ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 10 ಸೆಂಟ್ಸ್ ಕೃಷಿ ಭೂಮಿ, ವಸತಿ ವಲಯ ಬದಲಾವಣೆಗೆ ಸರಕಾರ ಸಮ್ಮತಿ
ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 10 ಸೆಂಟ್ಸ್‌ವರೆಗೆ ಕೃಷಿ ಭೂಮಿಯನ್ನು ವಸತಿ ವಲಯಕ್ಕೆ ಬದಲಾವಣೆ ಮಾಡಲು ಅವಕಾಶ ಕಲ್ಪಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ತುರ್ತು ಪತ್ರಿಕಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದರು. ಇದರೊಂದಿಗೆ ಉಡುಪಿ ಜನತೆಯ ಬಹುಕಾಲದ ಬೇಡಿಕೆಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆಸಿದ ಅವಿರತ ಶ್ರಮಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ ಎಂದವರು ಹೇಳಿದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೃಷಿ ವಲಯದಲ್ಲಿ 10 ಸೆಂಟ್ಸ್ ಜಾಗ ಅಥವಾ 3000 ಚದರ ಅಡಿವರೆಗೆ ಕೃಷಿ ವಲಯದಲ್ಲಿ ವಾಸ್ತವ್ಯದ ಮನೆ ನಿರ್ಮಿಸುವವರಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆಗೆ ಸರಕಾರ ಹೊರಡಿಸಿದ ಆದೇಶದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದವರು ವಿವರಿಸಿದರು.
ಹಿಂದೆ ನಗರಾಭಿವೃದ್ಧಿ ಇಲಾಖೆ ವಲಯ ನಿಯಮಾವಳಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು 30 ದಿನಗಳ ಕಾಲಾವಕಾಶ ನೀಡಿತ್ತು. ಇದೀಗ ಜ.11ರಂದು ಇಲಾಖೆಯ ಅಧೀನ ಕಾರ್ಯದರ್ಶಿಯವರು ಹೊರಡಿಸಿದ ಆದೇಶದಲ್ಲಿ 10 ಸೆಂಟ್ಸ್ ವರೆಗಿನ ಕೃಷಿ ವಲಯದ ಜಮೀನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.ಈ ಆದೇಶದಲ್ಲಿ 5 ಸೆಂಟ್ಸ್‌ನಿಂದ 7 ಸೆಂಟ್ಸ್‌ವರೆಗೆ ಶೇ.45ರಷ್ಟು ಹಾಗೂ 7 ಸೆಂಟ್ಸ್‌ನಿಂದ 10 ಸೆಂಟ್ಸ್‌ವರೆಗೆ ಶೇ.35ರ ಮಿತಿಯಲ್ಲಿ ವಸತಿ ನಿರ್ಮಿಸಬಹುದಾಗಿದೆ. ಮತ್ತು 5 ಸೆಂಟ್ಸ್ ಒಳಗಿನ ಕೃಷಿ ಜಮೀನುಗಳಿಗೆ ಯಾವುದೇ ಮಿತಿ ಇರುವುದಿಲ್ಲ ಎಂಬ ಅಂಶವನ್ನು ಅಳವಡಿಸಲಾಗಿದೆ ಎಂದು ರಘುಪತಿ ಭಟ್ ವಿವರಿಸಿದರು.
ಈ ಆದೇಶದಿಂದಾಗಿ ಇನ್ನು ಮುಂದೆ 10 ಸೆಂಟ್ಸ್‌ವರೆಗೆ ಕೃಷಿ ವಲಯದಲ್ಲಿ ವಾಸ್ತವ್ಯದ ಮನೆ ನಿರ್ಮಿಸುವವರಿಗೆ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆ ಮಾಡಲು ಬೆಂಗಳೂರಿಗೆ ಹೋಗದೆ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿಯೇ ವಲಯ ಬದಲಾವಣೆ ಮಾಡಬಹುದಾಗಿದೆ.
ಪ್ರಸ್ತುತ ಈ ವಿಷಯಕ್ಕೆ ಸಂಬಂಧಿಸಿ ಸುಮಾರು 3 ಸಾವಿರಕ್ಕೂ ಅಧಿಕ ಅರ್ಜಿಗಳು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿದ್ದು, ಅರ್ಜಿದಾರರಿಗೆ ಅನುಕೂಲವಾಗಲಿದೆ ಎಂದವರು ತಿಳಿಸಿದರು.
ಈ ಐತಿಹಾಸಿಕ ನಿರ್ಣಯಕ್ಕಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಗೆ ಸಮಸ್ತ ಉಡುಪಿ ಜನತೆಯ ಪರವಾಗಿ ಶಾಸಕ ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.