×
Ad

ಭಾರತೀಯ ರೈಲ್ವೆಯು ಏಕೆ ಅಷ್ಟೊಂದು ಭೂಮಿಯನ್ನು ಹೊಂದಿದೆ, ಅದು ಅತಿಕ್ರಮಣವನ್ನು ಹೇಗೆ ಎದುರಿಸುತ್ತದೆ?

Update: 2023-01-12 11:35 IST

ಹೊಸದಿಲ್ಲಿ: ಉತ್ತರಾಖಂಡದ ಹಲ್ದವಾನಿಯಲ್ಲಿನ ಭೂ ಅತಿಕ್ರಮಣ ಪ್ರಕರಣವು ಇತ್ತೀಚಿಗೆ ವಿವಾದದ ಕೇಂದ್ರಬಿಂದುವಾಗಿದೆ. ಭಾರತೀಯ ರೈಲ್ವೆಯು ತನ್ನದೆಂದು ಪ್ರತಿಪಾದಿಸಿರುವ ಜಮೀನಿನಿಂದ ಸಾವಿರಾರು ಕುಟುಂಬಗಳನ್ನು ತೆರವುಗೊಳಿಸುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ತಡೆಯಾಜ್ಞೆ ನೀಡಿದೆ.

ದೇಶದಲ್ಲಿ ಅತ್ಯಂತ ಹೆಚ್ಚಿನ ಭೂ ಒಡೆತನವನ್ನು ಹೊಂದಿರುವ ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಭಾರತೀಯ ರೈಲ್ವೆಗೆ ಅತಿಕ್ರಮಣಗಳು ಮತ್ತು ತೆರವುಗೊಳಿಸುವುದರ ಕುರಿತು ವಿವಾದಗಳು ಹೊಸದೇನಲ್ಲ.

68 ರೈಲ್ವೆ ವಿಭಾಗಗಳು ಸೇರಿದಂತೆ ದೇಶದಲ್ಲಿಯ 17 ರೈಲ್ವೆ ವಲಯಗಳು ಅತಿಕ್ರಮಣದ ಸಮಸ್ಯೆಯನ್ನು ಎದುರಿಸುತ್ತಿವೆ. ರೈಲ್ವೆಯ ಉತ್ಪಾದನಾ ಘಟಕಗಳಲ್ಲಿಯೂ ಜಮೀನು ಅತಿಕ್ರಮಣಕ್ಕೊಳಗಾಗಿದೆ.

ಬ್ರಿಟಿಷರು ಭಾರತದ ರೈಲ್ವೆ ವ್ಯವಸ್ಥೆಯನ್ನು ನಿರ್ಮಿಸಿದಾಗ ವಿಸ್ತಾರವಾದ ರೈಲ್ವೆ ಜಾಲವನ್ನು ಮುಂಗಡಿದ್ದರು. ಹೀಗಾಗಿ ಅವರು ಭವಿಷ್ಯದ ವಿಸ್ತರಣೆಗಾಗಿ ಬಹುದೊಡ್ಡ ಭೂಪ್ರದೇಶವನ್ನು ರೈಲ್ವೆಗಾಗಿ ಮೀಸಲಿಟ್ಟಿದ್ದರು. ಆದರೆ, ಆಗಾಗ್ಗೆ ರೈಲ್ವೆಗೆ ಭೂಮಿಯ ಅಗತ್ಯವಿದ್ದಾಗ ಅದು ಅತಿಕ್ರಮಿಸಲ್ಪಟ್ಟಿರುತ್ತದೆ.

ಪ್ರಸ್ತುತ ಭಾರತೀಯ ರೈಲ್ವೆಯು 4.86 ಲ.ಹೆಕ್ಟೇರ್ ಭೂಮಿಯನ್ನು ಹೊಂದಿದ್ದು,ಈ ಪೈಕಿ 782.81 ಹೆ.ಭೂಮಿ ಅತಿಕ್ರಮಿಸಲ್ಪಟ್ಟಿದೆ. ಇದು ಭಾರತದಲ್ಲಿ ಅತ್ಯಂತ ದೊಡ್ಡ ಕ್ರೀಡಾಂಗಣವಾಗಿರುವ ಮೊಟೆರಾದಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಗಾತ್ರದ ಸುಮಾರು 31 ಕ್ರೀಡಾಂಗಣಗಳ ಒಟ್ಟು ವಿಸ್ತೀರ್ಣಕ್ಕೆ ಸಮವಾಗಿದೆ. ರೈಲ್ವೆಯ ಹೆಚ್ಚಿನ ಭೂಮಿಯು ಮಾರ್ಗ ವಿಸ್ತರಣೆಗೆ ನೆರವಾಗುವಂತೆ ಅದರ ಹಳಿಗಳ ಪಕ್ಕದಲ್ಲಿಯೇ ಇದೆ.

ತನ್ನ ವಿಸ್ತಾರ ಭೂಪ್ರದೇಶವು ಅತಿಕ್ರಮಣಕ್ಕೆ ಗುರಿಯಾಗಬಹುದು ಎನ್ನುವುದು ಭಾರತೀಯ ರೈಲ್ವೆಗೆ ಗೊತ್ತಿರುವುದರಿಂದ ನಿಯಮಿತವಾಗಿ ಸರ್ವೆಗಳನ್ನು ನಡೆಸುವ ಮತ್ತು ಅತಿಕ್ರಮಣಕ್ಕೊಳಗಾಗಬಹುದಾದ ತಾಣಗಳನ್ನು ಗುರುತಿಸುವ ಹೊಣೆಯನ್ನು ರೈಲ್ವೆ ವಿಭಾಗಗಳಿಗೆ ವಹಿಸಲಾಗಿದೆ. ಸಾಧ್ಯವಿದ್ದಲ್ಲಿ ರೈಲ್ವೆಯು ತನ್ನ ಭೂಮಿಯನ್ನು ರಕ್ಷಿಸಿಕೊಳ್ಳಲು ಗಡಿ ಗೋಡೆಗಳನ್ನೂ ನಿರ್ಮಿಸುತ್ತದೆ.

ರೈಲ್ವೆಯು ಕೆಲವೊಮ್ಮೆ ರೈಲ್ವೆ ರಕ್ಷಣಾ ಪಡೆ ಮತ್ತು ರಾಜ್ಯ ಸರಕಾರಗಳ ನೆರವಿನೊಂದಿಗೆ ಹೊಸದಾಗಿ ಗುರುತಿಸಲಾದ, ತಾತ್ಕಾಲಿಕ ರಚನೆಗಳಿರುವ ಅತಿಕ್ರಮಣವನ್ನು ತೆರವುಗೊಳಿಸುತ್ತದೆ.

ಕಳೆದ ಮೂರು ವರ್ಷಗಳಲ್ಲಿ ಭಾರತೀಯ ರೈಲ್ವೆಯು 1,352ಕ್ಕೂ ಹೆಚ್ಚಿನ ತೆರವು ಕಾರ್ಯಾಚರಣೆಗಳನ್ನು ನಡೆಸಿ 65 ಹೆ.ಗಳಷ್ಟು ಭೂಮಿಯನ್ನು ತನ್ನ ವಶಕ್ಕೆ ಮರಳಿ ಪಡೆದುಕೊಂಡಿದೆ. ಅತಿ ಹೆಚ್ಚಿನ ತೆರವು ಕಾರ್ಯಾಚರಣೆಗಳು ಪೂರ್ವ ರೈಲ್ವೆಯಲ್ಲಿ ನಡೆದಿದ್ದರೆ ಅತಿ ಹೆಚ್ಚಿನ,ಅಂದರೆ 14.45 ಹೆ.ಭೂಮಿಯನ್ನು ಹಲ್ದವಾನಿಯು ಭಾಗವಾಗಿರುವ ಈಶಾನ್ಯ ರೈಲ್ವೆಯಡಿ ಮರು ವಶಪಡಿಸಿಕೊಳ್ಳಲಾಗಿದೆ. ಸ್ಥಳೀಯ ಸರಕಾರಗಳ ಸಹಯೋಗವಿಲ್ಲದೆ ನೆಲಸಮ ಅಥವಾ ತೆರವು ಕಾರ್ಯಾಚರಣೆಯನ್ನು ನಡೆಸಲಾಗುವುದಿಲ್ಲ. 

ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ಅಧಿಕಾರ ವ್ಯಾಪ್ತಿಗೆ ಸೇರಿರುವ ವಿಷಯವಾಗಿರುವುದರಿಂದ ಮತ್ತು ಸರಕಾರಿ ಸಂಸ್ಥೆಯೊಂದು ತನ್ನದೇ ಜಮೀನಿನಲ್ಲಿ ಅತಿಕ್ರಮಣ ನಡೆದಿದ್ದರೂ ಅಲ್ಲಿರುವ ಮನೆಗಳನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಭಾರತೀಯ ರೈಲ್ವೆಯು ಇದಕ್ಕಾಗಿ ಪ್ರಕ್ರಿಯೆಯೊಂದನ್ನು ಹೊಂದಿದೆ.
ಅತಿಕ್ರಮಣಕೋರರ ಮನವೊಲಿಸಲು ಸಾಧ್ಯವಾಗದ ಹಳೆಯ ಅತಿಕ್ರಮಣ ಸ್ಥಳಗಳನ್ನು ಮರುವಶಪಡಿಸಿಕೊಳ್ಳಲು ರೈಲ್ವೆಯು ಸಾರ್ವಜನಿಕ ಆವರಣಗಳ (ಅನಧಿಕೃತ ನಿವಾಸಿಗಳ ತರವು)ಕಾಯ್ದೆ,1971ರಡಿ ಕ್ರಮವನ್ನು ಕೈಗೊಳ್ಳುತ್ತದೆ.

ಮನವೊಲಿಕೆ, ಸಂಧಾನ ಮಾತುಕತೆ ಮತ್ತು ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ಎಲ್ಲ ಮಾರ್ಗಗಳೂ ವಿಫಲಗೊಂಡಾಗ ರಾಜ್ಯದ ಅಧಿಕಾರಿಗಳು ಮತ್ತು ರೈಲ್ವೆಯಿಂದ ಅತಿಕ್ರಮಣಕೋರರಿಗೆ ತೆರವು ನೋಟಿಸ್ಗಳನ್ನು ಜಾರಿಗೊಳಿಸಲಾಗುತ್ತದೆ. ನ್ಯಾಯಾಲಯಗಳಲ್ಲಿ ಈ ತೆರವು ನೋಟಿಸ್ಗಳನ್ನು ಪ್ರಶ್ನಿಸಲಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ನ್ಯಾಯಾಲಯಗಳು ಎರಡೂ ಕಡೆಗಳ ವಾದಗಳನ್ನು ಆಲಿಸಬೇಕಿರುವುದರಿಂದ ಕೆಲ ಅವಧಿಗೆ ನೆಲಸಮ/ತೆರವು ಕಾರ್ಯಾಚರಣೆಯ ವಿರುದ್ಧ ತಡೆಯಾಜ್ಞೆಯನ್ನು ನೀಡುತ್ತವೆ. ವಾಸ್ತವಿಕ ತೆರವು ಕಾರ್ಯಾಚರಣೆಯನ್ನು ರಾಜ್ಯ ಸರಕಾರ ಮತ್ತು ಪೊಲೀಸರ ನೆರವಿನೊಂದಿಗೆ ನಡೆಸಲಾಗುತ್ತದೆ.

ಕೃಪೆ: indianexpress.com

ಇದನ್ನೂ ಓದಿ: ಚಹಾ ಮಾಡುವ ವೀಡಿಯೊದೊಂದಿಗೆ 'ಇದು ನನ್ನನ್ನು ಎಲ್ಲಿಗೆ ಕೊಂಡೊಯುತ್ತದೆ ಯಾರಿಗೆ ಗೊತ್ತು' ಎಂದ ಟಿಎಂಸಿ ಸಂಸದೆ ಮೊಯಿತ್ರಾ

Similar News