ಪ್ರಧಾನಿ ನರೇಂದ್ರ ಮೋದಿಯನ್ನುದ್ದೇಶಿಸಿ ಮಾಡಿರುವ ಸರಣಿ ವರದಿ ಇಂದಿನಿಂದ ಬಿಬಿಸಿಯಲ್ಲಿ ಪ್ರಸಾರ

Update: 2023-01-17 07:28 GMT

ಲಂಡನ್: ಮಂಗಳವಾರ BBCಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಕಾರ್ಯವೈಖರಿ ಕುರಿತು ಚಿತ್ರಿಸಿರುವ ಎರಡು ಕಂತಿನ "India: The Modi Question" ಸರಣಿಯ ಮೊದಲನೆ ಕಂತು ಪ್ರಸಾರವಾಗಲಿದ್ದು, ಅದಕ್ಕಾಗಿ ಭಾರತೀಯ ಮೂಲದ ಬಲಪಂಥೀಯರಿಂದ ತೀವ್ರ ತರಾಟೆಗೊಳಗಾಗಿದೆ ಎಂದು timesofindia. com ವರದಿ ಮಾಡಿದೆ.

ಈ ಸರಣಿಗೆ, "ಭಾರತೀಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಅಲ್ಪಸಂಖ್ಯಾತ ಮುಸ್ಲಿಮರ ನಡುವಿನ ಸಂಘರ್ಷದ ಬಗ್ಗೆ ಒಂದು ಅವಲೋಕನ, ಸಾವಿರಾರು ಮಂದಿಯ ಸಾವಿಗೆ ಕಾರಣವಾದ 2002ರ ಗಲಭೆಯಲ್ಲಿನ ಅವರ ಪಾತ್ರದ ಕುರಿತ ತನಿಖಾ ಪ್ರತಿಪಾದನೆಗಳು" ಎಂಬ ಅಡಿ ಟಿಪ್ಪಣಿ ನೀಡಲಾಗಿದೆ.

ಈ ಸರಣಿಗೆ ಭಾರತ ಮೂಲದ ಕೆಲ ಬಲಪಂಥೀಯ ಟ್ವಿಟರ್ ಬಳಕೆದಾರರು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದು, ಈ ಪೈಕಿ ಬಂಗಾಳ ಮಹಿಳೆಯೊಬ್ಬರು, "ಬ್ರಿಟನ್: ಚರ್ಚಿಲ್ ಪ್ರಶ್ನೆ" ಎಂಬ ಸರಣಿಯನ್ನು ಬಿಬಿಸಿ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಎಲ್ಲ ಮಾನದಂಡಗಳಲ್ಲಿಯೂ ಭಾರತಕ್ಕಿಂತ ಹಿಂದೆ ಬಿದ್ದಿರುವ ಬ್ರಿಟನ್ ಸಮಸ್ಯೆ ಕುರಿತು ಬಿಬಿಸಿ ಗಮನ ಹರಿಸಬೇಕು ಎಂದು ಸೂಚಿಸಿದ್ದಾರೆ.

"ಭಾರತೀಯರು ತಮ್ಮೆಲ್ಲ ಸಮಸ್ಯೆಗಳಿಗಿಂತ, ಅದನ್ನು ಹೇಳುವ ಪರಕೀಯರನ್ನು ಹೆಚ್ಚು ದ್ವೇಷಿಸುತ್ತಾರೆ. ವಿಶೇಷವಾಗಿ ಭೂತಕಾಲದ ವಸಾಹತುಶಾಹಿಗಳನ್ನು" ಎಂದು ಮತ್ತೊಬ್ಬ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ಸರಣಿ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಬಿಬಿಸಿ, ಸರಣಿಯು ಭಾರತೀಯ ಮುಸ್ಲಿಂ ಜನಾಂಗದ ಕುರಿತು ನರೇಂದ್ರ ಮೋದಿ ಸರ್ಕಾರದ ಧೋರಣೆ ಕುರಿತು ನಿರಂತರವಾಗಿ ಕೇಳಿ ಬರುತ್ತಿರುವ ಆರೋಪಗಳು ಹೇಗೆ ಅವರ ವರ್ಚಸ್ಸನ್ನು ಮುಕ್ಕಾಗಿಸಿವೆ, 2019ರಲ್ಲಿ ಮರು ಗೆಲುವು ಸಾಧಿಸಿದ ನಂತರ ಮೋದಿ ಜಾರಿಗೊಳಿಸಿರುವ ವಿವಾದಾತ್ಮಕ ನೀತಿಗಳಾದ 370ನೇ ವಿಧಿಯಡಿ ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನದ ರದ್ದು ಸೇರಿದಂತೆ ಹಲವರು ಹೇಳುತ್ತಿರುವಂತೆ ಮುಸ್ಲಿಂ ಸಮುದಾಯದ ಬಗ್ಗೆ ಪಕ್ಷಪಾತದಿಂದ ಕೂಡಿದೆ ಎನ್ನಲಾಗಿರುವ ಪೌರತ್ವ ಕಾಯ್ದೆ ಹಾಗೂ ಇದರ ಬೆನ್ನಿಗೇ ಮುಸ್ಲಿಮರ ಮೇಲೆ ಹಿಂದೂಗಳಿಂದ ಹಿಂಸಾತ್ಮಕ ದಾಳಿಗಳು ನಡೆದ ವರದಿಗಳ ಕುರಿತು ಪರಿಶೀಲನೆ ನಡೆಸಲಿದೆ ಎಂದು ಹೇಳಿಕೊಂಡಿದೆ.

ಇತ್ತೀಚೆಗೆ ಭಾರತದ ಕುರಿತು ಪಕ್ಷಪಾತ ನಿಲುವು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿ ಬಿಬಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ಭಾರತೀಯ ಮೂಲದ ಬ್ರಿಟನ್ ಪ್ರಜೆ ಹಾಗೂ ಇಂಡಿಕ್ ಸೊಸೈಟಿಯ ಸಂಸ್ಥಾಪಕ ಸದಸ್ಯ ಆದಿತ್ ಕೊಠಾರಿ, "ಭಾರತದ ಮುಂಬರುವ 2024ರ ಚುನಾವಣೆ ವೇಳೆಗೆ ನಗರ ಪ್ರದೇಶದ ಮತದಾರರ ಮೇಲೆ ಪ್ರಭಾವ ಬೀರಲು ಈ ಸರಣಿಯ ಭಾಗವು ನಿರ್ಮಾಣಗೊಂಡಿರುವಂತಿದೆ. ಭಾರತದಲ್ಲಿ ಬಿಬಿಸಿ ವಾಹಿನಿಯ ವೀಕ್ಷಣೆ ಸೀಮಿತ ಪ್ರಮಾಣದಲ್ಲಿದ್ದರೂ, ಅದರ ಈ ಹಿಂದಿನ ವಿಶ್ವಾಸಾರ್ಹತೆಯ ಕಾರಣಕ್ಕೆ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ತಮ್ಮದೇ ಆದ ನಿರೂಪಣೆಯನ್ನು ಪ್ರಚಾರ ಮಾಡಲು ಈ ಸರಣಿ ಒಂದು ಅಸ್ತ್ರ ಒದಗಿಸಲಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಮತ್ತೊಂದು ಭಾಗವು ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ನರೇಂದ್ರ ಮೋದಿಯು, ಅಸಹಿಷ್ಣು ವ್ಯಕ್ತಿ ಎಂದು ಬಿಂಬಿಸುವ ಉದ್ದೇಶ ಹೊಂದಿರುವಂತಿದೆ. ಬ್ರಿಟನ್ ಹಾಗೂ ಭಾರತವು ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವುದರಿಂದ ಈ ಭಾಗವನ್ನು ಬ್ರಿಟನ್‌ನ ಸ್ಥಳೀಯ ವೀಕ್ಷಕರಿಗೆ ನಿರ್ಮಿಸಲಾಗಿದೆ" ಎಂದು ಹೇಳಿದ್ದಾರೆ.

"ಸ್ಥಳೀಯವಾಗಿ, ಈ ಸರಣಿಯನ್ನು ಎಡಪಂಥೀಯ ಒಲವು ಹೊಂದಿರುವ ಬ್ರಿಟನ್‌ನಲ್ಲಿನ ಬುದ್ಧಿಜೀವಿಗಳು ಟೋರಿ ಪಕ್ಷ ಹಾಗೂ ರಿಷಿ ಸುನಕ್ ಮೇಲೆ ನಡೆಸುತ್ತಿರುವ ನೇರ ದಾಳಿ ಎಂದೇ ಭಾವಿಸಬೇಕಾಗುತ್ತದೆ. ಬಿಬಿಸಿ ಹಲವಾರು ದಶಕಗಳಿಂದ ಭಾರತ ವಿರೋಧಿಯಾಗಿದೆ. ಆದರೆ, ಅದೀಗ ಮೋದಿ ವಿರೋಧಿ ಹಾಗೂ ಹಿಂದೂ ವಿರೋಧಿಯಾಗಿ ಬದಲಾಗಿದ್ದು, ವಿದೇಶಗಳಲ್ಲಿ ಓದಿ, ಸ್ಫುಟವಾದ ಇಂಗ್ಲಿಷ್ ಮಾತಾಡುತ್ತಿದ್ದ ತನ್ನ ಹಿಂದಿನ ಪ್ರಧಾನಿಗಳಂತೆ ಮಾತನಾಡಲು ಬಾರದ ಭಾರತದ ಪ್ರಧಾನಿ ನರೇಂದ್ರ ಮೋದಿಯು, ಭಾರತೀಯ ರಾಜಕಾರಣದಲ್ಲಿ ಹಲವು ದಶಕಗಳ ಕಾಲ ಇದ್ದ ವಸಾಹತುಶಾಹಿ ಒಲವಿಗಿಂತ ಭಿನ್ನವಾಗಿರುವುದರಿಂದ ಅವರ ವ್ಯಾಖ್ಯಾನಕ್ಕೆ ಹೊಂದುವುದಿಲ್ಲ" ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಕೆಲವು ಮಂದಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಧಾನಿ ಮೋದಿಯ ಹಿಂದುತ್ವ ನಿಲುವುಗಳು ಮತ್ತು ಮುಸ್ಲಿಂ ವಿರೋಧಿ ಧೋರಣೆಗಳು ಪ್ರಕಟವಾಗುತ್ತಿರುವುದು ಭಾರತದ ಮಾನ್ಯತೆಯನ್ನು ಕೆಡಿಸುತ್ತದೆ ಮತ್ತು ಬಿಜೆಪಿಯಿಂದಾಗಿ ದೇಶದ ಮಾನ ಹರಾಜಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Similar News