ಭೋಪಾಲ ಸಾಹಿತ್ಯೋತ್ಸವ: ‘ಪ್ರತಿಭಟನೆಯ ಬೆದರಿಕೆ’ ಉಲ್ಲೇಖಿಸಿ ಚಿತ್ರನಿರ್ದೇಶಕ ಧರ್ ಭಾಷಣ ರದ್ದು

Update: 2023-01-14 15:55 GMT

ಭೋಪಾಲ, ಜ.14: ಇಲ್ಲಿ ನಡೆಯುತ್ತಿರುವ ಭೋಪಾಲ ಸಾಹಿತ್ಯೋತ್ಸವ (ಬಿಎಲ್‌ಎಫ್)ದಲ್ಲಿ ಎಲ್‌ಜಿಬಿಟಿ (ಲೆಸ್ಬಿಯನ್,ಗೇ,ಉಭಯ ಲಿಂಗಿಗಳು ಮತ್ತು ತೃತೀಯ ಲಿಂಗಿಗಳು) ಸಮುದಾಯದ ಸಮಸ್ಯೆಗಳ ಕುರಿತು ಚಿತ್ರ ನಿರ್ಮಾಪಕ ಹಾಗೂ ಸಲಿಂಗಕಾಮ ಹಕ್ಕುಗಳ ಕಾರ್ಯಕರ್ತ ಓನೀರ್ ಧರ್ ಅವರ ಭಾಷಣವನ್ನು ಗುಂಪೊಂದರಿಂದ ಪ್ರತಿಭಟನೆಯ ಬೆದರಿಕೆ ಎದುರಾದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಯಿತು ಎಂದು ಸಂಘಟನಾ ಸಮಿತಿಯ ಸದಸ್ಯರಾಗಿರುವ ಲೇಖಕ-ಪತ್ರಕರ್ತ ಅಭಿಲಾಷ ಖಾಂಡೇಕರ್ ಅವರು ಶನಿವಾರ ತಿಳಿಸಿದರು. ಧರ್ ಉಪಸ್ಥಿತಿಯಿಂದ ಭದ್ರತಾ ಸಮಸ್ಯೆಗಳು ತಲೆದೋರಬಹುದು ಎಂದು ‘ಸರಕಾರಿ ಮೂಲಗಳು’ ಸಮಿತಿಗೆ ತಿಳಿಸಿದ್ದವು ಎಂದರು.

ಇಲ್ಲಿಯ ಸರಕಾರಿ ಸ್ವಾಮ್ಯದ ಭಾರತ ಭವನದಲ್ಲಿ ಶುಕ್ರವಾರದಿಂದ ಬಿಎಲ್‌ಎಫ್ ಆರಂಭಗೊಂಡಿದ್ದು,ಅದೇ ದಿನ ಧರ್ ಭಾಷಣ ಮಾಡಬೇಕಿತ್ತು.

‘ನಾನು ಮಾತನಾಡಲು ನಿಜಕ್ಕೂ ಎದುರು ನೋಡುತ್ತಿದ್ದ ಕಾರ್ಯಕ್ರಮದಿಂದ ನನ್ನನ್ನು ಕೈಬಿಟ್ಟಿದ್ದು ನನಗೆ ಆಘಾತ ಮತ್ತು ದುಃಖವನ್ನುಂಟು ಮಾಡಿತ್ತು. ಸ್ಪಷ್ಟವಾಗಿ,ಗುಂಪೊಂದರಿಂದ ಪ್ರತಿಭಟನೆ ಮತ್ತು ಹಿಂಸಾಚಾರದ ಬೆದರಿಕೆಯಿತ್ತು ಮತ್ತು ನನ್ನ ಸುರಕ್ಷತೆಯ ಬಗ್ಗೆ ಖಾತರಿಯನ್ನು ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಸಂಘಟಕರಿಗೆ ತಿಳಿಸಿದ್ದರು ’ ಎಂದು ‘ಮೈ ಬ್ರದರ್...ನಿಖಿಲ್’ ಚಿತ್ರದ ನಿರ್ದೇಶಕ ಧರ್ ಟ್ವೀಟಿಸಿದ್ದರು.

‘ಇಡೀ ಉತ್ಸವವನ್ನು ರದ್ದುಗೊಳಿಸುವ ಬದಲು ಧರ್ ಭಾಷಣವನ್ನು ರದ್ದುಗೊಳಿಸುವುದು ಉತ್ತಮ ಎಂದು ನಾವು ಭಾವಿಸಿದ್ದೆವು ’ಎಂದು ಹೇಳಿದ ಖಾಂಡೇಕರ್,‘ನಾವು ವಾಕ್ ಸ್ವಾತಂತ್ರವನ್ನು ಗೌರವಿಸುತ್ತೇವೆ. ಆದ್ದರಿಂದ ನಾವು ಧರ್ ಅವರನ್ನು ಸಾಹಿತ್ಯೋತ್ಸವಕ್ಕೆ ಆಹ್ವಾನಿಸಿದ್ದೆವು. ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರೂ ಇತ್ತೀಚಿಗೆ ಎಲ್‌ಜಿಬಿಟಿ ವಿಷಯ ಕುರಿತು ಮಾತನಾಡಿದ್ದರು. ಕಳೆದ ವರ್ಷ ಶಿಮ್ಲಾದಲ್ಲಿ ಕೇಂದ್ರವು ಆಯೋಜಿಸಿದ್ದ ಸಾಹಿತ್ಯೋತ್ಸವದಲ್ಲಿಯೂ ಈ ವಿಷಯದ ಕುರಿತು ಗೋಷ್ಠಿಗಳಿದ್ದವು.

ಧರ್ ಸುರಕ್ಷತೆ ಮತ್ತು ಭದ್ರತೆ ಕುರಿತು ಸಮಸ್ಯೆ ಉದ್ಭವಿಸಬಹುದು ಎಂದು ನಮಗೆ ತಿಳಿಸಿದಾಗ ಭಾಷಣವನ್ನು ರದ್ದುಮಾಡಲು ಒಪ್ಪಿಕೊಳ್ಳುವಂತೆ ನಾವು ಅವರನ್ನು ವಿನಂತಿಸಿಕೊಂಡಿದ್ದೆವು. ಪೊಲೀಸರನ್ನು ಕರೆಸಬಹುದು ಎಂದು ಕೆಲವರು ಸೂಚಿಸಿದ್ದರು,ಆದರೆ ಸಾಹಿತ್ಯೋತ್ಸವದಲ್ಲಿ ಪೊಲೀಸರು ಇರಬಾರದು ಎನ್ನುವುದು ನಮ್ಮ ನಂಬಿಕೆಯಾಗಿದೆ ’ಎಂದು ತಿಳಿಸಿದರು.

Similar News