ಆರ್ಗೋಡು ಸೇರಿ 3ಮಂದಿಗೆ ಅಂಬಲಪಾಡಿ ಯಕ್ಷಗಾನ ಮಂಡಳಿ ಪ್ರಶಸ್ತಿ

Update: 2023-01-13 13:28 GMT

ಉಡುಪಿ: ಅಂಬಲಪಾಡಿ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ 65ನೇ ವಾರ್ಷಿಕೋತ್ಸವದಂಗವಾಗಿ ಯಕ್ಷಗಾನ ಕಲಾವಿದರಿಗೆ ಪ್ರತಿವರ್ಷ ನೀಡುವ ವಿವಿಧ ಪ್ರಶಸ್ತಿಗಳಿಗೆ ಈ ಬಾರಿ ಆರ್ಗೋಡು ಮೋಹನದಾಸ್ ಶೆಣೈ ಸೇರಿದಂತೆ ಮೂವರನ್ನು ಆಯ್ಕೆ ಮಾಡಲಾಗಿದೆ.

ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿಯನ್ನು ಹಿರಿಯ ಪ್ರಸಿದ್ಧ ಕಲಾವಿದ ಆರ್ಗೋಡು ಮೋಹನ್‌ದಾಸ್ ಶೆಣೈ, ಕಿದಿಯೂರು ಜನಾರ್ದನ ಆಚಾರ್ಯ ಸ್ಮರಣಾರ್ಥ ಪ್ರಶಸ್ತಿಯನ್ನು ನಿಟ್ಟೂರು ಶೀನಪ್ಪ ಸುವರ್ಣರಿಗೆ ಹಾಗೂ ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಸ್ಮರಣಾರ್ಥ ಪ್ರಶಸ್ತಿಯನ್ನು  ರಾಜಶೇಖರ್ ಹಂದೆ ಅವರಿಗೆ ನೀಡಿ ಗೌರವಿಸಲಾಗುವುದು.

ಜ.15ರ ರವಿವಾರ ಸಂಜೆ 6:00ಗಂಟೆಗೆ ಅಂಬಲಪಾಡಿಯ ‘ಶ್ರೀ ಜನಾರ್ದನ ಮಂಟಪ’ದಲ್ಲಿ ಜರಗುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೂವರು ಸಾಧಕ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರಸಲಾಗುವುದು. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕಲಾಮಂಡಳಿ ಅಧ್ಯಕ್ಷ ಕೆ.ಅಜಿತ್ ಕುಮಾರ್ ಮತ್ತು ಕಾರ್ಯದರ್ಶಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಕುತ್ಪಾಡಿ ಶ್ರೀರಾಮಕೃಷ್ಣ ಯಕ್ಷಗಾನ ಕಲಾಮಂಡಳಿಗೆ ಪ್ರಶಸ್ತಿ: ಅಂಬಲ ಪಾಡಿ ದೇವಳದ ಧರ್ಮದರ್ಶಿಯಾಗಿ ಕಲೆ, ಸಂಸ್ಕೃತಿಯನ್ನು ವಿಶೇಷವಾಗಿ ಪ್ರೋತ್ಸಾಹಿಸುತಿದ್ದ ನಿ.ಬೀ.ಅಣ್ಣಾಜಿ ಬಲ್ಲಾಳರ ಹೆಸರಿನಲ್ಲಿ ಸ್ಥಾಪಿಸಲಾದ ‘ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ’ಗೆ ಈ ಬಾರಿ ಐದು ದಶಕಗಳಿಂದ ಕುತ್ಪಾಡಿಯಲ್ಲಿ ಯಕ್ಷಗಾನ ಕಲಿಕೆ, ಪ್ರದರ್ಶನ, ತಾಳಮದ್ದಲೆ ಪ್ರಚಾರಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಶ್ರೀ ರಾಮಕೃಷ್ಣ ಯಕ್ಷಗಾನ ಕಲಾ ಮಂಡಳಿ ಆಯ್ಕೆಯಾಗಿದೆ.

ಪ್ರಶಸ್ತಿಯು 10,000ರೂ. ನಗದು ಪುರಸ್ಕಾರವನ್ನೊಳಗೊಂಡಿದೆ. ಜನವರಿ 14ರ ಶನಿವಾರ ಕಂಬ್ಳಕಟ್ಟದ ಶ್ರೀಜನಾರ್ದನ ಮಂಟಪದಲ್ಲಿ ನಡೆಯುವ ಸಂಸ್ಥೆಯ 65ನೇ ರ್ವಾಕೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News