ಮಂಗಳೂರು: ಗುಡ್ಡ ಕುಸಿತದಿಂದ ಕಾರ್ಮಿಕ ಮೃತಪಟ್ಟ ಘಟನೆ; ಗುತ್ತಿಗೆ ಸಂಸ್ಥೆಯ ಇಬ್ಬರು ಮೇಲ್ವಿಚಾರಕರ ಸೆರೆ

Update: 2023-01-15 14:47 GMT

ಮಂಗಳೂರು: ಸುರತ್ಕಲ್ ಸಮೀಪದ ಚೇಳ್ಯಾರಿನ ರೈಲು ಸೇತುವೆ ಬಳಿಯ ಗುಡ್ಡ ಕುಸಿತದಿಂದ ಕಾರ್ಮಿಕ ಮೃತಪಟ್ಟು ಇತರರು ಗಾಯಗೊಂಡ ಘಟನೆಗೆ ಸಂಬಂಧಿಸಿ ಇಬ್ಬರು ಮೇಲ್ವಿಚಾರಕರನ್ನು ಪೊಲೀಸರು ಬಂಧಿಸಿದ್ದಾರೆ.

ಮೋಹನ ವಿಷ್ಣು ನಾಯ್ಕ ಹಾಗೂ ನಾಗರಾಜ ನಾರಾಯಣ ನಾಯ್ಕ ಬಂಧಿತ ಮೇಲ್ವಿಚಾರಕಾಗಿದ್ದಾರೆ. ಕಾಮಗಾರಿ ವೇಳೆ ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳದೆ ಸಾವಿಗೆ ಕಾರಣರಾಗಿದ್ದಾರೆ ಎಂದು ಈ ಆರೋಪಿಗಳ ವಿರುದ್ಧ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜ.21ರಂದು ಸಂಜೆ ತಡೆಗೋಡೆ ನಿರ್ಮಾಣ ಸಂದರ್ಭ ಗುಡ್ಡ ಕುಸಿದು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಓಬಳೇಶಪ್ಪ ಮೃತಪಟ್ಟಿದ್ದರು. ಅವರೊಂದಿಗೆ ಕೆಲಸ ಮಾಡುತ್ತಿದ್ದ ಬಳ್ಳಾರಿಯ ಗೋವಿಂದಪ್ಪ, ತಿಮ್ಮಪ್ಪ, ಈರಣ್ಣ, ಸಂಜೀವ ಹಾಗೂ ಆತನ ಪತ್ನಿ ತೃಪ್ತಿ ಯಾನೆ ರೇಖಾ ಎಂಬವರು ಗಾಯಗೊಂಡಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾಮಗಾರಿಯ ವೇಳೆ ಗುತ್ತಿಗೆದಾರರು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು.

ಕಾಮಗಾರಿಯ ಗುತ್ತಿಗೆಯನ್ನು ಆಂಧ್ರಪ್ರದೇಶ ಮೂಲದ ಗುತ್ತಿಗೆದಾರ ರಾಮಚಂದ್ರ ಎಂಬವರು ಪಡೆದುಕೊಂಡಿದ್ದರು. ತಡೆಗೋಡೆ ಕಾಮಗಾರಿಯ ವೇಳೆ ಸುರಕ್ಷತಾ ಸೂಚನೆಯನ್ನು ನೀಡಿಲ್ಲ. ರೈಲ್ವೆ ಇಲಾಖೆ ಇಂಜಿನಿಯರ್‌ಗಳಿರಲಿಲ್ಲ. ರೈಲು ಹಾದು ಹೋಗುವ ಸಮಯವನ್ನೂ ತಿಳಿಸಿರಲಿಲ್ಲ. ಅದು ಭೂಕುಸಿತವಾಗುವ ಸ್ಥಳ ಎಂದು ತಿಳಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಿ ಮೇಲ್ವಿಚಾರಕರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇತರೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು  ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

Similar News