ಎಲ್ಎಸಿಯಲ್ಲಿ ಯಾವುದೇ ಅನಿರೀಕ್ಷಿತ ಸಂದರ್ಭ ಎದುರಿಸಲು ಭಾರತೀಯ ಸೇನೆಯು ಸನ್ನದ್ಧವಾಗಿದೆ: ಜ.ಮನೋಜ್ ಪಾಂಡೆ

Update: 2023-01-15 17:39 GMT

ಬೆಂಗಳೂರು,ಜ.15: ಭಾರತೀಯ ಸೇನೆಯು ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಬಲವಾದ ರಕ್ಷಣಾ ವ್ಯವಸ್ಥೆಯನ್ನು ಕಾಯ್ದುಕೊಂಡಿದೆ ಮತ್ತು ಯಾವುದೇ ಅನಿರೀಕ್ಷಿತ ಸಂದರ್ಭವನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ ಪಾಂಡೆ ಅವರು ರವಿವಾರ ಇಲ್ಲಿ ಹೇಳಿದರು.

ಭಾರತೀಯ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ದಿಲ್ಲಿಯಿಂದ ಹೊರಗೆ, ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸೇನಾ ದಿನಾಚರಣೆಯಲ್ಲಿ ಮಾತನಾಡುತ್ತಿದ್ದ ಅವರು,ಎಲ್ಎಸಿಯುದ್ದಕ್ಕೂ ದುರ್ಗಮ ಪ್ರದೇಶಗಳು ಮತ್ತು ಪ್ರತಿಕೂಲ ಹಮಾಮಾನದ ಹೊರತಾಗಿಯೂ ಭಾರತೀಯ ಸೇನಾ ಪಡೆಗಳು ಈ ಪ್ರದೇಶಗಳಲ್ಲಿ ನಿರ್ಭಯವಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಶಸ್ತ್ರಾಸ್ತ್ರಗಳು ಉಪಕರಣಗಳು ಮತ್ತು ಸೌಲಭ್ಯಗಳ ರೂಪದಲ್ಲಿ ಅವುಗಳಿಗೆ ಎಲ್ಲ ಅಗತ್ಯ ಬೆಂಬಲವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಪಶ್ಚಿಮ ಗಡಿಯಲ್ಲಿನ ಸ್ಥಿತಿ ಕುರಿತಂತೆ ಅವರು,ನಿಯಂತ್ರಣ ರೇಖೆ (ಎಲ್ಒಸಿ)ಯುದ್ದಕ್ಕೂ ಕದನ ವಿರಾಮವನ್ನು ಕಾಯ್ದುಕೊಳ್ಳಲಾಗಿದೆ. ಕದನ ವಿರಾಮ ಉಲ್ಲಂಘನೆಗಳು ಕಡಿಮೆಯಾಗಿದ್ದು,ಗಡಿಯಾಚೆ ಭಯೋತ್ಪಾದನೆ ಮೂಲಸೌಕರ್ಯಗಳ ಅಸ್ತಿತ್ವವು ಮುಂದುವರಿದಿದೆ. ಆದರೆ ನಮ್ಮ ಯೋಧರು ಗಡಿಯಲ್ಲಿ ನುಸುಳುವಿಕೆ ಪ್ರಯತ್ನಗಳನ್ನು ನಿರಂತರವಾಗಿ ತಡೆಯುತ್ತಿದ್ದಾರೆ ಎಂದು ತಿಳಿಸಿದರು.

ಜಮ್ಮು-ಕಾಶ್ಮೀರದಲ್ಲಿ ಅಂತರರಾಷ್ಟ್ರೀಯ ಗಡಿಯಾಚೆಯಿಂದ ಮಾದಕ ದ್ರವ್ಯಗಳು ಮತ್ತು ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆಗಾಗಿ ಡ್ರೋನ್ಗಳನ್ನು ಬಳಸಿದ ಹಲವಾರು ನಿದರ್ಶನಗಳಿವೆ ಎಂದ ಅವರು,ಆದರೆ ಡ್ರೋನ್ ನಿಗ್ರಹ ಜಾಮರ್ಗಳು,ಸ್ಪೂಫರ್ಗಳು ಮತ್ತು ಇತರ ತಂತ್ರಜ್ಞಾನಗಳು ಈ ಪ್ರಯತ್ನಗಳನ್ನು ಯಶಸ್ವಿಯಾಗಿ ವಿಫಲಗೊಳಿಸುತ್ತಿವೆ ಎಂದರು.                      

ಅಗ್ನಿಪಥಕ್ಕೆ ಉತ್ತಮ ಪ್ರತಿಕ್ರಿಯೆ

ಅಗ್ನಿಪಥ ಯೋಜನೆಯನ್ನು ಪ್ರಗತಿಪರ ಹೆಜ್ಜೆ ಎಂದು ಬಣ್ಣಿಸಿದ ಜ.ಪಾಂಡೆ,ದೇಶಾದ್ಯಂತ ಅಗ್ನಿವೀರರ ಭರ್ತಿ ರ್ಯಾಲಿಗಳಿಗೆ ಯುವಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿದೆ. ಮೊದಲ ತಂಡದ ಪುರುಷ ಅಗ್ನಿವೀರರಿಗೆ ತರಬೇತಿಯು ಆರಂಭಗೊಂಡಿದ್ದು, ಮಹಿಳೆಯರಿಗೆ ತರಬೇತಿ ಈ ವರ್ಷದ ಮಾರ್ಚ್ನಿಂದ ಆರಂಭಗೊಳ್ಳಲಿದೆ ಎಂದರು.

1949ರಲ್ಲಿ ಆರಂಭಗೊಂಡಿದ್ದ ಸೇನಾ ದಿನಾಚರಣೆಯನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನ ಎಂಇಜಿ ಆ್ಯಂಡ್ ಸೆಂಟರ್ನ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಇದು 75ನೇ ಸೇನಾ ದಿನಾಚರಣೆಯಾಗಿದೆ.

ಆಕರ್ಷಕ ಪಥ ಸಂಚಲನ,ಮಿಲಿಟರಿ ಪ್ರದರ್ಶನ,ಆಗಸದಲ್ಲಿ ಹೆಲಿಕಾಪ್ಟರ್ ಮೂಲಕ ತ್ರಿವರ್ಣ ಧ್ವಜದ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದವು. ಈ ಸಂದರ್ಭದಲ್ಲಿ ಜ.ಪಾಂಡೆ ಅವರು ಶೌರ್ಯ ಪ್ರಶಸ್ತಿಗಳನ್ನು ವಿತರಿಸಿದರು.

1949,ಜ.15ರಂದು ಜನರಲ್ (ನಂತರ ಫೀಲ್ಡ್ ಮಾರ್ಷಲ್) ಕೆ.ಎಂ.ಕಾರಿಯಪ್ಪ ಅವರು ಕೊನೆಯ ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದರು. ಇದರ ನೆನಪಿಗಾಗಿ ಪ್ರತಿ ವರ್ಷ ಜ.15ರಂದು ಸೇನಾ ದಿನವನ್ನು ಆಚರಿಸಲಾಗುತ್ತಿದೆ.

Similar News