ಶ್ರೀಲಂಕಾ ವಿರುದ್ಧ ದಾಖಲೆ ಅಂತರದ ಗೆಲುವಿನಲ್ಲಿ ಸಿರಾಜ್ ಕೊಡುಗೆ ನಿರ್ಲಕ್ಷಿಸಿದ ಜಯ್ ಶಾ ಗೆ ನೆಟ್ಟಿಗರ ತರಾಟೆ

Update: 2023-01-16 15:22 GMT

ಹೊಸದಿಲ್ಲಿ: ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ  ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 317 ರನ್ ಗಳ ದಾಖಲೆ ಅಂತರದ ಗೆಲುವಿನಲ್ಲಿ ವೇಗದ ಬೌಲರ್ ಮುಹಮ್ಮದ್ ಸಿರಾಜ್ (Mohammed Siraj) ಕೊಡುಗೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ  ಶುಭಮನ್ ಗಿಲ್ ಶತಕಗಳ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 390 ರನ್ ಗಳಿಸಿತ್ತು. ಮುಹಮ್ಮದ್ ಸಿರಾಜ್  ಅತ್ಯುತ್ತಮ  ಬೌಲಿಂಗ್ ಮಾಡಿ ನಾಲ್ಕು ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.  ಶ್ರೀಲಂಕಾ 22 ಓವರ್ ಗಳಲ್ಲಿ 73 ರನ್ ಗಳಿಸಿ ತನ್ನ ಹೋರಾಟ ಕೊನೆಗೊಳಿಸಿತು.

ಆದಾಗ್ಯೂ, ಶಾ ಅವರು  ಭಾರತದ ಗೆಲುವಿನಲ್ಲಿ ನೀಡಿದ ಕೊಡುಗೆಗಾಗಿ ಆಟಗಾರರಿಗೆ ಟ್ವಿಟರ್ ನಲ್ಲಿ ವೈಯಕ್ತಿಕವಾಗಿ ಧನ್ಯವಾದಗಳನ್ನು ತಿಳಿಸುವಾಗ ಕೊಹ್ಲಿ ಹಾಗೂ  ಗಿಲ್ ಅವರನ್ನು ಮಾತ್ರ ಟ್ಯಾಗ್ ಮಾಡಿದರು ಹಾಗೂ ಸಿರಾಜ್ ಅವರ ಅದ್ಭುತ ಬೌಲಿಂಗ್ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿರಲಿಲ್ಲ.

"ಇದು ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾದ ಸಂಪೂರ್ಣ ಪ್ರಾಬಲ್ಯದ ಪ್ರದರ್ಶನವಾಗಿದೆ. ನಾವು ಎರಡು ವಾರಗಳಲ್ಲಿ ಎರಡು ಸರಣಿಗಳನ್ನು ಗೆದ್ದಿದ್ದೇವೆ.  ಪ್ರತಿಭೆ ಹಾಗೂ ಕಠಿಣ ಪರಿಶ್ರಮದ ಅದ್ಭುತ ದರ್ಶನವಾಗಿದೆ. ಇಡೀ ತಂಡಕ್ಕೆ  ಧನ್ಯವಾದಗಳು ವಿಶೇಷವಾಗಿ ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್  ಅವರ ಪ್ರದರ್ಶನಕ್ಕಾಗಿ ಅಭಿನಂದನೆಗಳು” ಎಂದು ಶಾ ಟ್ವೀಟಿಸಿದ್ದರು.

ಬಿಸಿಸಿಐ ಕಾರ್ಯದರ್ಶಿ ಶಾ ಅವರು ವಿಕೆಟ್ ಪಡೆದ ನಂತರ ಸಿರಾಜ್ ಅವರ ಸಂಭ್ರಮಾಚರಣೆಯ ಫೋಟೋವನ್ನು ಹಂಚಿಕೊಂಡಿದ್ದರೂ ಕೂಡ ಚೆಂಡಿನಲ್ಲಿ ವೀರೋಚಿತ ಪ್ರದರ್ಶನ ನೀಡಿದ ವೇಗದ ಬೌಲರ್ ಅನ್ನು ನಿರ್ಲಕ್ಷಿಸುವ ಶಾ ನಿರ್ಧಾರಕ್ಕೆ ಅನೇಕ ಟ್ವಿಟರ್ ಬಳಕೆದಾರರು ಬೇಸರಗೊಂಡಿದ್ದಾರೆ.

ಸರ್, ಸಿರಾಜ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಅವರನ್ನು ಶ್ಲಾಘಿಸಬಹುದಿತ್ತು. ಓಹ್... ಕ್ಷಮಿಸಿ, ಅವರು ಮುಸ್ಲಿಂ’ ಎಂದು ಓರ್ವ ಟ್ವಿಟರ್ ಬಳಕೆದಾರರು ಟ್ವೀಟಿಸಿದರು.

"ಸರ್ , ನೀವು ಮುಹಮ್ಮದ್ ಸಿರಾಜ್ ಬಗ್ಗೆ ಯಾಕೆ ಏನು ಹೇಳಿಲ್ಲ? “ನೀವು ಸಿರಾಜ್  ಅವರನ್ನು ಪ್ರಶಂಸಿಸಲು ಹೇಗೆ ಮರೆಯುತ್ತೀರಿ?” ಎಂದು ಮತ್ತೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಲಯಾಳಂ ನಟ ಸುನೀಲ್ ಸುಗಧ ಕಾರಿನ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು

Similar News