ರೂರರೂ ಆಗಿರುವುದರಿಂದ ಅವರು ಈ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಈ ಕಾರ್ಮಿಕರು, ವಿಶೇಷವಾಗಿ ಮಹಿಳೆಯರು ತಮ್ಮ ಕುಟುಂಬವನ್ನು ಪೋಷಿಸಲು ಹಾಗೂ ಈ ಪಿಡುಗು ತಮ್ಮಾಂದಿಗೇ ಅಂತ್ಯಗೊಳ್ಳಲೆಂಬ ಆಶಯದಿಂದ ತಮ್ಮ ಮಕ್ಕಳನ್ನು ಓದಿಸಲು ಈ ಅಮಾನವೀಯ ವೃತ್ತಿಯನ್ನು ಮುಂದುವರಿಸಿದ್ದಾರೆ ಎಂದು ವರದಿಯು ಹೇಳಿದೆ.

ಎಸ್‌ಎಎಸ್‌ವೈ ದೈಹಿಕವಾಗಿ ಮಲಗುಂಡಿ ಮತ್ತು ಒಳಚರಂಡಿಗಳ ಸ್ವಚ್ಛಗೊಳಿಸುವಿಕೆ, ಸಂಭವಿಸಿದ ಸಾವುಗಳು, ಜಾತಿಯಾಧಾರಿತ ತಾರತಮ್ಯದ ಘಟನೆಗಳು ಹಾಗೂ ತಮಿಳುನಾಡಿನ ಸರಕಾರಿ ಶಾಲೆಗಳಲ್ಲಿನ ಸಂಬಂಧಿಸಿದ ಘಟನೆಗಳ 2021- 22ನೇ ಸಾಲಿನಲ್ಲಿಯ 21 ಪ್ರಕರಣಗಳನ್ನು ಅಧ್ಯಯನಕ್ಕೊಳಪಡಿಸಿತ್ತು.

ಹೆಚ್ಚಿನ ಪ್ರಕರಣಗಳು ಸರಿಯಾಗಿ ದಾಖಲಾಗಿಲ್ಲ ಮತ್ತು ದಾಖಲಾಗಿರುವ ಕೆಲವು ಪ್ರಕರಣಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲದಿದ್ದರೆ ಬೆಳಕಿಗೆ ಬರುತ್ತಿರಲಿಲ್ಲ ಎಂದು ಹೇಳಿರುವ ವರದಿಯು, ಖಾಸಗಿ ಕಂಪೆನಿಗಳಲ್ಲಿ ಘಟನೆಗಳು ಸಂಭವಿಸಿದಾಗ ಅವು ತಮ್ಮ ವಿರುದ್ಧ ಪ್ರಕರಣ ದಾಖಲಾಗುವುದನ್ನು ತಡೆಯಲು ಬಲಿಪಶುಗಳಿಗೆ ಕೊಂಚ ಹಣವನ್ನು ನೀಡಿ ಮುಚ್ಚಿಹಾಕು ತ್ತವೆ. ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸು ವಾಗ ವ್ಯಕ್ತಿಯು ಸಾವನ್ನಪ್ಪಿದಾಗ ಮಾತ್ರ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತವೆ.

ದಮನಿತ ಸಮುದಾಯಗಳ ಹಲವರು ಬಡತನದಿಂದಾಗಿ ಈ ವೃತ್ತಿಯಲ್ಲಿದ್ದಾರೆ ಮತ್ತು ವಿಶೇಷವಾಗಿ,ನಗರ ಪ್ರದೇಶಗಳಲ್ಲಿ ಮಾನವ ಮತ್ತು ಪ್ರಾಣಿಗಳ ತ್ಯಾಜ್ಯವನ್ನು ಸ್ವಚ್ಛಗೊಳಿಸುವುದರಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದೆ. ಮ್ಯಾನ್ಯುವಲ್ ಸ್ಕಾವೆಂಜಿಂಗ್ ಪಿಡುಗಿಗೆ ಬಲಿಪಶುಗಳು ಹೆಚ್ಚಾಗಿ ಪರಿಶಿಷ್ಟ ಜಾತಿಗಳಿಗೆ ಸೇರಿದವರಾಗಿದ್ದಾರೆ ಎನ್ನುವುದನ್ನು ವರದಿಯು ಬೆಟ್ಟು ಮಾಡಿದೆ.

ಅಧ್ಯಯನಕ್ಕೆ ಒಳಪಡಿಸಲಾಗಿದ್ದ ಪ್ರಕರಣಗಳ ಪೈಕಿ 15ರಲ್ಲಿ ಎಫ್‌ಐಆರ್‌ಗಳು ದಾಖಲಾಗಿದ್ದವು. ಈ ಪೈಕಿ ಕೇವಲ ಆರು ಪ್ರಕರಣಗಳು ಪಿಇಎಂಎಸ್‌ಆರ್ ಕಾಯ್ದೆಯಡಿ ಮತ್ತು ಎಂಟು ಪ್ರಕರಣಗಳು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಾಗಿದ್ದವು. 15 ಪ್ರಕರಣಗಳ ಪೈಕಿ ಕೇವಲ ಒಂಭತ್ತು ಪ್ರಕರಣಗಳಲ್ಲಿ 15 ಆರೋಪಿಗಳು ಬಂಧಿಸಲ್ಪಟ್ಟಿದ್ದರು. ಏಳು ಪ್ರಕರಣಗಳಲ್ಲಿ ಮಾಲಕರ ಬೆದರಿಕೆಗಳಿಂದಾಗಿ ದೂರುಗಳು ದಾಖಲಾಗಿರಲಿಲ್ಲ,ಈ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿಗಳು ಸಲ್ಲಿಕೆಯಾಗಿರಲಿಲ್ಲ, ಯಾವುದೇ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೂ ಬಂದಿರಲಿಲ್ಲ ಎಂದು ವರದಿಯು ತಿಳಿಸಿದೆ.

ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ದತ್ತಾಂಶಗಳಂತೆ ಕಳೆದ 29 ವರ್ಷಗಳಲ್ಲಿ (1993-2022) ದೇಶದ ವಿವಿಧ ಭಾಗಗಳಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಸಂದರ್ಭಗಳಲ್ಲಿ ಒಟ್ಟು 989 ಜನರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದೆ.

ಕಾರ್ಮಿಕರನ್ನು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್‌ಗೆ ತೊಡಗಿಸಲಾಗಿತ್ತು. ಅವರಿಗೆ ಸಾಕಷ್ಟು ರಕ್ಷಣಾ ಉಪಕರಣಗಳು ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸಲಾಗಿರಲಿಲ್ಲ. ಅವರು ಕೈಗಳಿಂದಲೇ ಈ ಕೆಲಸವನ್ನು ಮುಂದುವರಿಸಿದ್ದಾರೆ ಎಂದು ವರದಿಯು ಆರೋಪಿಸಿದೆ. ವರದಿಯ ಆಧಾರದಲ್ಲಿ ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ ಸ್ವಚ್ಛತೆಗಾಗಿ ಯಂತ್ರಗಳ ಖರೀದಿಗೆ ಶಿಫಾರಸುಗಳನ್ನು ಮಾಡಲಾಗಿದೆ.

ಇಂತಹ ಸಾವುಗಳನ್ನು ತಡೆಯಲು ಸ್ಥಳೀಯಾಡಳಿತಗಳಿಂದ ಪರಿಣಾಮಕಾರಿ ನಿಗಾಕ್ಕೆ ಶಿಫಾರಸು ಮಾಡಲಾಗಿದೆ. ಜೈವಿಕ ಶೌಚಾಲಯಗಳ ನಿರ್ಮಾಣ ಮತ್ತು ಈ ನತದೃಷ್ಟರ ಪುನರ್‌ವಸತಿಗಾಗಿ ಹೆಚ್ಚಿನ ಹಣ ಹಂಚಿಕೆಯ ಅಗತ್ಯಗಳಿಗೂ ವರದಿಯು ಒತ್ತು ನೀಡಿದೆ.

Similar News