ವಿವೇಕಾನಂದರು ತೋರಿದ ಹಾದಿ
ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ
ವಿವೇಕಾನಂದರ ಚಿಕಾಗೋ ಭಾಷಣದಲ್ಲಿ ಎಲ್ಲ ಧರ್ಮಗಳನ್ನು ಪ್ರೀತಿಸಬೇಕೆಂಬ ಸಂದೇಶವಿತ್ತು. ವಿಜ್ಞಾನದ ಜೊತೆಜೊತೆಗೇ ಆಚರಣೆಗಳ ಮಹತ್ವ ಮತ್ತು ಅವಶ್ಯಕತೆಗಳನ್ನು ತಿಳಿದು ಕೊಳ್ಳುವುದರ ಬಗ್ಗೆ ತಿಳಿಸುವ ಆಪ್ತತೆ ಇತ್ತು.
‘‘ಅಮೆರಿಕದ ನನ್ನ ಸಹೋದರ ಸಹೋದರಿಯರೇ’’
1893ರ ಸೆಪ್ಟಂಬರ್ 11ರಂದು ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಭಾಷಣವು ಹೀಗೆ ಶುರುವಾದಾಗ ಸಭಿಕರು ನಿಬ್ಬೆರಗಾದರು, ಸ್ತಂಭೀಭೂತರಾದರು. ಬಳಿಕ ಅವರ ಈ ಭಾಷಣ ಇಡೀ ಜಗತ್ತಿನಲ್ಲೇ ಮನೆಮಾತಾಯಿತು ಎಂಬುದು ಇತಿಹಾಸ. ಹಾಗೆ ಜಗತ್ತನ್ನೇ ತನ್ನೆಡೆಗೆ ಸೆಳೆದ ಮಹಾ ತೇಜಸ್ವಿ ಸ್ವಾಮಿ ವಿವೇಕಾನಂದರು.
ಅಂದು ಪ್ರತಿಯೊಬ್ಬರ ಮನಸ್ಸನ್ನು ಮುದಗೊಳಿಸಿದ ಭಾಷಣದಲ್ಲಿ, ಸ್ವಾಮಿ ವಿವೇಕಾನಂದರು ಜೀವನದಲ್ಲಿ ಅನುಸರಿಸ ಬೇಕಾದ ಮೂಲಭೂತ ಮತ್ತು ಪ್ರಮುಖವಾದ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಅವರ ಭಾಷಣದಲ್ಲಿ ಎಲ್ಲ ಧರ್ಮಗಳನ್ನು ಪ್ರೀತಿಸಬೇಕೆಂಬ ಸಂದೇಶವಿತ್ತು. ವಿಜ್ಞಾನದ ಜೊತೆಜೊತೆಗೇ ಆಚರಣೆಗಳ ಮಹತ್ವ ಮತ್ತು ಅವಶ್ಯಕತೆಗಳನ್ನು ತಿಳಿದುಕೊಳ್ಳುವುದರ ಬಗ್ಗೆ ತಿಳಿಸುವ ಆಪ್ತತೆ ಇತ್ತು.
‘‘ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮಕ್ಕೆ ಸೇರಿದವನು ಎಂದು ನಾನು ಹೆಮ್ಮೆಪಡುತ್ತೇನೆ. ನಾವು ನಂಬುವುದು ಸಾರ್ವತ್ರಿಕ ಸಹಿಷ್ಣುತೆಯನ್ನಷ್ಟೇ ಅಲ್ಲ. ಎಲ್ಲಾ ಧರ್ಮಗಳನ್ನು ಸತ್ಯವೆಂದು ಒಪ್ಪಿಕೊಳ್ಳುತ್ತೇವೆ. ಎಲ್ಲಾ ಧರ್ಮಗಳ ಮತ್ತು ಭೂಮಿಯ ಎಲ್ಲಾ ರಾಷ್ಟ್ರಗಳ ಕಿರುಕುಳಕ್ಕೊಳಗಾದ ಮತ್ತು ನಿರಾಶ್ರಿತರಿಗೆ ಆಶ್ರಯ ನೀಡಿದ ರಾಷ್ಟ್ರಕ್ಕೆ ಸೇರಿದವನಾಗಿದ್ದೇನೆ ಎಂದು ನಾನು ಹೆಮ್ಮೆಪಡುತ್ತೇನೆ’’ ಎಂದು ಅವರು ಅಂದು ತಮ್ಮ ಭಾಷಣದಲ್ಲಿ ಹೇಳಿದ್ದರು.
‘‘ರೋಮನ್ ದಬ್ಬಾಳಿಕೆಯಿಂದ ಅವರ ಪವಿತ್ರ ದೇವಾಲಯವು ಛಿದ್ರಗೊಂಡ ವರ್ಷವೇ ದಕ್ಷಿಣ ಭಾರತಕ್ಕೆ ಬಂದು ನಮ್ಮೆಂದಿಗೆ ಆಶ್ರಯ ಪಡೆದ ಇಸ್ರೇಲಿಗಳನ್ನು ನಮ್ಮೆದೆಯೊಳಗಿಟ್ಟು ಕಾಪಾಡಿದವರು ನಾವೆಂದು ಹೇಳಲು ಹೆಮ್ಮೆಪಡುತ್ತೇನೆ. ಭವ್ಯವಾದ ರೆರಾಸ್ಟ್ರಿಯನ್ ರಾಷ್ಟ್ರದ ನಿರಾಶ್ರಿತರಿಗೆ ಆಶ್ರಯ ನೀಡಿದ ಮತ್ತು ಇನ್ನೂ ಪೋಷಿಸುತ್ತಿರುವ ಧರ್ಮಕ್ಕೆ ಸೇರಿದವನು ಎಂದು ನಾನು ಹೆಮ್ಮೆಪಡುತ್ತೇನೆ’’ ಎಂದಿದ್ದರು.
‘‘ನದಿಗಳು ಬೇರೆ ಬೇರೆ ಕಡೆ ಹುಟ್ಟಿ ಹರಿದರೂ ಕಡೆಗೆ ಎಲ್ಲವೂ ಸೇರುವುದು ಸಮುದ್ರವನ್ನೇ. ಹಾಗೆಯೇ ಓ ಕರ್ತನೇ, ವಿವಿಧ ಪ್ರವೃತ್ತಿಗಳ ಮೂಲಕ ಮನುಷ್ಯರು ಹಿಡಿಯುವ ಮಾರ್ಗಗಳು ವಿಭಿನ್ನವಾಗಿದ್ದರೂ, ವಕ್ರವಾಗಿ ಅಥವಾ ನೇರವಾಗಿ, ಎಲ್ಲವೂ ನಿನ್ನ ಕಡೆಗೇ ಅವರೆಲ್ಲರನ್ನೂ ಕರೆದೊಯ್ಯುತ್ತವೆ’’ ಎಂಬ ಮಾತನ್ನು ಅವರು ಅಂದು ಉಲ್ಲೇಖಿಸಿದ್ದರು.
ವಿವೇಕಾನಂದರು ಆ ಭಾಷಣ ಮಾಡಿ 129 ವರ್ಷಗಳಾಗಿವೆ. ಆದರೂ ಅದಿನ್ನೂ ಎಷ್ಟೋ ಮನಸ್ಸುಗಳನ್ನು ಬೆರಗುಗೊಳಿಸುತ್ತಲೇ ಇದೆ. ಇಂದಿನ ಅಸಹಿಷ್ಣುತೆ ಮನೋಭಾವ ದಿಕ್ಕೆಟ್ಟಿರುವ ದಿನಗಳಲ್ಲಿ ವಿವೇಕಾನಂದರ ನಡೆ ಮತ್ತು ನಿಲುವು ನಿಜ ಅರ್ಥದಲ್ಲಿ ಬಳಕೆಯಾಗದೆ, ಅವರ ಹೆಸರನ್ನು ರಾಜಕೀಯವಾಗಿ ಬಳಸುವ ಬಗೆ ಮಾತ್ರವೇ ಕಾಣಿಸುತ್ತಿರುವುದು ವಿಪರ್ಯಾಸ. ಅವರು ಧರ್ಮವನ್ನು ಯಾವ ದೃಷ್ಟಿಕೋನದಲ್ಲಿ ಕಂಡಿದ್ದರು ಎಂಬುದನ್ನು ಮರೆಯಲಾಗುತ್ತಿದೆ, ಮರೆಸಲಾಗುತ್ತಿದೆ.
18ನೇ ಶತಮಾನದಲ್ಲಿ ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ ಸ್ವಾಮಿ ವಿವೇಕಾನಂದರು. ಕೋಲ್ಕತಾದಲ್ಲಿ ಬಂಗಾಳಿ ಮನೆತನದಲ್ಲಿ 1863ರ ಜನವರಿ 12ರಂದು ಜನಿಸಿದ ಸ್ವಾಮಿ ವಿವೇಕಾನಂದರು ಶ್ರೇಷ್ಠ ಚಿಂತಕ ಮತ್ತು ವಾಗ್ಮಿಯಾಗಿದ್ದರು.
ವಿವೇಕಾನಂದರ ಬೋಧನೆಗಳು ಬಹಳಷ್ಟು ಯುವ ಭಾರತೀಯರಿಗೆ ಸ್ಫೂರ್ತಿ. ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿದ ಮಾತುಗಳು ಅವರವು. ಹಾಗಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಸ್ವಾಮಿ ವಿವೇಕಾನಂದರ ಜೀವನ ಮತ್ತು ಕಾರ್ಯ ಹಲವಾರು ವರ್ಷಗಳಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ. ಅದೆಲ್ಲವನ್ನೂ ನೆನಪಿಸುವ ದಿನವಾಗಿ ರಾಷ್ಟ್ರೀಯ ಯುವ ದಿನ ಆಚರಣೆ ನಡೆಯುತ್ತದೆ.