ಬ್ರಸೀಲಿಯಾ ದಂಗೆ ಪ್ರಕರಣ: ಬೊಲ್ಸನಾರೊ ವಿಚಾರಣೆಗೆ ಆದೇಶ
Update: 2023-01-14 23:35 IST
ಬ್ರಸೀಲಿಯಾ, ಜ.14: ಬ್ರೆಝಿಲ್ ರಾಜಧಾನಿ ಬ್ರಸೀಲಿಯಾದಲ್ಲಿ ಜನವರಿ 8ರಂದು ನಡೆದ ದಂಗೆ ಹಾಗೂ ಸರಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರಕರಣದಲ್ಲಿ ಕಟ್ಟಾ ಬಲಪಂಥೀಯ ಮಾಜಿ ಅಧ್ಯಕ್ಷ ಜೈರ್ ಬೊಲ್ಸನಾರೊರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಬ್ರೆಝಿಲ್ ಸುಪ್ರೀಂಕೋರ್ಟ್ ನ್ಯಾಯಾಧೀಶರು ಶುಕ್ರವಾರ ಘೋಷಿಸಿದ್ದಾರೆ.
‘2022ರ ಅಧ್ಯಕ್ಷೀಯ ಚುನಾವಣೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಬೊಲ್ಸನಾರೊ ನೀಡಿದ್ದ ಹೇಳಿಕೆಯ ವೀಡಿಯೊವನ್ನು ಪ್ರಾಸಿಕ್ಯೂಟರ್ ಜನರಲ್ ಕಚೇರಿ(ಪಿಜಿಆರ್) ಯು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಬಳಿಕ ಸುಪ್ರೀಂಕೋರ್ಟ್ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ. ಈ ಹೇಳಿಕೆಯ ಮೂಲಕ ಬೊಲ್ಸನಾರೊ ಸಾರ್ವಜನಿಕವಾಗಿ ಅಪರಾಧ ಕೃತ್ಯಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಪಿಜಿಆರ್ ಪ್ರತಿಪಾದಿಸಿದೆ. ಮರುಚುನಾವಣೆಗೆ ಆಗ್ರಹಿಸಿ ಬೊಲ್ಸನಾರೊ ಅವರ ಸಾವಿರಾರು ಬೆಂಬಲಿಗರು ಜನವರಿ 8ರಂದು ಬ್ರಸೀಲಿಯಾದಲ್ಲಿನ ಸರಕಾರಿ ಕಚೇರಿಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದರು.