×
Ad

ಶರದ್ ಯಾದವ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ರಾಹುಲ್ ಗಾಂಧಿ

Update: 2023-01-13 12:10 IST

ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಶರದ್ ಯಾದವ್ (Sharad Yadav) ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಅಂತಿಮ ನಮನ ಸಲ್ಲಿಸಿದ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi), ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ರಾಜಕಾರಣಿ ಶರದ್ ಯಾದವ್ ಅವರಿಂದ ನಾನು ಸಾಕಷ್ಟು ರಾಜಕೀಯ ಕಲಿತಿದ್ದೇನೆ ಎಂದು ತಿಳಿಸಿದ್ದಾರೆ.

ಶರದ್ ಯಾದವ್‌ರೊಂದಿಗೆ ಕಾರು ಪ್ರಯಾಣದ ಸಂದರ್ಭದಲ್ಲಿ ನಡೆಸಿದ್ದ ಮಾತುಕತೆಯನ್ನು ಸ್ಮರಿಸಿದ ರಾಹುಲ್ ಗಾಂಧಿ, ಅದು ನಮ್ಮಿಬ್ಬರ ನಡುವಿನ ಸಂಬಂಧದ ಪ್ರಾರಂಭವಾಗಿತ್ತು ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರಾಗಿದ್ದ ಶರದ್ ಯಾದವ್ ಅವರು ನನ್ನ ಅಜ್ಜಿ ಇಂದಿರಾ ಗಾಂಧಿ ವಿರುದ್ಧ ರಾಜಕೀಯ ಹೋರಾಟ ನಡೆಸಿದರೂ, ಇಬ್ಬರ ನಡುವೆ ಪರಸ್ಪರ ಗೌರವ ಮತ್ತು ಪ್ರೀತಿಯಿತ್ತು ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಶರದ್ ಯಾದವ್ ಅವರು ಇನ್ನೊಬ್ಬರ ಗೌರವವನ್ನು ಎಂದೂ ಹರಣ ಮಾಡಲಿಲ್ಲ. ಇದು ರಾಜಕಾರಣದಲ್ಲಿ ದೊಡ್ಡ ಸಂಗತಿಯಾಗಿದೆ. ಸಮಾಜವಾದಿ ನಾಯಕರೂ ಆಗಿದ್ದ ಅವರು, ವಿನಯ ವ್ಯಕ್ತಿತ್ವ ರೂಢಿಸಿಕೊಂಡಿದ್ದರು. ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರ ದುಃಖತಪ್ತ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ. ದೇಶಕ್ಕೆ ಅವರು ನೀಡಿದ ಕೊಡುಗೆಯು ಸದಾ ನೆನಪಿನಲ್ಲುಳಿಯಲಿದೆ" ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

75 ವರ್ಷದ ಶರದ್ ಯಾದವ್ ಅವರು ಗುರುವಾರ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರು ತಮ್ಮ ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ದೀರ್ಘಕಾಲದಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಸಮಾಜವಾದಿ ನಾಯಕ ಶರದ್ ಯಾದವ್ ಅವರು, ನಿಯಮಿತವಾಗಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು.

ಇದನ್ನೂ ಓದಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಗೆ ಝಡ್- ಶ್ರೇಣಿಯ ಭದ್ರತೆ; 33 CRPF ಕಮಾಂಡೋಗಳಿಂದ ರಕ್ಷಣೆ

Similar News