ಜ.21ರಂದು ಕಾಪು ಬೀಚ್‍ನಲ್ಲಿ ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಸಂಭ್ರಮಾಚರಣೆ

Update: 2023-01-12 14:47 GMT

ಕಾಪು : ಉಡುಪಿ ಜಿಲ್ಲೆಯು ರಚನೆಯಾಗಿ ಇಪ್ಪತ್ತೈದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಪು ಕಡಲ ಕಿನಾರೆಯಲ್ಲಿ ಜ. 21ರಂದು ಉಡುಪಿ ಜಿಲ್ಲೆಯ ರಜತ ಮಹೋತ್ಸವ - 2023 ಸಂಭ್ರಮಾಚರಣೆ ಆಯೋಜಿಸಲಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ಕಾಪು ತಾಲೂಕು ಕಛೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಜತಮಹೋತ್ಸವ ವರ್ಷಾಚರಣೆಯನ್ನು ಜಿಲ್ಲೆಯಾದ್ಯಂತ ವೈಶಿಷ್ಟ್ಯಪೂರ್ಣವಾಗಿ ಆಯೋಜಿಸಲು ಉಡುಪಿ ಜಿಲ್ಲಾಡಳಿತ, ಕೇಂದ್ರ, ರಾಜ್ಯ ಸಚಿವರು ಮತ್ತು ಶಾಸಕರೆಲ್ಲರೂ ಜೊತೆ ಸೇರಿ ತೀರ್ಮಾನಿಸಿದೆ.

ಕಾಪು ತಾಲೂಕು ಆಡಳಿತ, ವಿವಿಧ ಇಲಾಖೆಗಳು, ಪುರಸಭೆಯೂ ಸೇರಿದಂತೆ ಕಾಪು ವಿಧಾನಸಭಾ ಕ್ಷೇತ್ರದ 29 ಗ್ರಾಮ ಪಂಚಾಯತ್‍ಗಳು ಹಾಗೂ ವಿವಿಧ ಶಾಲಾ ಕಾಲೇಜುಗಳು, ಸಾರ್ವಜನಿಕ ಸಂಘ - ಸಂಸ್ಥೆಗಳ ಸಹಯೋಗದೊಂದಿಗೆ ಮಧ್ಯಾಹ್ನ 2 ಗಂಟೆಗೆ ವಿವಿಧ ಸಾಂಸ್ಕೃತಿಕ ತಂಡಗಳು, ಕಾಪು ಕ್ಷೇತ್ರದ ವೈಶಿಷ್ಟ್ಯತೆಯನ್ನು ಮೆರೆಯುವ ಟ್ಯಾಬ್ಲೋಗಳೊಂದಿಗೆ ಕಾಪು ಪುರಸಭೆಯಿಂದ ಕಾಪು ಪೇಟೆಯಾಗಿ ಕಾಪು ಬೀಚ್‍ವರೆಗೆ ವೈಭವದ ಶೋಭಾಯಾತ್ರೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.

ಗಣ್ಯರ ಉಪಸ್ಥಿತಿ: ಸಂಜೆ 5 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಉದ್ಘಾಟಿಸಲಿದ್ದು, ಶಾಸಕ ಲಾಲಾಜಿ ಆರ್. ಮೆಂಡನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲ್ ಕುಮಾರ್, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಕೂರ್ಮಾ ರಾವ್, ಪೊಲೀಸ್ ವರಿಷ್ಟಾಧಿಕಾರಿ ಹಕಾಯ್ ಅಕ್ಷಯ್ ಮಚ್ಚೀಂದ್ರ, ದ.ಕ. ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಗುರ್ಮೆ ಫೌಂಡೇಷನ್ ಅಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುರ್ಮೆ ಹಾಗೂ ಜಿಲ್ಲೆ ರಚನೆಯಾದಂದಿನಿಂದ ಇಂದಿನವರೆಗೆ ಮಾಜಿ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಗ್ರಾಮ ಪಂಚಾಯತ್‍ಗಳ ಪ್ರಾಯೋಜಕತ್ವದಲ್ಲಿ ಮತ್ತು ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ ನಡೆಯಲಿದೆ. ಬಳಿಕ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ನೇತೃತ್ವದಲ್ಲಿ ಮ್ಯೂಸಿಕಲ್ ನೈಟ್ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

10 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಪು ತಾಲ್ಲೂಕು ಮಿನಿ ವಿಧಾನಸೌಧ  ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದೆ. ಫೆಬ್ರವರಿಯಲ್ಲಿ ಕಟ್ಟಡವನ್ನು ಉದ್ಘಾಟಿಸಲಾಗುವುದು. ಕಂದಾಯ ಸಚಿವ ಆರ್. ಅಶೋಕ್ ಸಹಿತ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದ ಲಾಲಾಜಿ ಮೆಂಡನ್, ಕಾಪು ಕ್ಷೇತ್ರದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಸುಮಾರು 3,000 ಕೋ. ರೂ. ಗೂ ಅಧಿಕ ಮೊತ್ತದ ಯೋಜನೆಗಳು ಕಾರ್ಯಗತವಾಗಿವೆ. ಹೆಜಮಾಡಿ ಬಂದರು ಯೋಜನೆ, ಕುರ್ಕಾಲಿನಿಂದ ಕಾಪುವಿನವರೆಗಿನ ಬೃಹತ್ ಕುಡಿಯುವ ನೀರಿನ ಯೋಜನೆ ಸಹಿತ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು. 
ಕಾಪು ನಗರ ಯೋಜನಾ ಪ್ರಾ„ಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಕಂದಾಯ ನಿರೀಕ್ಷಕ ಸುಧೀರ್ ಕುಮಾರ್ ಶೆಟ್ಟಿ, ಪುರಸಭೆ ಮುಖ್ಯಾ„ಕಾರಿ ವೆಂಕಟೇಶ ನಾವಡ ಉಪಸ್ಥಿತರಿದ್ದರು.

Similar News