ದ್ವೇಷ ಭಾಷಣ ಪ್ರಕರಣ: ಉತ್ತರ ಪ್ರದೇಶದ ಮಾಜಿ ಸಚಿವರನ್ನು 'ತಲೆಮರೆಸಿಕೊಂಡಿರುವ ಆರೋಪಿ' ಎಂದು ಘೋಷಿಸಿದ ನ್ಯಾಯಾಲಯ

Update: 2023-01-15 09:31 GMT

ಬಿಜ್ನೋರ್: ಮಾಜಿ ಸಚಿವ ಅಶೋಕ್ ಕಟಾರಿಯಾ, ಬಿಜೆಪಿ ನಾಯಕಿ ಕವಿತಾ ಚೌಧರಿ ಹಾಗೂ ಶಿವಸೇನೆಯ ರಾಜ್ಯಾಧ್ಯಕ್ಷ ವೀರ್ ಸಿಂಗ್ ಅವರನ್ನು ತಲೆಮರೆಸಿಕೊಂಡಿರುವ ಆರೋಪಿಗಳು ಎಂದು ಬಿಜ್ನೋರ್‌ನ ನ್ಯಾಯಾಲಯವೊಂದು ಘೋಷಿಸಿದ್ದು, 2012ರ ದ್ವೇಷ ಭಾಷಣ ಪ್ರಕರಣದ ವಿಚಾರಣೆಗೆ ಹಾಜರಾಗದ ಅವರೆಲ್ಲರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ ಎಂದು siasat.com ವರದಿ ಮಾಡಿದೆ.

ಇದಕ್ಕೂ ಮುನ್ನ ವಕೀಲರಾದ ಡಿ.ಕೆ‌.ಸಿಂಗ್, ಆರೋಪಿಗಳಿಗೆ ಹಲವು ಬಾರಿ ವಾರೆಂಟ್ ಜಾರಿಗೊಳಿಸಿದರೂ ಅವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂಬ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇದರ ಬೆನ್ನಿಗೇ ಆರೋಪಿಗಳನ್ನು 'ತಲೆಮರೆಸಿಕೊಂಡಿದ್ದಾರೆ' ಎಂದು ಘೋಷಿಸಿದ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಭಿನವ್ ಯಾದವ್, ಅವರೆಲ್ಲರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಗೊಳಿಸಿ,ಮುಂದಿನ ವಿಚಾರಣೆಯನ್ನು ಜನವರಿ 19ರಂದು ನಿಗದಿಗೊಳಿಸಿದ್ದಾರೆ.

ಸೆಪ್ಟೆಂಬರ್ 3, 2012ರಂದು ಬಿಜ್ನೋರ್ ಜಿಲ್ಲೆಯ ಬಸ್ತಾ ಪ್ರದೇಶದಲ್ಲಿನ ಅಢಾಯ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಚಾಯಿತಿ ಸಭೆಯಲ್ಲಿ ಆರೋಪಿಗಳು ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸಬ್ ಇನ್ಸ್‌ಪೆಕ್ಟರ್ ಇಶೇಂದ್ರ ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದರು.

ದ್ವೇಷ ಭಾಷಣದ ಕುರಿತು ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು, ತಮ್ಮ ಭಾಷಣ ನಿಲ್ಲಿಸುವಂತೆ ಕವಿತಾ ಚೌಧರಿಗೆ ಸೂಚಿಸಿದ್ದರು. ಆ ಪಂಚಾಯಿತಿ ಸಭೆಯಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಅಧಿಕಾರಕ್ಕೆ ಬಂದಾಗ ಮಂತ್ರಿಯಾಗಿದ್ದ ಅಶೋಕ್ ಕಟಾರಿಯಾ ಕೂಡಾ ಉಪಸ್ಥಿತರಿದ್ದರು. ಇವರೊಂದಿಗೆ ಶಿವಸೇನೆಯ ರಾಜ್ಯಾಧ್ಯಕ್ಷ ವೀರ್ ಸಿಂಗ್ ಕೂಡಾ ದ್ವೇಷ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಅಪರಾಧ ಸಂಹಿತೆಯ ಸೆಕ್ಷನ್ 144 ಉಲ್ಲಂಘನೆ) ಹಾಗೂ ಸೆಕ್ಷನ್ 153 (ದ್ವೇಷ ಪ್ರಸರಣ) ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.

Similar News