ಉತ್ತರಾಖಂಡ: ಜೋಶಿಮಠ ಕುಸಿತ ಮಾಧ್ಯಮಗಳ ಜೊತೆ ಸಂವಹನಕ್ಕೆ ಇಸ್ರೋಗೆ ನಿಷೇಧ ವಿಧಿಸಿದ ಎನ್‌ಡಿಎಂಎ

Update: 2023-01-14 15:58 GMT

ಹೊಸದಿಲ್ಲಿ, ಜ. 14: ಜೋಶಿಮಠ ಕುಸಿದಿರುವ ಕುರಿತು ಮಾಧ್ಯಮದೊಂದಿಗೆ ಸಂವಹನ ನಡೆಸದಂತೆ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ದತ್ತಾಂಶವನ್ನು ಹಂಚಿಕೊಳ್ಳದಂತೆ ಇಸ್ರೋಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ನಿಷೇಧ ಸೂಚಿಸಿದೆ.

ಉತ್ತರಾಖಂಡದ ಜೋಶಿಮಠ ಕೇವಲ 12 ದಿನಗಳಲ್ಲಿ 5.4 ಸೆ.ಮೀ. ಕುಸಿದಿದೆ ಎಂದು ಇಸ್ರೋದ ವರದಿ ಬಹಿರಂಗಗೊಳಿಸಿದ ದಿನದ ಬಳಿಕ ಎನ್‌ಡಿಎಂಎ ಈ ನಿಷೇಧ ವಿಧಿಸಿದೆ. ಸಂಸ್ಥೆಗಳು ದತ್ತಾಂಶದ ಕುರಿತು ತನ್ನದೇ ಆದ ವ್ಯಾಖ್ಯಾನ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿವೆ ಎಂದು ಅದು ಹೇಳಿದೆ. ‘‘ಜೋಶಿಮಠ ಕುಸಿತಕ್ಕೆ ಸಂಬಂಧಿಸಿದ ದತ್ತಾಂಶವನ್ನು ವಿವಿಧ ಸರಕಾರಿ ಸಂಸ್ಥೆಗಳು ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಬಿಡುಗಡೆ ಮಾಡಿರುವುದೇ ಅಲ್ಲದೆ, ಮಾಧ್ಯಮದೊಂದಿಗೆ ಸಂವಹನ ನಡೆಸಿ ತಮ್ಮದೇ ವ್ಯಾಖ್ಯಾನ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಇದು ಸಂತ್ರಸ್ತ ಜನರಲ್ಲಿ ಮಾತ್ರವಲ್ಲದೆ, ದೇಶದ ನಾಗರಿಕರಲ್ಲಿ ಕೂಡ ಗೊಂದಲ ಮೂಡಿಸುತ್ತದೆ’’ ಎಂದು ಎನ್‌ಡಿಎಂಎಯ ಪತ್ರ ಹೇಳಿದೆ. ಜೋಶಿಮಠದಲ್ಲಿ ಭೂಕುಸಿತವನ್ನು ಅಂದಾಜಿಸಲು ತಜ್ಞರ ತಂಡವೊಂದನ್ನು ರೂಪಿಸಲಾಗಿದೆ ಎಂದು ಗಮನ ಸೆಳೆದ ಎನ್‌ಡಿಎಂಎ, ಈ ವಿಷಯದ ಕುರಿತು ತಮ್ಮ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವಂತೆ ಹಾಗೂ ತಜ್ಞರ ಗುಂಪು ಅಂತಿಮ ವರದಿ ಬಿಡುಗಡೆ ಮಾಡುವ ವರೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯಾವುದನ್ನೂ ಪೋಸ್ಟ್ ಮಾಡದಂತೆ ಇಸ್ರೊ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಎನ್‌ಡಿಎಂಎ ಮನವಿ ಮಾಡಿದೆ.

Similar News