×
Ad

‘ಕಲ್ಯಾಣ ಕರ್ನಾಟಕ’ ಕೊನೆಗೂ ಕಲ್ಯಾಣವಾಗಲೇ ಇಲ್ಲ...

Update: 2023-01-11 11:08 IST

ಒಂದು ಪಕ್ಷ, ಒಂದು ಸಂಘಟನೆ, ಒಬ್ಬ ವ್ಯಕ್ತಿ ಸುಳ್ಳು ಹೇಳುವುದು ನಾವು ಸಾಕಷ್ಟು ಸಲ ಕಂಡಿದ್ದೇವೆ, ಆದರೆ ಒಂದು ಸರಕಾರ, ಒಬ್ಬ ಮುಖ್ಯಮಂತ್ರಿ, ಸಚಿವರು ಪದೇ ಪದೇ ಇಷ್ಟೊಂದು ಸುಳ್ಳು ಹೇಳಬಹುದೆಂದು ಈಗಿನ ಸರಕಾರ ನೋಡಿದ ಮೇಲೆಯೇ ನಮಗೆ ಗೊತ್ತಾಗಿರುವುದು. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಈಗಿನ ಸರಕಾರ ಮಾಡಿದಷ್ಟು ಅನ್ಯಾಯ ಮತ್ತೊಂದು ಸರಕಾರ ಮಾಡಲು ಸಾಧ್ಯವೇ ಇಲ್ಲವೆನ್ನುವಷ್ಟು ಆಗಿ ಹೋಗಿದೆ. ಆ ಭಾಗದ ಮುಗ್ಧ ಜನ ಏನೇ ಹೇಳಿದರೂ ಕೇಳುತ್ತಾರೆ ಎನ್ನುವ ಭ್ರಮೆಯೋ, ಸುಳ್ಳು ಹೇಳಿ ಬದುಕುವ ಕಲೆಯೋ ದೇವರೇ ಬಲ್ಲ. ಆದರೆ, ಆ ಪ್ರದೇಶ ಮಾತ್ರ ಕಲ್ಯಾಣವಾಗಲೇ ಇಲ್ಲ ಎನ್ನುವುದು ಸೂರ್ಯನಿರುವಷ್ಟೇ ಸತ್ಯ.

ಕರ್ನಾಟಕ ರಾಜ್ಯದಲ್ಲಿ ಹೈದರಾಬಾದ್ ಕರ್ನಾಟಕವೆಂಬ ಪ್ರದೇಶವು ರಾಜ್ಯದಲ್ಲಿಯೇ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವೆಂದು ಹಲವಾರು ವರದಿಗಳನ್ನು ಸರಕಾರವೇ ನೇಮಿಸಿದ ಹಲವು ಆಯೋಗಗಳು ಸರಕಾರಕ್ಕೆ ಸಲ್ಲಿಸಿವೆ. ಇತ್ತೀಚೆಗೆ ಒಕ್ಕೂಟ ಸರಕಾರದ ನೀತಿ ಆಯೋಗ ಗುರುತಿಸಿರುವ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿವೆ ಎನ್ನುವುದೇ ಸಾಕ್ಷಿಯಾಗಿವೆ. ಇದೇ ಕಾರಣಕ್ಕೆ ಹಿಂದಿನ ಸರಕಾರಗಳು ಈ ಪ್ರದೇಶವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತ ಬಂದಿವೆ. ಅದರಲ್ಲಿ ದಿ. ವೀರೇಂದ್ರ ಪಾಟೀಲ್‌ರವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ವಿಶೇಷ ಅನುದಾನ ನೀಡುವುದರ ಮೂಲಕ ಅಭಿವೃದ್ಧಿಗೆ ಪ್ರಯತ್ನ ಮಾಡಲಾಯಿತು, ಆನಂತರ ಎಸ್.ಎಂ. ಕೃಷ್ಣ ನೇತೃತ್ವದ ಸರಕಾರ ಪ್ರಾದೇಶಿಕ ಅಸಮತೋಲನ ಅಧ್ಯಯನ ಮಾಡಲು ಡಾ.ಡಿ.ಎಂ.ನಂಜುಂಡಪ್ಪನವರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಿ ಪಡೆದಂತಹ ವರದಿಯಲ್ಲಿಯೂ ಹೈದರಾಬಾದ್ ಕರ್ನಾಟಕ ಪ್ರದೇಶ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವೆಂದು ಅಂಕಿ ಅಂಶಗಳ ಸಹಿತ ಸಾಬೀತಾಯಿತು. ಮುಂದುವರಿದು ಡಾ. ಡಿ.ಎಂ. ನಂಜುಂಡಪ್ಪನವರ ವರದಿಯ ಶಿಫಾರಸಿನಂತೆ ವಿಶೇಷ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಯಿತು. ಕೇವಲ ಈ ಯೋಜನೆಗಳಿಂದ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಅಂದಿನ ಡಾ. ಮನಮೋಹನ್ ಸಿಂಗ್‌ರವರ ನೇತೃತ್ವದ ಯುಪಿಎ ಸರಕಾರದಲ್ಲಿ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರ ಪ್ರಯತ್ನದ ಫಲವಾಗಿ ಸಂವಿಧಾನದ ಅನುಚ್ಛೇದ 371ಜೆ ತಿದ್ದುಪಡಿ ಮಾಡಿ ವಿಶೇಷ ಸೌಲಭ್ಯ ನೀಡಿತು. ಅದರಂತೆ ರಾಜ್ಯದಲ್ಲಿ ಮುಂದೆ ಬಂದಂತಹ ಸಿದ್ದರಾಮಯ್ಯನವರ ನೇತೃತ್ವದ ಸರಕಾರ 2013ರಲ್ಲಿ 371ಜೆ ಅಡಿಯಲ್ಲಿ ವಿಶೇಷ ಕಾನೂನುಗಳನ್ನು ರಚಿಸಿ ಅನುಷ್ಠಾನಗೊಳಿಸುವ ಕೆಲಸ ಮಾಡಲಾಯಿತು. 2013ರಿಂದ 2019ರ ವರೆಗೆ ಹೈದರಾಬಾದ್ ಕರ್ನಾಟಕ ಪ್ರದೇಶದ ಯುವಕರಿಗೆ 371ಜೆ ಸೌಲಭ್ಯ ದೊರಕಿಸಿಕೊಡಲು ನಿರಂತರ ಪ್ರಯತ್ನ ಮಾಡಲಾಯಿತು, 371ಜೆ ಅಡಿಯಲ್ಲಿ ರಚಿಸಲಾದ ಕಾನೂನುಗಳು ದೇಶದಲ್ಲಿಯೇ ಹೊಸದಾಗಿ ಇರುವುದರಿಂದ ಸಮರ್ಪಕ ಅನುಷ್ಠಾನಗೊಳಿಸಲು ಮತ್ತು ಕಾಲಕಾಲಕ್ಕೆ ಅಗತ್ಯ ತಿದ್ದುಪಡಿಗೊಳಿಸಲು ಹಿರಿಯ ಸಚಿವರಾದ ಎಚ್.ಕೆ. ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಆ ಭಾಗದ ಸಂಘ-ಸಂಸ್ಥೆಗಳು, ವಿಚಾರವಂತರು, ಹೋರಾಟಗಾರರು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಲು ಪ್ರಯತ್ನ ಮಾಡಲಾಯಿತು. ಇದರಿಂದ ಆ ಭಾಗದ ಯುವಕರಿಗೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಮೀಸಲಾತಿ ಒದಗಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಮೆಡಿಕಲ್, ಇಂಜಿನಿಯರಿಂಗ್, ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವಂತಾಯಿತು, ಅಲ್ಲದೆ 30 ಸಾವಿರಕ್ಕೂ ಹೆಚ್ಚು ಸರಕಾರಿ ಹುದ್ದೆಗಳಿಗೆ ಆ ಅವಧಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಯಿತು. 371ಜೆ ಅಡಿಯಲ್ಲಿಯೇ ರಚಿಸಲಾದ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ವಿಶೇಷ ಅನುದಾನ ನೀಡುವುದರ ಮೂಲಕ ಆ ಭಾಗದ ಅಭಿವೃದ್ಧಿಗೆ ದಾರಿಮಾಡಿಕೊಡಲಾಯಿತು. ಸದರಿ ಮಂಡಳಿಯನ್ನು ಆ ಭಾಗದ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡುವ ನಿಯಮ ಮಾಡಲಾಯಿತು. ಇದರಿಂದ ಮಂಡಳಿಗೆ ಖದರು, ಗತ್ತು ಬಂದಿತ್ತು. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಮೊದಲ ವರ್ಷ 150 ಕೋಟಿ ರೂ.ಯಿಂದ ಪ್ರಾರಂಭಿಸಿ 5 ವರ್ಷಗಳಲ್ಲಿ 1,500 ಕೋಟಿ ರೂ. ಅನುದಾನವನ್ನು ಸದರಿ ಮಂಡಳಿಗೆ ನೀಡಿ, ಬೇಡಿಕೆಯನುಸಾರ ಪ್ರತೀ ವರ್ಷ ಮಂಡಳಿಗೆ ನೀಡುತ್ತಿದ್ದ ಅನುದಾನ ಹೆಚ್ಚಿಸುತ್ತಾ ಬರಲಾಯಿತು.

ಆದರೆ, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಬಂದ ನಂತರ ಹೈದರಾಬಾದ್ ಕರ್ನಾಟಕ ಪ್ರದೇಶವೆಂದು ಕರೆಯಲಾಗುತ್ತಿದ್ದ ಆ ಭಾಗವನ್ನು ‘ಕಲ್ಯಾಣ ಕರ್ನಾಟಕ’ವೆಂದು 2019ರಲ್ಲಿ ನಾಮಕರಣ ಮಾಡಿದ್ದು ಬಿಟ್ಟರೆ ಆ ಭಾಗವನ್ನು ಕಲ್ಯಾಣ ಮಾಡುವ ಯಾವ ಯೋಜನೆ, ಆಲೋಚನೆ ಸಹ ಮಾಡಿಲ್ಲ, ಅಲ್ಲದೆ 371ಜೆ ಅಡಿಯಲ್ಲಿ ಆ ಭಾಗದ ಜನರಿಗೆ ಸಿಗಬೇಕಾದ ಸೌಲಭ್ಯವನ್ನೇ ನೀಡಲು ಹಿಂದೇಟು ಹಾಕಿದೆ. ಇದರಿಂದ ಆ ಭಾಗದ ಯುವಕರು 371ಜೆ ಸೌಲಭ್ಯ ಸಿಕ್ಕರೂ ಪ್ರತಿಯೊಂದು ನೇಮಕಾತಿಯಲ್ಲಿ ಪರದಾಡುವಂತೆ ಮಾಡಿರುವ ಕೀರ್ತಿ ಈಗಿನ ಸರಕಾರಕ್ಕೆ ಸಲ್ಲುತ್ತದೆ. ಅಲ್ಲದೆ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ನಿಷ್ಕ್ರಿಯಗೊಳಿಸಿ, ಅದನ್ನು ದುರ್ಬಲಗೊಳಿಸಲು ಪ್ರಯತ್ನ ಮಾಡುತ್ತ, ಪರ್ಯಾಯವಾಗಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿ ಅದಕ್ಕೆ ಮಂಡಳಿಯಿಂದಲೇ ಸುಮಾರು 500 ಕೋಟಿ ರೂ. ಅನುದಾನ ನೀಡಿ ಆ ಭಾಗದ ಜನರಿಗೆ ಸಂಬಂಧವೇ ಇಲ್ಲದ ಕಾರ್ಯಮಾಡಲು ಅವಕಾಶ ನೀಡಿತು. ಮಂಡಳಿಯ ಯಾವುದೇ ನಿಯಮಗಳಲ್ಲಿ ಅವಕಾಶವಿಲ್ಲದಿದ್ದರೂ ಆ ಸಂಘಕ್ಕೆ ನಿಯಮ ಮೀರಿ ಅನುದಾನ ನೀಡಿದ್ದು ಈ ಸರಕಾರದ ಸಾಧನೆ ಎಂದೇ ಹೇಳಬಹುದು. ಬಿ.ಎಸ್.ಯಡಿಯೂರಪ್ಪನೇತೃತ್ವದ ಸರಕಾರ ಬಂದ ನಂತರ ಮೊದಲು ಒಂದುವರೆ ವರ್ಷ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಆಡಳಿತ ಮಂಡಳಿಯನ್ನೇ ನೇಮಿಸಲಿಲ್ಲ. ಇದರಿಂದ ಮಂಡಳಿಯ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಆನಂತರ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಿಸುವ ನಿಯಮವನ್ನು ಬದಲಾಯಿಸಿ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಿದರು. ಆದರೆ ಮಂಡಳಿಗೆ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ನೇಮಿಸದೆ ನಿರ್ಲಕ್ಷ್ಯ ಮಾಡಲಾಯಿತು. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ನೇಮಕವಾದ ನಂತರ ಸದರಿ ಮಂಡಳಿಗೆ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸಿ ಆದೇಶಿಸಲಾಗಿದೆ. ಅಲ್ಲದೆ ಸದರಿ ಮಂಡಳಿಗೆ ಇದ್ದಂತಹ 1,500 ಕೋಟಿ ರೂ. ಅನುದಾನವನ್ನು 3,000 ಕೋಟಿ ರೂ. ಗೆ ಹೆಚ್ಚಿಸಿದ್ದೇನೆ ಎಂದು ಘಂಟಾಘೋಷವಾಗಿ ಸುಳ್ಳು ಮಾಹಿತಿ ಕೊಟ್ಟಿರುವುದಷ್ಟೇ ಬಸವರಾಜ ಬೊಮ್ಮಾಯಿಯವರ ಸಾಧನೆ. ಆದರೆ, ವಾಸ್ತವವಾಗಿ ಕಳೆದ 5 ವರ್ಷಗಳಲ್ಲಿ ಸದರಿ ಮಂಡಳಿಗೆ ಒಂದು ನಯಾಪೈಸೆ ಅನುದಾನ ಹೆಚ್ಚಿಸಿರುವುದಿಲ್ಲ, ಇಂದಿಗೂ 1,500 ಕೋಟಿ ರೂ. ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿಯವರು ಮಂಡಳಿಯಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ 3,000 ಕೋಟಿ ರೂ. ಅನುದಾನವನ್ನು 5,000 ಕೋಟಿ ರೂ. ಗೆ ಹೆಚ್ಚಿಸುತ್ತೇನೆ ಎಂದು ಮತ್ತೊಂದು ಸುಳ್ಳು ಭರವಸೆ ನೀಡಿದ್ದಾರೆ.

ಅಲ್ಲದೆ 371ಜೆ ಅಡಿಯಲ್ಲಿ ರಚಿಸಲಾದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಆ ಭಾಗದ ಜನರನ್ನು ವಂಚಿಸುವ ಕೆಲಸ ಕಳೆದ ನಾಲ್ಕು ವರ್ಷಗಳಿಂದ ಮಾಡುತ್ತ ಬರಲಾಗಿದೆ, ಒಂದು ಸರಕಾರ ತನ್ನದೇ ರಾಜ್ಯದ ಜನರಿಗೆ ಸಿಗಬೇಕಾದ ಸೌಲಭ್ಯವನ್ನು ನಿರಂಕುಶವಾಗಿ ತಪ್ಪಿಸುತ್ತ ಬಂದಿರುವುದು ಅಕ್ಷಮ್ಯ ಅಪರಾಧ ಮತ್ತು ಕಾನೂನುಬಾಹಿರವೆಂದೇ ಹೇಳಬೇಕಾಗುತ್ತದೆ. ಮೊದಲನೆಯದಾಗಿ ಆ ಭಾಗದ ಅಭಿವೃದ್ಧಿ ವಿರೋಧಿ ಮನಸ್ಥಿತಿ ಇರುವ ಸಚಿವರನ್ನು 371ಜೆ ಅನುಷ್ಠಾನಕ್ಕಾಗಿ ಇರುವ ಸಚಿವ ಸಂಪುಟ ಉಪಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು, ಈಗಿರುವ ಬಿ. ಶ್ರೀರಾಮುಲು ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ರಚಿಸಿದಾಗಿನಿಂದ 371ಜೆ ಅಡಿಯಲ್ಲಿ ಅನುಷ್ಠಾನ ಮಾಡುವುದಿರಲಿ, ಅವರ ಬಹುತೇಕ ನಿರ್ಣಯಗಳು ಆ ಭಾಗದ ಬೆಳವಣಿಗೆಯ ವಿರುದ್ಧವಾಗಿಯೇ ಇವೆ. 371ಜೆ ನಿಯಮಗಳಲ್ಲಿ ಆರ್ಥಿಕ ಇಲಾಖೆಯ ಪೂರ್ವಾನುಮತಿ ಇದೆಯೆಂದು ಭಾವಿಸಿ ನೇಮಕಾತಿ ಪ್ರಾಧಿಕಾರಗಳು ನೇಮಕಾತಿ ಅಧಿಸೂಚನೆ ಹೊರಡಿಸಲು ಇರುವ ಅವಕಾಶಕ್ಕೆ ತಡೆಯಾಜ್ಞೆ ವಿಧಿಸಿ, ನಿಯಮಗಳಲ್ಲಿ ಅವಕಾಶವಿಲ್ಲದಿದ್ದರೂ 371ಜೆ ಅಡಿಯಲ್ಲಿ ಯಾವುದೇ ನೇಮಕಾತಿ ಮಾಡಬಾರದೆಂದು ಆರ್ಥಿಕ ಇಲಾಖೆಯಿಂದ 2020ರಲ್ಲಿ ಆದೇಶ ಹೊರಡಿಸಿ 371ಜೆ ನಿಯಮಕ್ಕೆ ವಿರುದ್ಧವಾದ ನಿಲುವು ತಳೆದು ಆ ಭಾಗದ ಯುವಕರಿಗೆ ಉದ್ಯೋಗ ಸಿಗದಂತೆ ಮಾಡಲಾಯಿತು. 2020ರಲ್ಲಿ ದೇಶವೇ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ಗೊಳಗಾಗಿತ್ತು, ಅಂತಹ ಸಂದರ್ಭದಲ್ಲಿ ಸರಕಾರಕ್ಕೆ ಮಾಡಲು ಸಾಕಷ್ಟು ಕೆಲಸ ಇರುವ ತುರ್ತು ಸಂದರ್ಭದಲ್ಲಿ ಆ ಭಾಗದ ಯುವಕರಿಗೆ ಅನ್ಯಾಯವಾಗುವ ರೀತಿಯಲ್ಲಿ 06-06-2020ರಂದು ಒಂದು ಅಧಿಸೂಚನೆ ಹೊರಡಿಸಿ ಎಲ್ಲಾ ನೇಮಕಾತಿ ಪ್ರಕ್ರಿಯೆಗಳು ದಾರಿತಪ್ಪುವ ರೀತಿ ಮಾಡಲಾಯಿತು. ಇದರ ಬಗ್ಗೆ ಆ ಭಾಗದ ಶಾಸಕರು, ಹೋರಾಟಗಾರರು, ನಿರುದ್ಯೋಗಿ ಯುವಕರು ಎಷ್ಟೇ ಪ್ರಯತ್ನ ಮಾಡಿದರೂ ಸರಕಾರ ನಿಯಮಗಳನ್ನು ಬದಲಾವಣೆ ಮಾಡಲು ಒಪ್ಪದೆ ಕುಂಟು ನೆಪಹೇಳುತ್ತ ಕಾಲಹರಣ ಮಾಡುತ್ತಿರುವುದು ಆ ಭಾಗದ ನಿರುದ್ಯೋಗಿ ಯುವಕರಿಗೆ ಅಸಮಾಧಾನ ತಂದಿರುವುದು ಸ್ಪಷ್ಟ. ಸಚಿವ ಸಂಪುಟ ಉಪಸಮಿತಿ ಕಾಲಕಾಲಕ್ಕೆ ತೆಗೆದುಕೊಂಡ ವ್ಯತಿರಿಕ್ತ ನಿರ್ಣಯಗಳಿಂದ ಬಹುತೇಕ ನೇಮಕಾತಿ ಪ್ರಾಧಿಕಾರಗಳು ಗೊಂದಲಕ್ಕೊಳಗಾಗಿ ಯಾವ ನಿಯಮಗಳನ್ನು ಅನುಸರಿಸಬೇಕೆಂದು ತಿಳಿಯದೆ ಯದ್ವಾತದ್ವಾ ಆಯ್ಕೆಪಟ್ಟಿಗಳನ್ನು ಬಿಡುಗಡೆಗೊಳಿಸಿದ್ದರಿಂದ ಬಹುತೇಕ ನೇಮಕಾತಿ ಪ್ರಕ್ರಿಯೆಗಳು ನ್ಯಾಯಾಲಯದ ಕಟಕಟೆ ಏರಿದ್ದು, ಇದರಿಂದ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿವೆ.

ಆ ಭಾಗದಲ್ಲಿ ಸುಮಾರು 45ರಿಂದ 50 ಸಾವಿರ ಹುದ್ದೆಗಳನ್ನು ಖಾಲಿ ಬಿಟ್ಟು, ಒಂದು ಪ್ರದೇಶ ಅಭಿವೃದ್ಧಿಯಾಗಲು ಸಾಧ್ಯವೇ ಎನುವುದನ್ನು ಅರಿಯದೆ, ಕಳೆದ ನಾಲ್ಕು ವರ್ಷಗಳಲ್ಲಿ 371ಜೆ ಅಡಿಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿರುವ ಸುಮಾರು 12 ಸಾವಿರ ಹುದ್ದೆಗಳು ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸಮರ್ಪಕ ಪರೀಕ್ಷೆ ನಡೆಸಲು ಸಾಧ್ಯವಾಗದೆ ಕೇವಲ ಅರ್ಜಿ ಹಾಕಲು ಮಾತ್ರಕ್ಕೆ ಸಿಮೀತವಾಗಿವೆ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಆ ಭಾಗದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತ್ವರಿತಗತಿಯಲ್ಲಿ ಭರ್ತಿ ಮಾಡಲು ನಿರ್ಣಯ ಮಾಡಿತ್ತು. ಅದರಂತೆ ಸುಮಾರು 30 ಸಾವಿರ ಹುದ್ದೆಗಳನ್ನು ಕೇವಲ ನಾಲ್ಕು ವರ್ಷಗಳಲ್ಲಿ ಭರ್ತಿ ಮಾಡಿತ್ತು. ಆದರೆ ಈಗಿನ ಸರಕಾರ ಅದನ್ನು ಮುಂದುವರಿಸುವ ಬದಲಾಗಿ ಆ ನಿರ್ಣಯವನ್ನು ನನೆಗುದಿಗೆ ತಳ್ಳಿ ಕಾಲಹರಣ ಮಾಡುತ್ತಿರುವುದು ಖಂಡನೀಯವಾದದ್ದು.

ಅಲ್ಲದೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನವನ್ನೂ ಸರಕಾರ ಹಿಂಪಡೆದಿರುವುದು ರಾಜ್ಯದ ಜನರಿಗೆ ಗೊತ್ತಾಗಲೇ ಇಲ್ಲ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ರಚಿಸಲಾದ ವಿಶೇಷ ಅಭಿವೃದ್ಧಿ ಯೋಜನೆಯನ್ನು ಹಿಂಪಡೆದಿರುವುದು ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸುಮಾರು 114 ತಾಲೂಕುಗಳ ಶಾಸಕರು ಚಕಾರ ಎತ್ತದೆ ಇರುವುದು ಈ ತಾಲೂಕುಗಳ ಶಾಸಕರ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದೆ. ಡಾ. ಡಿ.ಎಂ. ನಂಜುಂಡಪ್ಪನವರ ವರದಿಯ ವಿಶೇಷ ಅಭಿವೃದ್ಧಿ ಯೋಜನೆಯಿಂದ ಏನೂ ಬದಲಾವಣೆ ಆಗಿಲ್ಲ ಎಂದು ಸಬೂಬು ಹೇಳುವ ಸರಕಾರ ಅದಕ್ಕೆ ಪರ್ಯಾಯ ಮಾನದಂಡ ಸೂಚಿಸದೆ ಕೇವಲ ನೀತಿ ಆಯೋಗವನ್ನು ನಂಬಿಕೊಂಡು ಕೂತಿರುವುದು ಈ ಸರಕಾರಕ್ಕೆ ಹಿಂದುಳಿದ ಪ್ರದೇಶಗಳ ಬಗ್ಗೆ ಇರುವ ಬದ್ಧತೆ ಮತ್ತು ಕಾಳಜಿ ಎಷ್ಟಿದೆಯೆಂದು ಸೂಚಿಸುತ್ತದೆ.

ಒಂದು ಪಕ್ಷ, ಒಂದು ಸಂಘಟನೆ, ಒಬ್ಬ ವ್ಯಕ್ತಿ ಸುಳ್ಳು ಹೇಳುವುದು ನಾವು ಸಾಕಷ್ಟು ಸಲ ಕಂಡಿದ್ದೇವೆ, ಆದರೆ ಒಂದು ಸರಕಾರ, ಒಬ್ಬ ಮುಖ್ಯಮಂತ್ರಿ, ಸಚಿವರು ಪದೇ ಪದೇ ಇಷ್ಟೊಂದು ಸುಳ್ಳು ಹೇಳಬಹುದೆಂದು ಈಗಿನ ಸರಕಾರ ನೋಡಿದ ಮೇಲೆಯೇ ನಮಗೆ ಗೊತ್ತಾಗಿರುವುದು. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಈಗಿನ ಸರಕಾರ ಮಾಡಿದಷ್ಟು ಅನ್ಯಾಯ ಮತ್ತೊಂದು ಸರಕಾರ ಮಾಡಲು ಸಾಧ್ಯವೇ ಇಲ್ಲವೆನ್ನುವಷ್ಟು ಆಗಿ ಹೋಗಿದೆ. ಆ ಭಾಗದ ಮುಗ್ಧ ಜನ ಏನೇ ಹೇಳಿದರೂ ಕೇಳುತ್ತಾರೆ ಎನ್ನುವ ಭ್ರಮೆಯೋ, ಸುಳ್ಳು ಹೇಳಿ ಬದುಕುವ ಕಲೆಯೋ ದೇವರೇ ಬಲ್ಲ. ಆದರೆ, ಆ ಪ್ರದೇಶ ಮಾತ್ರ ಕಲ್ಯಾಣ ವಾಗಲೇ ಇಲ್ಲ ಎನ್ನುವುದು ಸೂರ್ಯನಿರುವಷ್ಟೇ ಸತ್ಯ.

Similar News