ಉಡುಪಿ: ಕಡೆಂಗೋಡ್ಲು ಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ

Update: 2023-01-11 13:30 GMT

ಉಡುಪಿ: ನಾಡಿನ ಹಿರಿಯ ಕವಿ, ಲೇಖಕ, ಪತ್ರಕರ್ತರಾಗಿದ್ದ  ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ 1978ರಲ್ಲಿ ಸ್ಥಾಪಿತವಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಈ ವರ್ಷ ಉದಯೋನ್ಮುಖ ಕನ್ನಡದ ಕವಿಗಳಿಂದ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನಗಳನ್ನು ಕಳುಹಿಸಲು ಮಾರ್ಚ್ 15 ಕೊನೆಯ ದಿನವಾಗಿದೆ. ಕವನಗಳನ್ನು ಕಳುಹಿಸಬೇಕಾದ ವಿಳಾಸ: ಆಡಳಿತಾಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂಜಿಎಂ ಕಾಲೇಜು ಆವರಣ, ಉಡುಪಿ-576102.

ಕಾವ್ಯ ಪ್ರಕಟನೆಗೆ ನೆರವು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ 10,000ರೂ.ಗಳ ಒಂದು ವಾರ್ಷಿಕ ಬಹುಮಾನವನ್ನು ನೀಡಲಾಗುತ್ತದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ, 50ಕ್ಕಿಂತ ಹೆಚ್ಚಿಲ್ಲದ  ಕನ್ನಡ ಕವಿತೆಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದೆ. 

ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗೆ - https://govindapairesearch.blogspot.com-   ಬ್ಲಾಗ್ ಅಥವಾ ದೂರವಾಣಿ  ಸಂಖ್ಯೆ:  9448868868/ 9480575783; ಕಛೇರಿ: 0820-2521159ನ್ನು ಸಂಪರ್ಕಿಸಬಹುದು ಎಂದು ಅದು ಹೇಳಿದೆ. 

ಸ್ಪರ್ಧೆಯ ನಿಯಮಗಳು: ಕಳೆದ ಐದು ವರ್ಷಗಳಲ್ಲಿ ಬರೆದ ಕನ್ನಡ ಕವಿತೆಗಳು, ಬಿಡಿಯಾಗಿ ಪತ್ರಿಕೆಗಳಲ್ಲಿ ಪೂರ್ವ ಪ್ರಕಟಿತವಾದುವು ಇರ ಬಹುದು, ಹೊಸದಾಗಿ ರಚಿತವಾದುವೂ ಇರಬಹುದು. ಕವನ ಸಂಕಲನದಲ್ಲಿ ಕನಿಷ್ಠ 40 ಕವನಗಳು ಇರಲೇ ಬೇಕು. ಸ್ಪರ್ಧೆಗೆ ಕಳುಹಿಸಿದ ಕವನಗಳು ಯಾವುದೇ ಕವನಸಂಕಲನದಲ್ಲಿ ಈ ಮೊದಲು ಪ್ರಕಟಗೊಂಡಿರಬಾರದು. ಸ್ಪರ್ಧೆಯಲ್ಲಿ ಭಾಗವಹಿಸುವವರ ಹೆಸರು ಮತ್ತು ವಿಳಾಸಗಳು ಪ್ರತ್ಯೇಕ ಹಾಳೆಯಲ್ಲಿರಬೇಕು ಎಂದು ತಿಳಿಸಿದೆ. 

ಲೇಖಕರು ತಮ್ಮ ಕವನಗಳ ಸಂಗ್ರಹದ ಒಂದು ನಕಲು ಪ್ರತಿಯನ್ನು (ಬೆರಳಚ್ಚು ಮಾಡಿದ) ಮಾರ್ಚ್ 15ರ ಒಳಗೆ ಸಮಿತಿಯ ವಿಳಾಸಕ್ಕೆ ಕಳುಹಿಸ ಬೇಕು. ಮೇ ತಿಂಗಳಲ್ಲಿ ಸಮಿತಿಯ ನಿರ್ಣಯ ಹೊರಬೀಳಲಿದೆ. ಬಹುಮಾನ ಕ್ಕಾಗಿ ಆಯ್ಕೆಯಾದ ಕವನ ಸಂಕಲನವವನ್ನು- ಡೆಮ್ಮಿ 1/8, 1/12 ಅಥವಾ 1/8 ಆಕಾರದಲ್ಲಿ ಮುದ್ರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Similar News