ಜೋಶಿಮಠ ಭೂಕುಸಿತ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೋರಿದ ಮನವಿ ತಿರಸ್ಕರಿಸಿದ ಸುಪ್ರೀಂ

Update: 2023-01-16 16:03 GMT

ಹೊಸದಿಲ್ಲಿ, ಜ. 16: ಉತ್ತರಾಖಂಡದ ಜೋಶಿಮಠ(Joshimath) ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನ್ಯಾಯಾಲಯ ಮಧ್ಯಪ್ರವೇಶಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಸೈದ್ಧಾಂತಿಕ ನೆಲೆಯಲ್ಲಿ ಈ ವಿಷಯವನ್ನು ಉಚ್ಚ ನ್ಯಾಯಾಲಯ ವಿಸ್ತೃತವಾಗಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿತು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ(D Y. Chandrachud) ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ(P. S. Narasimha) ಹಾಗೂ ಜೆ.ಬಿ. ಪರ್ದಿಪಾಲ(J.B. Pardiwala) ಅವರನ್ನು ಒಳಗೊಂಡ ಪೀಠ, ಈ ಅರ್ಜಿಯನ್ನು ಉತ್ತರಾಖಂಡ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವಂತೆ ದೂರುದಾರ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಸೂಚಿಸಿತು. ಸೈದ್ಧಾಂತಿಕವಾಗಿ ನಾವು ಇದನ್ನು ಪರಿಹರಿಸಲು ಉಚ್ಚ ನ್ಯಾಯಾಲಯಕ್ಕೆ ಅವಕಾಶ ನೀಡಬೇಕು. ನಾವು ನಿಮಗೆ ಉಚ್ಚ ನ್ಯಾಯಾಲಯ ಸಂಪರ್ಕಿಸಲು ಅನುಮತಿ ನೀಡುತ್ತೇವೆ ಎಂದು ಪೀಠ ಹೇಳಿತು.

 ಈ ಪ್ರಕರಣದಲ್ಲಿ ಗಮನ ಸೆಳೆಯಲಾದ ನಿರ್ದಿಷ್ಟ ಅಂಶಗಳನ್ನು ಸೂಕ್ತ ಪರಿಹಾರಕ್ಕಾಗಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಬಹುದು ಎಂದು ಪೀಠ ತಿಳಿಸಿತು.

Similar News