ನಗರಾಭಿವೃದ್ಧಿ ಯೋಜನೆಗಳಿಂದ ಪರಿಸರ ಪರಿಣಾಮದ ಮೌಲ್ಯಮಾಪನ ನಡೆಸಲು ಸುಪ್ರೀಂ ಕೋರ್ಟ್ ಆಗ್ರಹ

Update: 2023-01-11 17:08 GMT

ಹೊಸದಿಲ್ಲಿ,ಜ.11: ಅವ್ಯವಸ್ಥಿತ ನಗರಾಭಿವೃದ್ಧಿಯಿಂದಾಗಿ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಗಮನಕ್ಕೆ ತೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯಗಳಿಗೆ ಸೂಚಿಸಿದೆ.

ನಗರಾಭಿವೃದ್ಧಿ ಯೋಜನೆಗೆ ಅನುಮತಿ ನೀಡುವ ಮುನ್ನ ಪರಿಸರ ಪರಿಣಾಮ ಮೌಲ್ಯಮಾಪನ ಅಧ್ಯಯನಗಳನ್ನು ನಡೆಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ನಿಬಂಧನೆಗಳನ್ನು ರೂಪಿಸುವಂತೆಯೂ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಅಧಿಕಾರಿಗಳನ್ನು ಆಗ್ರಹಿಸಿದೆ.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನಾ ಅವರ ಪೀಠವು ಚಂಡಿಗಡದಲ್ಲಿ ಏಕ ವಸತಿ ಘಟಕಗಳನ್ನು ಅಪಾರ್ಟ್‌ಮೆಂಟ್‌ಗಳಾಗಿ ಬದಲಿಸುವ ಪರಿಪಾಠದ ವಿರುದ್ಧ ನಿವಾಸಿಗಳ ಕಲ್ಯಾಣ ಸಂಘವೊಂದು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡಿತ್ತು.ಅರ್ಜಿಯು ಚಂಡಿಗಡದ ಉತ್ತರ ಭಾಗದ ಸೆಕ್ಟರ್‌ಗಳಲ್ಲಿ ಮನೆಗಳ ಪಾಲು-ವಾರು ಅಥವಾ ಅಂತಸ್ತು-ವಾರು ಮಾರಾಟಕ್ಕೆ ಅವಕಾಶವನ್ನು ನೀಡಿರುವ ಪಂಜಾಬ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ 2021ರ ಆದೇಶವನ್ನು ಪ್ರಶ್ನಿಸಿದೆ. ಇಂತಹ ನಿರ್ಮಾಣಗಳು ಚಂಡಿಗಡದ ಸ್ವರೂಪವನ್ನು ಬದಲಿಸಿವೆ ಮತ್ತು ಅದರ ಹಾಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳ ಮೇಲೆ ಹೊರೆಯನ್ನು ಹೆಚ್ಚಿಸಿವೆ ಎಂದು ಅದು ಆರೋಪಿಸಿದೆ.

ಅರ್ಜಿಗೆ ಸ್ಪಂದಿಸಿದ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಚಂಡಿಗಡದ ಹಂತ 1ರಲ್ಲಿ ವಸತಿ ಘಟಕಗಳ ವಿಘಟನೆಯನ್ನು ನಿಷೇಧಿಸಿದೆ. ಹಂತ 1ರಲ್ಲಿಯ ಕಟ್ಟಡಗಳಲ್ಲಿ ಅಂತಸ್ತುಗಳ ಸಂಖ್ಯೆಯನ್ನು ಮೂರಕ್ಕೆ ನಿರ್ಬಂಧಿಸಬೇಕು ಮತ್ತು ನಗರದ ಪರಂಪರೆ ಸಮಿತಿಯು ಸೂಕ್ತವೆಂದು ಪರಿಗಣಿಸಿರುವ ಏಕರೂಪ ಗರಿಷ್ಠ ಎತ್ತರವನ್ನು ಕಾಯ್ದುಕೊಳ್ಳಬೇಕು ಎಂದು ಅದು ಹೇಳಿದೆ.

ನಿರ್ಮಾಣ ಕಾಮಗಾರಿಗಳಿಂದಾಗಿ ಉತ್ತರಾಖಂಡದಲ್ಲಿ ಸಂಭವಿಸುತ್ತಿರುವ ಭೂಕುಸಿತಗಳನ್ನು ಉಲ್ಲೇಖಿಸಿದ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಬೆಂಗಳೂರು ನಗರದಲ್ಲಿ ನೆರೆಯ ಸಂದರ್ಭ ಸಮಸ್ಯೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸಿದ್ದ ಯೋಜಿತವಲ್ಲದ ನಗರಾಭಿವೃದ್ಧಿಯನ್ನೂ ಗಮನಕ್ಕೆ ತೆಗೆದುಕೊಂಡಿತು.

ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ರಕ್ಷಣೆಯ ನಡುವೆ ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

Similar News