ಹಳೆಯ ಪಿಂಚಣಿ ಯೋಜನೆ ಸೌಲಭ್ಯ ಎಲ್ಲ ಸಿಎಪಿಎಫ್ ಸಿಬ್ಬಂದಿಗೆ ನೀಡಿ: ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ಸೂಚನೆ

Update: 2023-01-12 16:53 GMT

ಹೊಸದಿಲ್ಲಿ, ಜ. 12: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಕೇಂದ್ರ ಸರಕಾರದ ಶಸಸ್ತ್ರ ಪಡೆಗಳ ಭಾಗವಾಗಿದೆ. ಆದುದರಿಂದ ನೌಕಾ ಪಡೆ, ಸೇನಾ ಪಡೆ ಹಾಗೂ ವಾಯು ಪಡೆಗಳಿಗೆ ಅನ್ವಯವಾಗುವ ಹಳೆಯ ಪಿಂಚಣಿ ಯೋಜನೆ ಅಡಿಯ ಸೌಲಭ್ಯಗಳನ್ನು ಸಿಎಪಿಎಫ್ ಸಿಬ್ಬಂದಿಗೆ ಕೂಡ ನೀಡಬೇಕು ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ಪ್ರತಿಪಾದಿಸಿದೆ. ಈ ಅಗತ್ಯವನ್ನು ಪೂರೈಸಲು 8 ವಾರಗಳ ಒಳಗೆ ಆದೇಶ ನೀಡುವಂತೆ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಹಾಗೂ ನೀನಾ ಬನ್ಸಾಲ್ ಕೃಷ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ. 

ಸೇನಾ ಪಡೆಗಳಿಗೆ ಹಿನ್ನಡೆಯಾಗುವಂತಹ ಯಾವುದೇ ನೀತಿ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂದು ನ್ಯಾಯಾಲಯ ಹಾಗೂ ಸರಕಾರ ಖಾತರಿ ನೀಡುತ್ತದೆ ಎಂದು ಪೀಠ 58 ಪುಟಗಳ ಆದೇಶದಲ್ಲಿ ಹೇಳಿದೆ. ಕೇಂದ್ರ ಸರಕಾರ ಹಲವು ಸಂದರ್ಭಗಳಲ್ಲಿ ಅರೆ ಸೇನಾ ಪಡೆಗಳನ್ನು ಸೇನಾ ಪಡೆಗಳೆಂದು ಪರಿಗಣಿಸದೇ ಇರುವುದರಿಂದ ಈ ತೀರ್ಪು ಮಹತ್ವ ಪಡೆದುಕೊಂಡಿದೆ. 

ತಮಗೆ ಹಳೆಯ ಪಿಂಚಣಿ ಯೋಜನೆ ಸೌಲಭ್ಯಗಳನ್ನು ನಿರಾಕರಿಸಿ ಕೇಂದ್ರ ಸರಕಾರ ನೀಡಿದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರ ಮೀಸಲು ಪೊಲೀಸ್ ಪಡೆ, ಶಸಸ್ತ್ರ ಸೀಮಾ ಬಲ, ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಇಂಡೊ ಟಿಬೆಟನ್ ಗಡಿ ಪೊಲೀಸ್ನ ಸಿಬ್ಬಂದಿ ಸಲ್ಲಿಸಿದ 82 ದೂರುಗಳ ಗುಚ್ಚವನ್ನು ವಿಚಾರಣೆ ನಡೆಸಿ ದಿಲ್ಲಿ ಉಚ್ಚ ನ್ಯಾಯಾಲಯ ಈ ಆದೇಶ ನೀಡಿದೆ.  ಅವರ ಪರವಾಗಿ ತೀರ್ಪು ನೀಡುವ ಸಂದರ್ಭ ಉಚ್ಚ ನ್ಯಾಯಾಲಯ, ‘‘ಹಳೆಯ ಪಿಂಚಣಿ ಯೋಜನೆ ಸೌಲಭ್ಯ ನೀಡುವ 22.12.2003ರ ಅಧಿಸೂಚನೆ ಹಾಗೂ 17.02.2020ರ ಅಧಿಕೃತ ಜ್ಞಾಪನಾ ಪತ್ರ ಇವರಿಗೂ ಅನ್ವಯವಾಗುತ್ತದೆ’’ ಎಂದು ಹೇಳಿದೆ.

Similar News