ತಮಿಳುನಾಡು ಕುರಿತ ರಾಜ್ಯಪಾಲ ಆರ್‌.ಎನ್. ರವಿ ಹೇಳಿಕೆ ಅನಗತ್ಯ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ

Update: 2023-01-17 06:31 GMT

ಚೆನ್ನೈ: ರಾಜ್ಯಕ್ಕೆ ತಮಿಳುನಾಡು (Tamil Nadu) ಎಂಬುದಕ್ಕಿಂತ ತಮಿಳಗಂ ಹೆಚ್ಚು ಸೂಕ್ತ ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯಪಾಲ ಆರ್.ಎನ್.ರವಿ (R N Ravi) ವಿವಾದ ಭುಗಿಲೇಳಲು ಕಾರಣವಾಗಿದ್ದು, ಇದರ ಬೆನ್ನಿಗೇ ಈ ಹೇಳಿಕೆ ಅನಗತ್ಯವಾಗಿತ್ತು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K Annamalai) ಆಕ್ಷೇಪಿಸಿದ್ದಾರೆ. 

ಹೆಸರು ಬದಲಾವಣೆ ವಿವಾದ ಅನುತ್ಪಾದಕವಾದುದು ಎಂದು ಸ್ಪಷ್ಟಪಡಿಸಿರುವ ಅಣ್ಣಾಮಲೈ, ಪೊಂಗಲ್‌ ಅಂಗವಾಗಿ ವಿತರಿಸಲಾಗಿರುವ ಆಮಂತ್ರಣ ಪತ್ರಿಕೆಗಳಲ್ಲಿ ರಾಜ್ಯ ಲಾಂಛನವನ್ನು ಕೈಬಿಟ್ಟಿರುವ ರಾಜಭವನದ ನಡೆಗೆ ಅಸಮ್ಮತಿ ಸೂಚಿಸಿದ್ದಾರೆ. ಹೀಗಿದ್ದೂ, ಆ ತಪ್ಪು ಗುಮಾಸ್ತರ ದೋಷದಿಂದ ಆಗಿರಬಹುದು ಎಂದೂ ಸಂಶಯಿಸಿದ್ದಾರೆ.

ಈ ಕುರಿತು ತಮಿಳು ಸುದ್ದಿ ವಾಹಿನಿ 'ತಂತಿ ಟಿವಿ'ಗೆ ಸಂದರ್ಶನ ನೀಡಿರುವ ಅಣ್ಣಾಮಲೈ, ತಮಿಳುನಾಡು ಹಾಗೂ ತಮಿಳಗಂ ಎರಡೂ ಪದಗಳು ಒಂದೇ ಬಗೆಯ ಸ್ಫೂರ್ತಿಯನ್ನು ಹೊಂದಿವೆ ಎಂದು ಹೇಳಿರುವ ಅವರು, ರಾಜ್ಯದ ಹೆಸರು ಬದಲಾವಣೆಯ ಪ್ರಸ್ತಾಪಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಈ ನಡುವೆ ರಾಜ್ಯಪಾಲ ಆರ್.ಎನ್. ರವಿಯನ್ನು ಬೆಂಬಲಿಸಿರುವ ಅಣ್ಣಾಮಲೈ, ರಾಜ್ಯಪಾಲರ ನಡೆಯಲ್ಲಿ ನಾನು ದೊಡ್ಡ ಸಂದೇಶವನ್ನು ಕಾಣಲು ಬಯಸುತ್ತೇನೆ ಎಂದು ಹೇಳಿದ್ದು, ಆರ್‌.ಎನ್.ರವಿ ಅವರ ದೀರ್ಘಕಾಲದ ವೃತ್ತಿಜೀವನವನ್ನು ಉಲ್ಲೇಖಿಸಿರುವ ಅವರು, ತಮ್ಮ ತವರು ರಾಜ್ಯ ಬಿಹಾರದಿಂದ ಕೇರಳದವರೆಗೆ, ನಂತರ ಈಶಾನ್ಯ ರಾಜ್ಯಗಳಲ್ಲಿನ ಅವರ ಸೇವೆಯನ್ನು ಪ್ರಸ್ತಾಪಿಸಿದ್ದಾರೆ.

"ಅವರು ಭಾರತವನ್ನು ಒಂದಾಗಿ ನೋಡಲು ಬಯಸುತ್ತಾರೆ. ಅವರು ಬೋಧಕರೊಬ್ಬರ ನೆರವಿನೊಂದಿಗೆ ತಮಿಳು ಕಲಿಯುತ್ತಿರುವ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ಭಾಷಣಗಳಲ್ಲಿ ತಮಿಳಿನಲ್ಲಿ ಮಾತಾಡಲು ಯತ್ನಿಸುತ್ತಾರೆ. ಅವರ ಉದ್ದೇಶವು ನಮ್ಮ ರಾಜ್ಯಕ್ಕೆ ಸೇರಿದವರ ಪೈಕಿ ಒಬ್ಬರಾಗುವುದಾಗಿದೆ. ಹೀಗಾಗಿ ಇಂತಹ ವಿಷಯಗಳನ್ನು ಮಿತಿ ಮೀರಿ ಉತ್ಪ್ರೇಕ್ಷೆಗೊಳಿಸಬಾರದು ಎಂದು ಮನವಿ ಮಾಡುತ್ತೇನೆ" ಎಂದು ಕೋರಿದ್ದಾರೆ.

ಇದನ್ನೂ ಓದಿ: ಬುರ್ಖಾ ಧರಿಸಿ, ಬೆನ್ನಿನ ಹಿಂಭಾಗಕ್ಕೆ ಸ್ವಿಗ್ಗಿ ಬ್ಯಾಗ್ ಹೇರಿಕೊಂಡು ಹೋಗುತ್ತಿರುವ ಮಹಿಳೆಯ ಬದುಕು ಹೀಗಿದೆ... 

Similar News