ಪ್ರತಿಪಕ್ಷಗಳಿಂದ ಪ್ರಧಾನಿ ವಿರುದ್ಧ ಆಧಾರರಹಿತ ಆರೋಪಗಳು: ನಿರ್ಮಲಾ ಸೀತಾರಾಮನ್

Update: 2023-01-16 17:32 GMT

ಹೊಸದಿಲ್ಲಿ,ಜ.16: ಮುಂಬರುವ ಲೋಕಸಭಾ ಚುನಾವಣೆಗಳ ಸೆಮಿ-ಫೈನಲ್ ಎಂದೇ ಪರಿಗಣಿಸಲಾಗಿರುವ, ಮುಂದಿನ ವರ್ಷ ಒಂಭತ್ತು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿರಿಸಿರುವ ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸೋಮವಾರ ಇಲ್ಲಿ ಆರಂಭಗೊಂಡಿದೆ.

ಬೆಳಿಗ್ಗೆ ದಿಲ್ಲಿಯಲ್ಲಿ ಬೃಹತ್ ರೋಡ್ ಶೋ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ(Narendra Modi) ಸಭೆಯಲ್ಲಿ ಉಪಸ್ಥಿತರಿದ್ದರು. ಕೇಂದ್ರದ 35 ಸಚಿವರು,12 ಮುಖ್ಯಮಂತ್ರಿಗಳು ಮತ್ತು 37 ಪ್ರಾದೇಶಿಕ ಮುಖ್ಯಸ್ಥರೂ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು 350 ಕಾರ್ಯಕರ್ತರೂ ಸಭೆಗೆ ಹಾಜರಾಗುವ ನಿರೀಕ್ಷೆಯಿದೆ.

ಸಭೆಯ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತಿಪಕ್ಷಗಳ ವಿರುದ್ಧ ದಾಳಿಯನ್ನು ನಡೆಸಿ,ವಿವಿಧ ವಿಷಯಗಳ ಕುರಿತು ಅವುಗಳ ಆರೋಪಗಳು ವಿಫಲಗೊಂಡಿವೆ ಎಂದು ಹೇಳಿದರು. ಪೆಗಾಸಸ್,ರಫೇಲ್,ಈ.ಡಿ.,ಸೆಂಟ್ರಲ್ ವಿಸ್ಟಾ,ಮೀಸಲಾತಿ ಮತ್ತು ನೋಟು ನಿಷೇಧ...ಇವೆಲ್ಲ ಪ್ರತಿಪಕ್ಷಗಳು ಆಧಾರರಹಿತ ಹೇಳಿಕೆಗಳ ಮೂಲಕ ಪ್ರಧಾನಿಯವರ ವಿರುದ್ಧ ಆರೋಪ ಮಾಡಿದ್ದ ವಿಷಯಗಳಾಗಿದ್ದವು,ಆದರೆ ಈ ಆರೋಪಗಳೆಲ್ಲ ನ್ಯಾಯಾಲಯದಲ್ಲಿ ನಿಲ್ಲಲಿಲ್ಲ ಎಂದರು.

ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ರವಿಶಂಕರ ಪ್ರಸಾದ ಅವರು 2014ರಿಂದ ದೇಶದ ಸಾಧನೆಗಳನ್ನು ಪ್ರಮುಖವಾಗಿ ಬಿಂಬಿಸಿದರು. ಕಾರುಗಳು ಮತ್ತು ಸೆಲ್ಫೋನ್ಗಳ ತಯಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತವು ಮುನ್ನಡೆಯನ್ನು ಸಾಧಿಸಿದೆ ಎಂದರು.

Similar News