×
Ad

ಪಾಕಿಸ್ತಾನ: ಪೊಲೀಸ್ ಠಾಣೆಯ ಮೇಲೆ ದಾಳಿ; ಮೂವರು ಪೊಲೀಸರು ಮೃತ್ಯು

Update: 2023-01-14 23:40 IST

ಇಸ್ಲಾಮಾಬಾದ್, ಜ.14: ಪ್ರಕ್ಷುಬ್ಧ ವಾಯವ್ಯ ನಗರ ಪೇಷಾವರದ ಉಪನಗರದಲ್ಲಿರುವ ಪೊಲೀಸ್ ಠಾಣೆಯ ಮೇಲೆ ಪಾಕಿಸ್ತಾನಿ ತಾಲಿಬಾನ್ ಸಂಘಟನೆಯ ಭಾರೀ ಶಸ್ತ್ರಸಜ್ಜಿತ ಗುಂಪೊಂದು ಶನಿವಾರ ದಾಳಿ ನಡೆಸಿದ್ದು ಹಿರಿಯ ಪೊಲೀಸ್ ಅಧಿಕಾರಿ ಸಹಿತ 3 ಪೊಲೀಸರು ಮೃತಪಟ್ಟಿದ್ದಾರೆ ಎಂದು ಸರಕಾರದ ಉನ್ನತ ಮೂಲಗಳು ಹೇಳಿವೆ.

ಖೈಬರ್ ಜಿಲ್ಲೆಯ ಗಡಿಭಾಗದಲ್ಲಿರುವ ಸರ್ಬಂದ್ ಪೊಲೀಸ್ ಠಾಣೆಯ ಮೇಲೆ 6ರಿಂದ 7ರಷ್ಟು ಭಯೋತ್ಪಾದಕರು ಹ್ಯಾಂಡ್ ಗ್ರೆನೇಡ್‌ಗಳು, ಸ್ವಯಂಚಾಲಿತ ಶಸ್ತ್ರಗಳೊಂದಿಗೆ ದಾಳಿ ನಡೆಸಿ ಮೂವರು ಪೊಲೀಸರನ್ನು ಹತ್ಯೆ ಮಾಡಿದ್ದಾರೆ. ಡಿವೈಎಸ್ಪಿ ಸರ್ದಾರ್ ಹುಸೈನ್ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳು ಸಾವನ್ನಪ್ಪಿದ್ದು ಪಾಕಿಸ್ತಾನಿ ತಾಲಿಬಾನ್ ಎಂದೇ ಹೆಸರಾಗಿರುವ ತೆಹ್ರೀಕಿ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಈ ದಾಳಿಯ ಹೊಣೆ ವಹಿಸಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಕಾಶಿಫ್ ಅಬ್ಬಾಸಿ ಹೇಳಿದ್ದಾರೆ.

ದಾಳಿಯನ್ನು ಖಂಡಿಸಿರುವ ಖೈಬರ್ ಪಖ್ತೂಂಕ್ವಾ ಪ್ರಾಂತದ ಮುಖ್ಯಮಂತ್ರಿ ಮೆಹ್ಮೂದ್ ಖಾನ್, ಭಯೋತ್ಪಾದಕರ ವಿರುದ್ಧದ ಯುದ್ಧದಲ್ಲಿ ಪೊಲೀಸರ ಬಲಿದಾನ ವ್ಯರ್ಥವಾಗದು. ದಾಳಿಕೋರರನ್ನು ಪತ್ತೆಹಚ್ಚುವ ಕಾರ್ಯಾಚರಣೆ ಮುಂದುವರಿದಿದೆ ಎಂದಿದ್ದಾರೆ. ನಮ್ಮ ಕಾರ್ಯಕರ್ತರು ಪೇಷಾವರದಲ್ಲಿ 2 ಪೊಲೀಸ್ ಠಾಣೆಯ ಮೇಲೆ ಲೇಸರ್ ಗನ್‌ಗಳೊಂದಿಗೆ ದಾಳಿ ನಡೆಸಿದ್ದು 4 ಪೊಲೀಸರನ್ನು ಹತ್ಯೆ ಮಾಡಲಾಗಿದೆ. ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಠಾಣೆಯಿಂದ ಶಸ್ತ್ರಾಸ್ತ್ರ ಮತ್ತು ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಟಿಟಿಪಿ ವಕ್ತಾರ ಮುಹಮ್ಮದ್ ಖುರಾಸಾನಿ ಹೇಳಿಕೆ ನೀಡಿದ್ದಾರೆ.

Similar News