ಉನ್ನತ ಶಿಕ್ಷಣದ ದುಸ್ಥಿತಿ ಮತ್ತು ವಿದೇಶಿ ವಿಶ್ವವಿದ್ಯಾನಿಲಯಗಳ ಪ್ರವೇಶ: ಕೋಣೆಯೊಳಗಿನ ಆನೆ

Update: 2023-01-17 04:25 GMT

ವಿದೇಶಿ ವಿವಿಗಳು ದೇಶದೊಳಗೆ ಪ್ರವೇಶ ಪಡೆದ ನಂತರ ಮೇಲೆ ಉಲ್ಲೇಖಿಸಿದ ಸಮಸ್ಯೆಗಳು ಸಹಜವಾಗಿ ಎದುರಾಗುತ್ತವೆ. ಇದು ನಿರೀಕ್ಷಿತ. ಇದರಲ್ಲಿ ಉತ್ಪ್ರೇಕ್ಷೆಯಿಲ್ಲ. ಪ್ರಶ್ನೆಯಿರುವುದು ಸರಕಾರ ಇದಕ್ಕಾಗಿ ಯಾವ ಸಿದ್ಧತೆಗಳನ್ನು ಮಾಡಿಕೊಂಡಿದೆ? ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಯನ್ನು, ಅಸ್ತಿತ್ವವನ್ನು ರಕ್ಷಿಸಲು ಅದರ ಬಳಿ ಯಾವ ಕಾರ್ಯಯೋಜನೆಗಳಿವೆ? ಈ ಕುರಿತು ಕರಡು ನೀತಿಯಲ್ಲಾಗಲಿ, ಯುಜಿಸಿ ಬಳಿಯಲ್ಲಾಗಲಿ ಯಾವುದೇ ಉತ್ತರವಿಲ್ಲ. ಸಾಮಾಜಿಕ, ಆರ್ಥಿಕ ಅಸಮಾನತೆ ಇಲ್ಲಿನ ಮುಖ್ಯ ಶೈಕ್ಷಣಿಕ ಸಮಸ್ಯೆ. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳ ನಂತರವೂ ಇಂದಿಗೂ ವಂಚಿತ ಸಮುದಾಯಗಳ ಮೊದಲ ತಲೆಮಾರಷ್ಟೇ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವಂತಹ ಪರಿಸ್ಥಿತಿಯಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳದೆ ವಿದೇಶಿ ವಿವಿಗಳ ಸ್ಥಾಪನೆಗೆ ಅನುಮೋದನೆ ಕೊಡುವುದಕ್ಕೆ ಯಾವುದೇ ತರ್ಕವಿಲ್ಲ ಮತ್ತು ಇದು ನ್ಯಾಯಪ್ರಜ್ಞೆಯಲ್ಲ.


ಪೀಠಿಕೆ

ಪ್ರತಾಪ್ ಭಾನು ಮೆಹ್ತಾ ಅವರು ಯುಜಿಸಿಯನ್ನು 'ವಿಶ್ವವಿದ್ಯಾನಿಲಯ ಗಿಮಿಕ್ ಆಯೋಗ' ಎಂದು ಕರೆಯುತ್ತಾರೆ. ಇದು ನಿಜ. ಕಳೆದ ಎರಡು ದಶಕಗಳಿಂದ ಯುಜಿಸಿಯು ಉನ್ನತ ಶಿಕ್ಷಣದ ಗುಣಮಟ್ಟ ಕಾಪಾಡುವಲ್ಲಿ, ತಲಸ್ಪರ್ಶಿ ಅಧ್ಯಯನ, ಸಂಶೋಧನೆ ನಡೆಸುವಲ್ಲಿ, ಅಗತ್ಯ ಆರ್ಥಿಕ ಅನುದಾನ ಒದಗಿಸುವಲ್ಲಿ, ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಜಾಗತಿಕ ಮಟ್ಟದಲ್ಲಿನ ಶೈಕ್ಷಣಿಕ ಬದಲಾವಣೆಗಳನ್ನು ಒಳಗೊಳ್ಳುವ, ಆಧುನಿಕ ಪ್ರಜ್ಞೆಯುಳ್ಳ, ವೈಜ್ಞಾನಿಕ ಮನೋಧರ್ಮದ, ಮೌಲಿಕವಾದ ಸಂಶೋಧನೆ ಕೇಂದ್ರಿತ ಅಧ್ಯಯನವನ್ನು, ವಿಮರ್ಶಾತ್ಮಕ ಶಿಕ್ಷಣವನ್ನು ರೂಪಿಸುವುವಲ್ಲಿಯೂ ಸಂಪೂರ್ಣವಾಗಿ ಎಡವಿದೆ. ಕಳೆದ ಎಂಟು ವರ್ಷಗಳಿಂದ ಆರೆಸ್ಸೆಸ್‌ನ ಶಾಖಾ ಕೇಂದ್ರದಂತೆ ನಡೆದುಕೊಳ್ಳುತ್ತಿರುವ ಯುಜಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಶತಮಾನಗಳಷ್ಟು ಹಿಂದಿನ ಚಾತುರ್ವರ್ಣ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಇತಿಹಾಸವನ್ನು ಪುನರಚಿಸುವ ಆರೆಸ್ಸೆಸ್‌ನ ಮತೀಯವಾದಿ-ಬ್ರಾಹ್ಮಣೀಕರಣ ಸಿದ್ಧಾಂತದ ಅನುಷ್ಠಾನಕ್ಕೆ ವೇದಿಕೆಯಾಗಿ ಬಳಕೆಯಾಗುತ್ತಿದೆ. ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಇತ್ತೀಚೆಗೆ ಯುಜಿಸಿ ಅಧ್ಯಕ್ಷರಾದ ಜಗದೀಶ ಕುಮಾರ್ ಅವರು ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಭಾರತದಲ್ಲಿ ಅನುಮತಿ ಕೊಡಲಾಗುವುದೆಂದೂ ಮತ್ತು ಅವರು ಆಫ್‌ಲೈನ್ ಮೂಲಕ ಶಿಕ್ಷಣ ಒದಗಿಸಬೇಕೆಂದು ಹೇಳಿದ್ದಾರೆ. ನಿಜ. ಪ್ರಸಕ್ತ ಸಂದರ್ಭದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಮತ್ತು ಹಣಕಾಸು ಅನುದಾನದಲ್ಲಿ ಸಮಗ್ರ ಬದಲಾವಣೆಯ ಅಗತ್ಯವಿದೆ. ಇಂದು ಕೌಶಲ್ಯ ಮತ್ತು ಜ್ಞಾನ ಎರಡನ್ನು ಒದಗಿಸುವಂತಹ ದೂರದೃಷ್ಟಿಯುಳ್ಳ ಶಿಕ್ಷಣ ನೀತಿಯ ಅವಶ್ಯಕತೆಯಿದೆ. ಈ ತಾತ್ವಿಕ ಅಂಶಗಳ ಕಾರಣಕ್ಕೆ ಶಿಕ್ಷಣದಲ್ಲಿನ ಬದಲಾವಣೆಗಳನ್ನು ಸ್ವಾಗತಿಸಬೇಕಾಗುತ್ತದೆ. ಆದರೆ ಯುಜಿಸಿಯ ನೀತಿಗಳು ವಿಶ್ವಾಸಾರ್ಹವೆ? ಇದರ ಸ್ವರೂಪವೇನು? ಇದನ್ನು ಜಾರಿಗೊಳಿಸಲು ಪೂರ್ವ ಸಿದ್ಧತೆಗಳೇನು? ಎನ್ನುವ ಪ್ರಶ್ನೆಗಳಿಗೆ ಉತ್ತರಗಳೂ ಸಹ ನಿರಾಶಾದಾಯಕವಾಗಿದೆ.

ಈ 'ವಿವಿ ಗಿಮಿಕ್ ಆಯೋಗ'ದ ಮರೆ ಮೋಸ, ದಿಕ್ಕು ದೆಸೆಯಿಲ್ಲದ ಶಿಕ್ಷಣ ನೀತಿಯಲ್ಲಿ, ಅದರ ಪರಿಕಲ್ಪನೆಯಲ್ಲಿ ಮೂಲಭೂತ ಸಮಸ್ಯೆಯಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ ವಿದೇಶಿ ವಿವಿಗಳ ಸ್ಥಾಪನೆಗೆ ಅನುಮೋದಿಸಿರುವುದು ಕಳವಳದ ಸಂಗತಿ. ಇಲ್ಲಿನ ಕಳಪೆ ಗುಣಮಟ್ಟದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸದೆ ವಿದೇಶಿ ವಿವಿಗಳ ಆಸೆ ತೋರಿಸುವುದು ಪ್ರಶ್ನಾರ್ಹವಾಗುತ್ತದೆ. ಮಾಮೂಲಿ ಸಂದರ್ಭದಲ್ಲಿ ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಅನುಮತಿ ಕೊಡುವುದರ ಉದ್ದೇಶವು ಜಾಗತಿಕ ಶಿಕ್ಷಣದ ಗುಣಮಟ್ಟವನ್ನು ಬಳಸಿಕೊಂಡು ಸ್ಥಳೀಯ ಪ್ರತಿಭೆಯನ್ನು ರೂಪಿಸುವುದು, ಸಂಶೋಧನೆಯಲ್ಲಿ ಆವಿಷ್ಕಾರಗಳನ್ನು ಸಾಧಿಸುವುದು, ಇಲ್ಲಿನ ವಿದ್ಯಾರ್ಥಿಗಳು ವಿದೇಶಕ್ಕೆ ವಲಸೆ ಹೋಗುವುದನ್ನು ತಡೆಯುವುದು, ಆ ಮೂಲಕ ಪ್ರತಿಭಾ ಪಲಾಯನ ಮತ್ತು ಶೈಕ್ಷಣಿಕ ವೆಚ್ಚವನ್ನು ಕಡಿಮೆ ಮಾಡುವುದು, ಇಲ್ಲಿನ ಶಿಕ್ಷಣ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸುವುದು, ಉದ್ಯೋಗ ಸೃಷ್ಟಿ ಇತ್ಯಾದಿ ಕಾರಣಗಳಿವೆ. ಈ ಅನುಕೂಲಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಮತ್ತು ಅಗತ್ಯವೂ ಸಹ.

ಆದರೆ ಇದರಾಚೆಗೆ ಕೆಲ ಗಂಭೀರ ಸಮಸ್ಯೆಗಳಿವೆ. ಯುಜಿಸಿ ಪ್ರಕಟಿಸಿರುವ ಕರಡು ನೀತಿಯಲ್ಲಿ ನಿಬಂಧನೆಗಳು, ನಿಯಂತ್ರಣಗಳು, ವಿನಾಯಿತಿ ಮುಂತಾದವುಗಳ ಹೊರತಾಗಿ ಉನ್ನತ ಶಿಕ್ಷಣಕ್ಕೆ ಸಂಬಂಧಿತ ಮತ್ಯಾವುದೇ ವಿಚಾರಗಳ ಪ್ರಸ್ತಾವವಿಲ್ಲ. ಇದು ಆಡಳಿತಾತ್ಮಕ ಸುತ್ತೋಲೆಯಂತಿದೆಯೇ ಹೊರತು ಶೈಕ್ಷಣಿಕ ಕರಡು ನೀತಿಯಂತಿಲ್ಲ. ನಮ್ಮ ನಡುವಿನ ಗಂಭೀರ ಸಮಸ್ಯೆಗಳನ್ನು ಚರ್ಚಿಸದೆ ನಿರ್ಲಕ್ಷಿಸಿ ವಿಷಯಾಂತರದ ಮೂಲಕ ವ್ಯರ್ಥ ಕಾಲಹರಣ ಮಾಡುವುದನ್ನು ಕೋಣೆಯೊಳಗಿನ ಆನೆ (elephant in the room) ಎಂದು ರೂಪಕವಾಗಿ ಕರೆಯುತ್ತಾರೆ. ಇಂದು ಕೇಂದ್ರ ಸರಕಾರ ಇದನ್ನೇ ಅನುಸರಿಸುತ್ತಿದೆ.

ಪ್ರಸ್ತಾವಗಳು ಮತ್ತು ಮಿತಿಗಳು
* ಮೊದಲನೇ ಪ್ರಶ್ನೆಯೆಂದರೆ ಜಾಗತಿಕವಾಗಿ ಅತ್ಯುತ್ತಮ ರ್ಯಾಂಕಿಂಗ್ ಪಡೆದ ವಿದೇಶಿ ವಿವಿಗಳು ಭಾರತಕ್ಕೆ ತಮ್ಮ ಸಂಸ್ಥೆಗಳನ್ನು ಸ್ಥಾಪಿಸಲು ಯಾಕೆ ಮುಂದಾಗುತ್ತವೆ? ಪ್ರತಾಪ್ ಭಾನು ಮೆಹ್ತ ಅವರು ''ಪ್ರಿನ್ಸಸ್ಟನ್, ಯಾಲೆ, ಆಕ್ಸ್‌ಫರ್ಡ್, ಸ್ಟಾಂಡ್‌ಫೋರ್ಡ್ ಮುಂತಾದ ವಿವಿಗಳು ಯಾವ ಕಾರಣಕ್ಕೆ ಜಾಗತಿಕವಾಗಿ ಲಿಬರಲ್ ಆದಂತಹ ದೇಶಗಳಲ್ಲಿ ತಮ್ಮ ಶಾಖೆಗಳನ್ನು ತೆರೆಯದೆ ಕೇವಲ ಇಂಡಿಯಾದಲ್ಲಿ ಮಾತ್ರ ಸ್ಥಾಪಿಸಲು ಮುಂದಾಗುತ್ತವೆ? ಬೇರೆ ದೇಶಗಳಲ್ಲಿ ತಮ್ಮ ವಿವಿಗಳನ್ನು ಸ್ಥಾಪಿಸಲು ಅವರಿಗೆ ರಚನಾತ್ಮಕವಾಗಿ ಮತ್ತು ಆರ್ಥಿಕವಾಗಿ ಯಾವ ಅಡಚಣೆಗಳಿವೆ? ಗಮನಾರ್ಹ ಸಂಗತಿಯೆಂದರೆ ಬೇರೆ ದೇಶಗಳಲ್ಲಿ ತಮ್ಮ ಶಾಖೆಗಳನ್ನು ಹೊಂದಿರುವ ಈ ವಿದೇಶಿ ವಿವಿಗಳಿಗೆ ಸ್ಥಳೀಯ ಸರಕಾರಗಳಿಂದ ಸಬ್ಸಿಡಿ ದೊರಕುತ್ತದೆ ಎನ್ನುವ ಸಂಗತಿ ಗಮನಾರ್ಹ'' ಎಂದು ಬರೆಯುತ್ತಾರೆ

* ಸರಕಾರದಿಂದ ಭರಪೂರ ರಿಯಾಯಿತಿಯಿಲ್ಲದೆ ಅತ್ಯುತ್ತಮ ಎಂದು ಕರೆಯಲ್ಪಡುವ ವಿದೇಶಿ ವಿವಿಗಳು ಇಲ್ಲಿಗೆ ಬರುವ ಸಾಧ್ಯತೆಗಳು ಕ್ಷೀಣವಾಗಿದೆ. ಮತ್ತೊಂದೆಡೆ ಇಲ್ಲಿನ ಅನೇಕ ಸಾರ್ವಜನಿಕ ವಿವಿಗಳು ಸೂಕ್ತ ಆರ್ಥಿಕ ನೆರವಿಲ್ಲದೆ ಮುಚ್ಚುವ ಹಂತದಲ್ಲಿವೆ. ಇಲ್ಲಿನ ಸರಕಾರದ ವಿಶ್ವವಿದ್ಯಾನಿಲಯಗಳಿಗೆ ಅಗತ್ಯವಾದ ಹಣಕಾಸು ನೆರವನ್ನು ಮತ್ತು ಸಬ್ಸಿಡಿಯನ್ನು ನೀಡಲು ಕೇಂದ್ರ ಸರಕಾರವು ವಿಫಲವಾಗಿದೆ. ಕೇಂದ್ರ ಸರಕಾರವು ಉನ್ನತ ಶಿಕ್ಷಣಕ್ಕೆ ಜಿಡಿಪಿಯ ಕೇವಲ ಶೇ.0.12ರಷ್ಟು ಅನುದಾನ ನೀಡುತ್ತಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರು ''ಉನ್ನತ ಶಿಕ್ಷಣದಲ್ಲಿ ಸರಕಾರದ ಪಾತ್ರವನ್ನು ನಿರೀಕ್ಷಿಸಬೇಡಿ'' ಎಂದು ಹೇಳಿದ್ದಾರೆ. ಸ್ವತಃ ತನ್ನದೇ ಶಿಕ್ಷಣ ಸಂಸ್ಥೆಗಳಿಗೆ ಸಾರ್ವಜನಿಕ ವೆಚ್ಚ ಮಾಡಲು ನಿರಾಕರಿಸುತ್ತಿರುವ ಪ್ರಭುತ್ವವು ವಿದೇಶಿ ವಿವಿಗಳಿಗೆ ಸಬ್ಸಿಡಿಗಳನ್ನು ಕೊಡುತ್ತದೆ ಎಂದು ಹೇಗೆ ನಂಬುವುದು? ಕೇಂದ್ರ ಸರಕಾರವು ಒಂದು ವೇಳೆ ವಿದೇಶಿ ವಿವಿಗಳನ್ನು ಆಕರ್ಷಿಸಲು ಅನೇಕ ಬಗೆಯ ರಿಯಾಯಿತಿಗಳನ್ನು ನೀಡಿದರೆ ಸದರಿ ಸರಕಾರ ಮತ್ತು ಯುಜಿಸಿಯ ಹಿತಾಸಕ್ತಿಯನ್ನು ಪ್ರಶ್ನಿಸಬೇಕಾಗುತ್ತದೆ. ಇವರು ಇಲ್ಲಿನ ಶೈಕ್ಷಣಿಕ ವ್ಯವಸ್ಥೆಯನ್ನು ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಬೇಕಾಗುತ್ತದೆ.

* ಇಂಡಿಯಾದಲ್ಲಿ ಜಾಗತಿಕವಾಗಿ ಅತ್ಯುತ್ತಮ ಗುಣಮಟ್ಟದ ವಿವಿಗಳನ್ನು ಬೆಳೆಸಬೇಕೆಂದರೆ ಮೊತ್ತ ಮೊದಲನೆಯದಾಗಿ ಕಲಿಕೆ ಮತ್ತು ಸಂಶೋಧನೆಯನ್ನು ಪರಸ್ಪರ ಹೆಣೆಯಬೇಕಾಗುತ್ತದೆ, ಗುಣಮಟ್ಟದಲ್ಲಿ ಆಮೂಲಾಗ್ರ ಸುಧಾರಣೆಯಾಗಬೇಕಾಗುತ್ತದೆ ಮತ್ತು ಇದಕ್ಕಾಗಿ ಹೆಚ್ಚಿನ ಪ್ರಮಾಣದ ಆರ್ಥಿಕ ನೆರವು ಅಗತ್ಯವಿದೆ. ಆದರೆ ಗುಣಮಟ್ಟ ಮತ್ತು ಹಣಕಾಸು ಎರಡೂ ವಲಯದಲ್ಲಿಯೂ ದಯನೀಯವಾಗಿ ಸೋತಿರುವ ಸರಕಾರದಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಮರೆಮಾಚಿ ವಿದೇಶಿ ವಿವಿಗಳ ಕುರಿತು ಮಾತನಾಡುವುದು ದ್ರೋಹ ಚಿಂತನೆಯಾಗುತ್ತದೆ * ಇಲ್ಲಿನ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ ವ್ಯಾಸಂಗಕ್ರಮ (ಪೆಡಗಾಜಿ) ರೂಪಿಸುವಲ್ಲಿ, ಸೂಕ್ತ ಮಾನವ ಸಂಪನ್ಮೂಲ ಒದಗಿಸುವಲ್ಲಿ ಮತ್ತು ಶೈಕ್ಷಣಿಕ ಸ್ವಾತಂತ್ರ್ಯವನ್ನು ಕೊಡುವಲ್ಲಿ ವಿಫಲವಾಗಿರುವ ಕೇಂದ್ರ ಸರಕಾರವು ಬದಲಿಗೆ ತನ್ನ ಅಧಿಕಾರ ಮತ್ತು ಆರೆಸ್ಸೆಸ್ ಸಿದ್ಧಾಂತಗಳನ್ನು ಹೇರುತ್ತಿದೆ. ಕ್ಯಾಂಪಸ್ ಪ್ರಜಾಪ್ರಭುತ್ವವನ್ನೇ ನಾಶ ಮಾಡಿದೆ. ಸರ್ವಾಧಿಕಾರದ ಸರಪಳಿ ಬಿಗಿದಿದೆ. ಪ್ರಶ್ನೆಯೇನೆಂದರೆ ವಿದೇಶಿ ವಿವಿಗಳಿಗೂ ಇದೇ ನೀತಿಯನ್ನು ಅನುಸರಿಸುತ್ತದೆಯೇ? ಹೌದು ಎನ್ನುವುದಾದರೆ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ. ಯಾಕೆಂದರೆ ಯಾವುದೇ ಶಿಕ್ಷಣ ಸಂಸ್ಥೆಯು ಹೊರ ದೇಶದಿಂದ ಇಲ್ಲಿಗೆ ಬಂದು ತಮ್ಮ ಸ್ವಾಯತ್ತತೆ, ಸ್ವಾತಂತ್ರ್ಯ ಕಳೆದುಕೊಳ್ಳಲು ಸಿದ್ಧವಿಲ್ಲ. ಅದು ವ್ಯಾಪಾರೀಕರಣವಾಗಿರಬಹುದು, ಲಾಭ ಮಾಡಿಕೊಳ್ಳುವ ಉದ್ದೇಶವಿರಬಹುದು, ತಮ್ಮ ರಾಷ್ಟ್ರಗಳ ವಸಾಹತುಶಾಹಿ ನೀತಿಗಳನ್ನು ವ್ಯಾಸಂಗಕ್ರಮದಲ್ಲಿ ಅಳವಡಿಸಿಕೊಳ್ಳುವುದಿರಬಹುದು. ತಮ್ಮ ಸ್ವಹಿತಾಸಕ್ತಿಯನ್ನು ಬಿಟ್ಟುಕೊಡುವುದಿಲ್ಲ. ಈ ಕಾರಣಕ್ಕೆ ವಿದೇಶಿ ವಿವಿಗಳನ್ನು ತುಷ್ಟೀಕರಣಗೊಳಿಸಲು ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕಲ್ಪಿಸುವ, ಸ್ಥಳೀಯ ವಿವಿಗಳಿಗೆ ನಿಯಂತ್ರಣ ಹೇರುವ ಇಬ್ಬಗೆಯ ನೀತಿಯನ್ನು ಅನುಸರಿಸಿದರೆ ಇದು ದೇಶದ್ರೋಹದ ನಡೆ ಎನ್ನಬೇಕಾಗುತ್ತದೆ. ಇಲ್ಲಿ ಸರಕಾರದ ನೀತಿ ಏನಾಗಿರುತ್ತದೆ ಎನ್ನುವುದರ ಕುರಿತು ಕರಡು ನೀತಿಯಲ್ಲಿ ಸ್ಪಷ್ಟತೆಯಿಲ್ಲ.

* ಈ ವಿದೇಶಿ ವಿವಿಗಳು ಜಾಗತಿಕ ಮಾರುಕಟ್ಟೆಯ ಬಂಡವಾಳಶಾಹಿಗಳ ಹಿತಾಸಕ್ತಿಗಳಿಗೆ ಅನುಕೂಲಕರವಾಗುವಂತೆ ಮತ್ತು ನವ ಉದಾರೀಕರಣದ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗುವಂತೆ ಬೋಧನಾ ಕ್ರಮವನ್ನು, ಪಠ್ಯ ಪುಸ್ತಕಗಳನ್ನು ರೂಪಿಸಿಕೊಳ್ಳುತ್ತವೆ ಮತ್ತು ಅಗತ್ಯವಾದ ಮೂಲ ವಿಜ್ಞಾನ, ಸ್ಥಳೀಯ ಬಹುಸಂಸ್ಕೃತಿ, ಸಮಾಜ ವಿಜ್ಞಾನ ಮತ್ತು ಸಾಮಾಜಿಕ ಆದ್ಯತೆಗಳು ತಿರಸ್ಕರಿಸಲ್ಪಡುತ್ತವೆ. ಮಾನವೀಯ ಶಾಸ್ತ್ರಗಳು, ಸಾಮಾಜಿಕ ಶಾಸ್ತ್ರಗಳು, ಭಾಷಾ ಶಾಸ್ತ್ರಗಳ ಅಧ್ಯಯನಗಳು ಮೂಲೆಗುಂಪಾಗಿ ತಂತ್ರಜ್ಞಾನ ಮತ್ತು ಉದ್ಯೋಗ ಆಧಾರಿತ ಕೋರ್ಸುಗಳು ಮೇಲುಗೈ ಸಾಧಿಸುತ್ತವೆ. ಇದು ಸ್ವಾಗತಾರ್ಹ ಬೆಳವಣಿಗೆಯಲ್ಲ.

* ಕರಡು ನೀತಿಯಲ್ಲಿ ಜಾಗತಿಕವಾಗಿ ಶ್ರೇಷ್ಠ 500 ವಿದೇಶಿ ವಿಶ್ವವಿದ್ಯಾನಿಲಯಗಳನ್ನು ಆಯ್ಕೆ ಮಾಡಲಾಗುವುದು ಎಂದು ಉಲ್ಲೇಖಿಸಿದೆ. ಆದರೆ ಈ ಶ್ರೇಷ್ಠತೆಯನ್ನು ಅಳೆಯುವ ಮಾನದಂಡಗಳೇನು? ತಮ್ಮ ದೇಶಗಳಲ್ಲಿ ಬೇರೆ ಬೇರೆ ಕಾರಣಗಳಿಗೆ ಉತ್ತಮವಾಗಿರುವ ಈ ವಿದೇಶಿ ವಿವಿಗಳು ಭಾರತದಲ್ಲಿಯೂ ಅದೇ ಗುಣಮಟ್ಟ ಕಾಪಾಡಿಕೊಳ್ಳುತ್ತವೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. * ಕರಡು ನೀತಿಯಲ್ಲಿ ಪ್ರವೇಶಾತಿ ಆದ್ಯತೆಯ ಕುರಿತಂತೆ ವಿದೇಶಿ ವಿವಿಗಳಿಗೆ ಸ್ವಾತಂತ್ರ್ಯವಿದೆ. ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರರ್ಥ ಖಾಸಗಿ ವಿಶ್ವವಿದ್ಯಾನಿಲಯಗಳಂತೆ ಈ ವಿದೇಶಿ ಸಂಸ್ಥೆಗಳು ಸಾಮಾಜಿಕ ನ್ಯಾಯವನ್ನು ಪಾಲಿಸುವುದಿಲ್ಲ. ಮೀಸಲಾತಿಯನ್ನು ಕಲ್ಪಿಸುವುದಿಲ್ಲ. ಇದು ದಲಿತ, ಆದಿವಾಸಿ, ಹಿಂದುಳಿದ ಸಮುದಾಯಗಳ ಶೈಕ್ಷಣಿಕ ಭವಿಷ್ಯದ ಮೇಲೆ ನೇರ ದುಷ್ಪರಿಣಾಮ ಬೀರುತ್ತದೆ. ಈಗಿರುವ ಸಮಾಜೋ-ಆರ್ಥಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ.

* ಯುಜಿಸಿಯು ತನ್ನ ಕರಡು ನೀತಿಯಲ್ಲಿ ಇಲ್ಲಿನ ಸರಕಾರಿ ನಿಯಂತ್ರಣ ಸಂಸ್ಥೆಗಳಿಗೆ ಈ ವಿದೇಶಿ ವಿವಿಗಳನ್ನು ಯಾವ ಹಂತದಲ್ಲಿಯಾದರೂ ಪರಿವೀಕ್ಷಣೆ ಮಾಡುವ ಅಧಿಕಾರವಿದೆ. ಇಂಡಿಯಾದ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ಯಾವ ಹಂತದಲ್ಲಿಯಾದರೂ ಸಹ ಸಂಬಂಧಿತ ವಿವಿಯ ಅನುಮೋದನೆಯನ್ನು ಹಿಂಪಡೆಯಲಾಗುತ್ತದೆ ಮತ್ತು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಹೇಳಿದೆೆ. ಇದು ಸ್ವಾಗತಾರ್ಹ. ಆದರೆ ತಮಗೆ ಸ್ವಾಯತ್ತತೆ ಇಲ್ಲದೆ ಈ ವಿದೇಶಿ ವಿವಿಗಳು ಇಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ನಂಬುವುದು ಮೂರ್ಖತನವಾಗುತ್ತದೆ

* ಈ ಕರಡು ನೀತಿಯಲ್ಲಿ ವಿದೇಶಿ ವಿವಿಗಳಿಗೆ ಶುಲ್ಕಕ್ಕೆ ಸಂಬಂಧಿಸಿದಂತೆ ಮುಕ್ತ ಸ್ವಾತಂತ್ರ್ಯವಿದೆ ಎಂದು ಉಲ್ಲೇಖಿಸಲಾಗಿದೆ. ಅಂದರೆ ಸರಕಾರಗಳು ಈ ವಿದೇಶಿ ವಿವಿಗಳ ಶುಲ್ಕ ನೀತಿಯ ಮೇಲೆ ಯಾವುದೇ ನಿಯಂತ್ರಣ ಹೊಂದಿರುವುದಿಲ್ಲ. ಇದನ್ನು ಬಳಸಿಕೊಂಡು ವಿದೇಶಿ ಆಡಳಿತ ಸಂಸ್ಥೆಗಳು ತಮ್ಮದೇ ಲಾಭ, ನಷ್ಟದ ವ್ಯಾವಹಾರಿಕ ಲೆಕ್ಕಾಚಾರ ಆಧರಿಸಿ ಸಹಜವಾಗಿಯೇ ದುಬಾರಿ ಶುಲ್ಕವನ್ನು ನಿಗದಿಪಡಿಸುತ್ತದೆ. ಇದು ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಈ ಶುಲ್ಕ ಪಾವತಿಸಲು ಸಾಧ್ಯವಾಗುವುದಿಲ್ಲ ಮತ್ತು ಅವರೆಲ್ಲಾ ಶಿಕ್ಷಣದಿಂದ ವಂಚಿತರಾಗುತ್ತಾರೆ.

* ಉದಾಹರಣೆಗೆ ಕರ್ನಾಟಕದ ಸರಕಾರಿ ಪದವಿ ಕಾಲೇಜಿನಲ್ಲಿ ವಾರ್ಷಿಕ ಶುಲ್ಕ ಗರಿಷ್ಠ 5,000 ರೂ. ಮತ್ತು ಸ್ನಾತಕೋತ್ತರ ವ್ಯಾಸಂಗಕ್ಕೆ ವಿವಿಗಳಲ್ಲಿ ಗರಿಷ್ಠ 7,000 ರೂ. ಗಳು ಮಾತ್ರ. ಆದರೆ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವಾರ್ಷಿಕ ಶುಲ್ಕವು 7,40,000 ರೂ.ಗಳು. ಈ ಅಸಮಾನ ಶುಲ್ಕ ವ್ಯವಸ್ಥೆಯು ವಿದೇಶಿ ವಿವಿಗಳ ಪ್ರವೇಶದ ನಂತರವೂ ಮುಂದುವರಿಯುತ್ತದೆ. * ವಿದೇಶಿ ವಿಶ್ವವಿದ್ಯಾನಿಲಯಗಳ ಶುಲ್ಕವು ಭಾರತದ ಖಾಸಗಿ ಸಂಸ್ಥೆಗಳಿಗಿಂತಲೂ ದುಬಾರಿಯಾಗಿರುತ್ತದೆ. ಜೊತೆಗೆ ಯಾವುದೇ ಬಗೆಯ ವಿದೇಶಿತನದ ಕುರಿತಾಗಿ ಭಾರತೀಯರ ವ್ಯಾಮೋಹ, ಪ್ರಚಾರ ಮತ್ತು ಜನಪ್ರಿಯತೆಯ ಕಾರಣಕ್ಕೆ ಈ ವಿದೇಶಿ ವಿವಿಗಳು ಪ್ರವೇಶಾತಿಯಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ. ಇದು ಸರಕಾರಿ ಕಾಲೇಜು, ವಿವಿಗಳಿಗೆ ಪೆಟ್ಟು ಕೊಡುತ್ತದೆ ಮತ್ತು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಮುಚ್ಚಿಕೊಂಡರೆ ದಲಿತರು, ಅಂಚಿನಲ್ಲಿರುವ ಸಮುದಾಯಗಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗುತ್ತಾರೆ.

* ಕರಡು ನೀತಿಯ ಅನುಸಾರ ಸ್ಥಳೀಯ ಅಥವಾ ವಿದೇಶಿ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲು ಮುಕ್ತ ಅವಕಾಶವಿದೆ, ಇದು ವಿದೇಶಿ ವಿವಿಗಳು ತಾರತಮ್ಯ ನೀತಿ ಪಾಲಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಒಂದೆಡೆ ಸ್ಥಳೀಯ ಪ್ರಾಧ್ಯಾಪಕರಿಗೆ ಅರ್ಹತೆಯಿಲ್ಲ ಎನ್ನುವ ನೆಪವೊಡ್ಡಿ ವಿದೇಶಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಸಾಧ್ಯತೆಗಳಿವೆ. ಮತ್ತೊಂದೆಡೆ ಹಣಕಾಸಿನ ಸಾಮರ್ಥ್ಯವಿರುವ ವಿದೇಶಿ ವಿವಿಗಳು ಅಧ್ಯಾಪಕರಿಗೆ ಆಕರ್ಷಕ ಸಂಬಳವನ್ನು ನಿಗದಿಪಡಿಸುತ್ತವೆ. ಇದು ಸರಕಾರಿ ಶಿಕ್ಷಣ ಸಂಸ್ಥೆಗಳಿಂದ ಪ್ರಾಧ್ಯಾಪಕರ ಪಲಾಯನಕ್ಕೆ ದಾರಿ ಮಾಡಿಕೊಡುತ್ತದೆ. ಹೆಚ್ಚಿನ ವೇತನ ದೊರಕುವ ಕಾರಣಕ್ಕೆ ಅಧ್ಯಾಪಕರು ರಾಜ್ಯ, ಕೇಂದ್ರ ವಿವಿಗಳನ್ನು ತೊರೆದು ವಿದೇಶಿ ವಿವಿಗಳಿಗೆ ವಲಸೆ ಹೋಗುತ್ತಾರೆ. ಇದನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಇದರ ಪರಿಣಾಮವಾಗಿ ಸರಕಾರಿ ಕಾಲೇಜುಗಳಲ್ಲಿ, ವಿವಿಗಳಲ್ಲಿ ಅಧ್ಯಾಪಕರ ಕೊರತೆ ಉಂಟಾಗುತ್ತದೆ. ಇದು ಸಹ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ ಹಾನಿ ಉಂಟು ಮಾಡುತ್ತದೆ. ದಿಲ್ಲಿ ವಿವಿ ಪ್ರೊಫೆಸರ್ ಅಭಾ ದೇವ್ ಹಬೀಬ್ ಅವರು ''ಎನ್‌ಇಪಿ 2020ರ ಶಿಫಾರಸಿನ ಅನುಸಾರ ಸ್ವತಃ ತನ್ನ ಅಸ್ತಿತ್ವ ಕಳೆದುಕೊಳ್ಳಲಿರುವ ಯುಜಿಸಿ ಯಾವ ಮಾನದಂಡದಲ್ಲಿ ಈ ನೀತಿಯನ್ನು ರೂಪಿಸುತ್ತದೆ'' ಎಂದು ಪ್ರಶ್ನಿಸುತ್ತಾರೆ.

ಉಪ ಸಂಹಾರ

ವಿದೇಶಿ ವಿವಿಗಳು ದೇಶದೊಳಗೆ ಪ್ರವೇಶ ಪಡೆದ ನಂತರ ಮೇಲೆ ಉಲ್ಲೇಖಿಸಿದ ಸಮಸ್ಯೆಗಳು ಸಹಜವಾಗಿ ಎದುರಾಗುತ್ತವೆ. ಇದು ನಿರೀಕ್ಷಿತ. ಇದರಲ್ಲಿ ಉತ್ಪ್ರೇಕ್ಷೆಯಿಲ್ಲ. ಪ್ರಶ್ನೆಯಿರುವುದು ಸರಕಾರ ಇದಕ್ಕಾಗಿ ಯಾವ ಸಿದ್ಧತೆಗಳನ್ನು ಮಾಡಿಕೊಂಡಿದೆ? ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಯನ್ನು, ಅಸ್ತಿತ್ವವನ್ನು ರಕ್ಷಿಸಲು ಅದರ ಬಳಿ ಯಾವ ಕಾರ್ಯಯೋಜನೆಗಳಿವೆ? ಈ ಕುರಿತು ಕರಡು ನೀತಿಯಲ್ಲಾಗಲಿ, ಯುಜಿಸಿ ಬಳಿಯಲ್ಲಾಗಲಿ ಯಾವುದೇ ಉತ್ತರವಿಲ್ಲ. ಸಾಮಾಜಿಕ, ಆರ್ಥಿಕ ಅಸಮಾನತೆ ಇಲ್ಲಿನ ಮುಖ್ಯ ಶೈಕ್ಷಣಿಕ ಸಮಸ್ಯೆ. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳ ನಂತರವೂ ಇಂದಿಗೂ ವಂಚಿತ ಸಮುದಾಯಗಳ ಮೊದಲ ತಲೆಮಾರಷ್ಟೇ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವಂತಹ ಪರಿಸ್ಥಿತಿಯಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳದೆ ವಿದೇಶಿ ವಿವಿಗಳ ಸ್ಥಾಪನೆಗೆ ಅನುಮೋದನೆ ಕೊಡುವುದಕ್ಕೆ ಯಾವುದೇ ತರ್ಕವಿಲ್ಲ ಮತ್ತು ಇದು ನ್ಯಾಯಪ್ರಜ್ಞೆಯಲ್ಲ. ಮುಖ್ಯವಾಗಿ ಇಲ್ಲಿನ ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು, ವಿದೇಶಿ ವಿವಿಗಳ ಪ್ರವೇಶವು ಒಂದು ಸುವರ್ಣ ಅವಕಾಶ ಎನ್ನುವ ಮೌಢ್ಯವನ್ನು ತೊರೆಯಬೇಕು. 2012-13ರಲ್ಲಿ ಯುಪಿಎ-2 ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ವಿದೇಶಿ ವಿವಿ ಮಸೂದೆಯನ್ನು ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಳ್ಳಲು ಮುಂದಾಗಿತ್ತು. ಆಗ ಇದೇ ಬಿಜೆಪಿ ಮತ್ತು ಎಡ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಕಡೆಗೆ ರಾಜ್ಯಸಭೆಯಲ್ಲಿ ಈ ಮಸೂದೆಗೆ ಸೋಲುಂಟಾಯಿತು. ಆದರೆ ಇದೇ ಬಿಜೆಪಿ ಸರಕಾರವು ವಿದೇಶಿ ವಿವಿ ಅನುಮೋದನೆ ಕುರಿತು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸದೆ, ಶಿಕ್ಷಣ ನೀತಿ ಕುರಿತಾಗಿ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಯುಜಿಸಿಯ ಮೂಲಕ ಜಾರಿಗೊಳಿಸುತ್ತಿರುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ವಿರೋಧಿ ನಡೆಯಾಗುತ್ತದೆ. ಅನೈತಿಕತೆ ಎನಿಸಿಕೊಳ್ಳುತ್ತದೆ. ಇದು ಆತಂಕದ ವಿಚಾರ.

Similar News