ಅಧಿಕಾರಿಗಳನ್ನು ಕೇಂದ್ರವೇ ನಿಯಂತ್ರಿಸುವುದಾದರೆ ದಿಲ್ಲಿಯಲ್ಲಿ ಚುನಾಯಿತ ಸರಕಾರ ಏಕೆ?

ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

Update: 2023-01-13 14:51 GMT

ಹೊಸದಿಲ್ಲಿ, ಜ. 13: ನಾಗರಿಕ ಅಧಿಕಾರಿಗಳ ನೇಮಕಾತಿ ಅಧಿಕಾರವನ್ನು ಕೇಂದ್ರ ಸರಕಾರವು ತನ್ನಲ್ಲೇ ಉಳಿಸಿಕೊಳ್ಳುವುದಾದರೆ, ದಿಲ್ಲಿಯಲ್ಲಿ ಯಾವ ಉದ್ದೇಶಕ್ಕೆ ಚುನಾಯಿತ ಸರಕಾರವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರಕಾರದ ಕಾರ್ಯಾಂಗ ಅಧಿಕಾರ ವ್ಯಾಪ್ತಿ ಮತ್ತು ಆಡಳಿತಾತ್ಮಕ ಸೇವೆಗಳ ಮೇಲೆ ಅದರ ನಿಯಂತ್ರಣದ ಬಗ್ಗೆ ಕೇಂದ್ರ ಸರಕಾರ ಮತ್ತು ದಿಲ್ಲಿ ಸರಕಾರದ ನಡುವಿನ ವಿವಾದಕ್ಕೆ ಸಂಬಂಧಿಸಿದ ಮೊಕದ್ದಮೆಯ ವಿಚಾರಣೆ ನಡೆಸಿದ ವೇಳೆ, ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವೊಂದು ಈ ಪ್ರಶ್ನೆಯನ್ನು ಕೇಳಿದೆ.

ದಿಲ್ಲಿಯು ಕೇಂದ್ರಾಡಳಿತ ಪ್ರದೇಶವಾಗಿದೆ, ಹಾಗಾಗಿ ಅದು ಕೇಂದ್ರ ಸರಕಾರದ ಭಾಗವಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯದಲ್ಲಿ ಹೇಳಿದರು. ‘‘ಕೇಂದ್ರಾಡಳಿತ ಪ್ರದೇಶವೆಂಬ ಭೌಗೋಳಿಕ ಸ್ಥಳವನ್ನು ಸೃಷ್ಟಿಸಿರುವುದೇ ಅಲ್ಲಿ ಕೇಂದ್ರ ಸರಕಾರ ಆಡಳಿತ ನಡೆಸುವುದಕ್ಕಾಗಿ’’ ಎಂದು ಅವರು ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶ ಚಂದ್ರಚೂಡ್, ‘‘ಪ್ರತಿಯೊಂದೂ ಕೇಂದ್ರ ಸರಕಾರದ ನಿಯಂತ್ರಣದಲ್ಲಿ ಇರುವುದಾದರೆ, ಚುನಾಯಿತ ಸರಕಾರದ ಉಪಯೋಗವಾದರೂ ಏನು?’’ ಎಂದು ಪ್ರಶ್ನಿಸಿದರು. ಚುನಾಯಿತ ಸರಕಾರವು ಅಧಿಕಾರಿಗಳ ಮೇಲೆ ಕಾರ್ಯನಿರ್ವಹಣಾ ನಿಯಂತ್ರಣವನ್ನು ಹೊಂದಿರುತ್ತದೆ ಎಂದು ಮೆಹ್ತಾ ಹೇಳಿದರು.

ಆದರೆ ಇದಕ್ಕೆ ತೃಪ್ತರಾಗದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ಹಾಗಾದರೆ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಅಧಿಕಾರಿಗಳನ್ನು ವರ್ಗ ಮಾಡುವ ಅಧಿಕಾರ ದಿಲ್ಲಿ ಸರಕಾರಕ್ಕಿಲ್ಲವೇ ಎಂದು ಕೇಳಿದರು. ‘‘ಶಿಕ್ಷಣ, ಪರಿಸರ ಮುಂತಾದ ಇಲಾಖೆಗಳಲ್ಲಿ ನೇಮಕಾತಿಗಳನ್ನು ನಡೆಸಲು ದಿಲ್ಲಿ ಸರಕಾರಕ್ಕೆ ಅಧಿಕಾರವಿಲ್ಲ ನೀವು ಹೇಳುತ್ತಿದ್ದೀರಾ? ಹಾಗಾದರೆ ದಿಲ್ಲಿ ಸರಕಾರದ ಉಪಯೋಗವೇನು?’’ ಎಂದು ಅವರು ಪ್ರಶ್ನಿಸಿದರು.

ಸಂವಿಧಾನದಲ್ಲಿ ಕೇಂದ್ರ ಮತ್ತು ರಾಜ್ಯ ಸೇವೆಗಳಿವೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸೇವಾ ಆಯೋಗಗಳಿಲ್ಲ ಎಂದು ಮೆಹ್ತಾ ಹೇಳಿದರು.

‘‘ದಿಲ್ಲಿ ಎನ್ನುವುದು ಕಾಸ್ಮೋಪಾಲಿಟನ್ ನಗರ ಹಾಗೂ ಮಿನಿ ಭಾರತವಾಗಿದೆ. ಅದು ಇಡೀ ದೇಶಕ್ಕೆ ಸೇರಿದೆ’’ ಎಂದು ಅವರು ಅಭಿಪ್ರಾಯಪಟ್ಟರು. ದಿಲ್ಲಿಯು ರಾಷ್ಟ್ರ ರಾಜಧಾನಿಯಾಗಿರುವುದರಿಂದ ಆಡಳಿತಾತ್ಮಕ ಸೇವೆಗಳ ಮೇಲೆ ಕೇಂದ್ರ ಸರಕಾರ ನಿಯಂತ್ರಣ ಹೊಂದುವುದು ಅಗತ್ಯವಾಗಿದೆ’’ ಎಂದು ಸಾಲಿಸಿಟರ್ ಜನರಲ್ ಹೇಳಿದರು.

ಹುದ್ದೆಗಳನ್ನು ಸೃಷ್ಟಿಸಲು, ಅವುಗಳಿಗೆ ನೇಮಕಾತಿ ಮಾಡಲು ಮತ್ತು ಅಗತ್ಯ ಬಿದ್ದರೆ ಅಧಿಕಾರಿಗಳನ್ನು ಬದಲಾಯಿಸುವ ಅಧಿಕಾರ ಇಲ್ಲದಿದ್ದರೆ ತನಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ದಿಲ್ಲಿ ಸರಕಾರ ಮಂಗಳವಾರ ಸಂವಿಧಾನ ಪೀಠದ ಮುಂದೆ ವಾದಿಸಿತ್ತು.

Similar News