RRR ಸಿನಿಮಾ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇನೆಂದಿದ್ದ BJP ಸಂಸದನಿಂದಲೇ ಚಿತ್ರ ತಂಡಕ್ಕೆ ಅಭಿನಂದನೆ

Update: 2023-01-11 18:31 GMT

ಹೈದರಾಬಾದ್: RRR ಸಿನಿಮಾ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇನೆ ಎಂದು ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿಗೆ ಬೆದರಿಕೆ ಒಡ್ಡಿದ್ದ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕರೀಂನಗರ ಸಂಸದ ಬಂಡಿ ಸಂಜಯ್ ಕುಮಾರ್, RRR ಚಿತ್ರ ತಂಡ ಐತಿಹಾಸಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಭಾಜನವಾದ ನಂತರ ಚಿತ್ರತಂಡವನ್ನು ಅಭಿನಂದಿಸಿದ್ದಾರೆ.

ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯ ಅತ್ಯುತ್ತಮ ಸ್ವಂತ ಗೀತೆ ವಿಭಾಗದಲ್ಲಿ RRR ಚಿತ್ರದ 'ನಾಟು, ನಾಟು' ಗೀತೆ ಅತ್ಯುತ್ತಮ ಗೀತೆ ಪ್ರಶಸ್ತಿಗೆ ಭಾಜನವಾದ ಬೆನ್ನಿಗೇ ಟ್ವೀಟ್ ಮಾಡಿರುವ ಸಂಸದ, "@goldenglobes ಪ್ರಶಸ್ತಿಯನ್ನು ಅತ್ಯುತ್ತಮ ಸ್ವಂತ ಗೀತೆಗಾಗಿ #NatuNatu ಗೀತೆ ಪಡೆದಿರುವುದಕ್ಕೆ @mmkeeravaani ಮತ್ತು @RRRMovie ಚಿತ್ರತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು. ನೀವು ಈ ಐತಿಹಾಸಿಕ ಸಾಧನೆಯಿಂದ ವಿಶ್ವ ವೇದಿಕೆಯಲ್ಲಿ ಭಾರತಕ್ಕೆ ಹೆಮ್ಮೆ ಮೂಡಿಸಿದ್ದೀರಿ" ಎಂದಿದ್ದಾರೆ.

ಇದಕ್ಕೂ ಮುನ್ನ, ನವೆಂಬರ್ 2020ರಲ್ಲಿ ನಿರ್ದೇಶಕ ರಾಜಮೌಳಿ 'ಚಾರಿತ್ರಿಕ ಸತ್ಯಗಳನ್ನು ವಿರೂಪಗೊಳಿಸಿದ್ದಾರೆ' ಎಂದು ಆರೋಪಿಸಿ, RRR ಸಿನಿಮಾ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಲಾಗುವುದು ಎಂದು ಸಂಸದ ಬಂಡಿ ಸಂಜಯ್ ಜುಮಾರ್ ಬೆದರಿಕೆ ಒಡ್ಡಿದ್ದರು. "ಕೇವಲ ರೋಚಕತೆಗಾಗಿ ಒಂದು ವೇಳೆ ರಾಜಮೌಳಿ ಕೋಮರಂ ಭೀಮ್ ತಲೆ ಮೇಲೆ ಟೋಪಿ ಹಾಕಿಸಿದರೆ ನಾವು ಸುಮ್ಮನೆ ಕೂರಬೇಕೇ? ಖಂಡಿತ ಇಲ್ಲ" ಎಂದು ಅವರು ಕಿಡಿ ಕಾರಿದ್ದರು.

ಜೂನಿಯರ್ NTR ನಿರ್ವಹಿಸಿದ್ದ ಕೋಮರಂ ಭೀಮ್ ಪಾತ್ರದಲ್ಲಿ ಅವರು ಮುಸ್ಲಿಮರ ಸಾಂಪ್ರದಾಯಿಕ ದಿರಿಸಿನಲ್ಲಿ ಕಾಣಿಸಿಕೊಂಡಿರುವ ದೃಶ್ಯವನ್ನು ಕೈಬಿಡಬೇಕು ಎಂದು ಅವರು ಚಿತ್ರ ನಿರ್ಮಾಪಕರನ್ನು ಆಗ್ರಹಿಸಿದ್ದರು. ಆದರೆ, ಚಿತ್ರ ನಿರ್ಮಾಣವನ್ನು ಪ್ರಕಟಿಸಿದ್ದ ನಿರ್ದೇಶಕ ಎಸ್‌.ಎಸ್.ರಾಜಮೌಳಿ, ಚಿತ್ರವು ದಂತಕತೆಯಾದ ಇಬ್ಬರು ಬುಡಕಟ್ಟು ನಾಯಕರಾದ ಕೋಮರಂ ಭೀಮ್ ಹಾಗೂ ಅಲ್ಲುರಿ ಸೀತಾರಾಮ್ ರಾಜ್ ಕತೆಯನ್ನು ಆಧರಿಸಿದ್ದರೂ, ಅದು ಜೀವನಕತೆಯಲ್ಲ ಎಂದು ಸ್ಪಷ್ಟನೆ ನೀಡಿದ್ದರು ಎಂದು ವರದಿಯಾಗಿತ್ತು.

ಇದನ್ನೂ ಓದಿ: ಭಾರತದಲ್ಲಿ ಬದುಕಲು ಮುಸ್ಲಿಮರಿಗೆ 'ಅನುಮತಿ' ನೀಡಲು ಮೋಹನ್‌ ಭಾಗ್ವತ್‌ ಯಾರು: ಉವೈಸಿ ವಾಗ್ದಾಳಿ

Similar News