​ತೆಲುಗು ರಾಜ್ಯಗಳ ನಡುವೆ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಿ ಚಾಲನೆ

Update: 2023-01-15 18:30 GMT

ಹೈದರಾಬಾದ್, ಜ. 15: ತೆಲಂಗಾಣದ ಸಿಕಂದರಾಬಾದ್ ಹಾಗೂ ಆಂಧ್ರಪ್ರದೇಶದ ಬಂದರು ನಗರ ವಿಶಾಖಪಟ್ಟಣಂ ನಡುವಿನ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಕರ ಸಂಕ್ರಾಂತಿಯ ಶುಭ ದಿನವಾದ ರವಿವಾರ ಚಾಲನೆ ನೀಡಿದರು. 

ಎರಡು ತೆಲುಗು ರಾಜ್ಯಗಳ ನಡುವೆ ಸಂಚರಿಸುವ ರೈಲು ಇದಾಗಿದ್ದು,  ಸಿಕಂದರಾಬಾದ್‌ನಿಂದ ವಿಶಾಖಪಟ್ಟಣಂಗೆ ಸಂಚಾರಕ್ಕೆ 8 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ.
ಸೇನಾ ದಿನಾಚರಣೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತಿ ಹೊಂದಿದ ಸೈನಿಕರಿಗೆ ಪ್ರಧಾನಿ ಅವರು ಗೌರವ ಸಲ್ಲಿಸಿದರು. ಅಲ್ಲದೆ, ದೇಶ ಹಾಗೂ ಗಡಿಗಳನ್ನು ರಕ್ಷಿಸುವಲ್ಲಿ ಸೈನಿಕರ ಬದ್ಧತೆಯನ್ನು ಶ್ಲಾಘಿಸಿ, ಅವರ ಶೌರ್ಯಕ್ಕೆ ಸಾಟಿ ಇಲ್ಲ ಎಂದರು. 

ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ವಂದೇ ಭಾರತ್ ರೈಲು ತೆಲಂಗಾಣ ಹಾಗೂ ಆಂಧ್ರಪ್ರದೇಶದ ಸಂಸ್ಕೃತಿಯ ನಡುವೆ ನಂಟು ಕಲ್ಪಿಸುತ್ತದೆ ಎಂದರು.

ವಂದೇ ಭಾರತ್ ಭಾರತದ ನಿಜವಾದ ಪ್ರತಿಬಿಂಬವಾಗಿದೆ. ಅವಲಂಬನೆಯ ಸ್ಥಿತಿಯಿಂದ ಹೊರಬಂದು ಸ್ವಾವಲಂಬನೆ ಕಡೆಗೆ ಚಲಿಸುವ ಸಂಕೇತವಾಗಿದೆ ಎಂದು ಅವರು ಹೇಳಿದರು.

ಈ ವಂದೇ ಭಾರತ್ ರೈಲಿನ ನಿಯಮಿತ ಸೇವೆಗಳು ಜನವರಿ 16ರಂದು ಆರಂಭವಾಗಲಿದ್ದು, ಶನಿವಾರದಿಂದ ಮುಂಗಡ ಕಾಯ್ದಿರಿಸುವಿಕೆ ಆರಂಭವಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. 

ವಿಶಾಖಪಟ್ಟಣಂ ಸಿಕಂದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 4.45ಕ್ಕೆ ಸಂಚಾರ ಆರಂಭಿಸಲಿದ್ದು, ಅಪರಾಹ್ನ 2.15ಕ್ಕೆ ಸಿಕಂದರಾಬಾದ್ ತಲುಪಲಿದೆ ಎಂದು ಅದು ತಿಳಿಸಿದೆ.

Similar News