MCD ಚುನಾವಣೆಯಲ್ಲಿ ಬಿಜೆಪಿ 104 ಸೀಟ್‌ ನನ್ನಿಂದಾಗಿ ಗೆದ್ದಿದೆ ಎಂದು ಎಲ್‌ಜಿ ಹೇಳಿದ್ದಾರೆ: ಕೇಜ್ರಿವಾಲ್

ಆಪ್‌ ಸರ್ಕಾರ-ಎಲ್‌ಜಿ ನಡುವೆ ಮುಂದುವರಿದ ಜಟಾಪಟಿ

Update: 2023-01-17 10:14 GMT

ಹೊಸದಿಲ್ಲಿ: ದಿಲ್ಲಿ ಶಿಕ್ಷಕರ ತರಬೇತಿಯಂಗವಾಗಿ ಫಿನ್‌ಲ್ಯಾಂಡ್‌ ಪ್ರವಾಸಕ್ಕೆ ತಡೆ ಹೇರಿದ ಲೆಫ್ಟಿನೆಂಟ್‌ ಗವರ್ನರ್‌ ಅವರ ಕ್ರಮವು ಅವರ ಹಾಗೂ ದಿಲ್ಲಿ ಸರ್ಕಾರದ ನಡುವೆ ತೀವ್ರ ವ್ಯಾಗ್ಯುದ್ಧಕ್ಕೆ ಕಾರಣವಾಗಿದೆ.

ಇಂದು ದಿಲ್ಲಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಲೆಫ್ಟಿನೆಂಟ್‌ ಗವರ್ನರ್‌ ವಿ ಕೆ ಸಕ್ಸೇನಾ ಅವರ ವಿರುದ್ಧ ಕಿಡಿಕಾರಿದ್ದಾರೆ.

"ಈ ಎಲ್‌ಜಿ ಯಾರು? ಅವರು ನಮ್ಮ ತಲೆಗಳ ಮೇಲೆ ಕುಳಿತಿದ್ದಾರೆ. ನಮ್ಮ ಮಕ್ಕಳಿಗೆ ಹೇಗೆ ಶಿಕ್ಷಣ ನೀಡಬೇಕೆಂದು ನಿರ್ಧರಿಸಲು ಅವರು ಯಾರು? ನಮ್ಮನ್ನು ನಿಲ್ಲಿಸುವ ಅಧಿಕಾರ ಎಲ್‌ಜಿಗಿಲ್ಲ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ನಾಳೆ ನಾವು ಕೇಂದ್ರದಲ್ಲಿ ಅಧಿಕಾರದಲ್ಲಿರಬಹುದು. ನಮ್ಮ ಸರ್ಕಾರ ಜನರಿಗೆ ಕಿರುಕುಳ ನೀಡುವುದಿಲ್ಲ," ಎಂದು ಕೇಜ್ರಿವಾಲ್‌ ಹೇಳಿದರು.

"ಎಲ್‌ಜಿ ಅವರು ನನ್ನ ʼಹೋಂವರ್ಕ್‌ʼ ಪರಿಶೀಲಿಸುವಷ್ಟು ನನ್ನ ಶಿಕ್ಷಕರೂ ನನ್ನ ಹೋಂವರ್ಕ್‌ ಪರಿಶೀಲಿಸಿಲ್ಲ, ಅವರು ನನ್ನ ಹೆಡ್‌ಮಾಸ್ಟರ್‌ ಅಲ್ಲ? ನಾನೊಬ್ಬ ಚುನಾಯಿತ ಮುಖ್ಯಮಂತ್ರಿ." ಎಂದು ಆಪ್‌ ಶಾಸಕರ ನಗುವಿನ ನಡುವೆ ಕೇಜ್ರಿವಾಲ್‌ ಹೇಳಿದರು.

ತರಬೇತಿಯಂಗವಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಫಿನ್‌ಲ್ಯಾಂಡ್‌ ಪ್ರವಾಸಕ್ಕೆ ಎಲ್‌ಜಿ ತಡೆಹೇರಿದ್ದಾರೆಂದು ಆಪ್‌ ಆರೋಪಿಸಿದ್ದರೆ ಇದನ್ನು ನಿರಾಕರಿಸಿರುವ ಎಲ್‌ಜಿ ಈ ಕ್ರಮದ ವೆಚ್ಚ-ಪ್ರಯೋಜನದ ಕುರಿತಷ್ಟೇ ತಾವು ಮಾಹಿತಿ  ಕೇಳಿದ್ದಾಗಿ ತಿಳಿಸಿದ್ದಾರೆ.

"ಆದರೆ ವೆಚ್ಚ-ಪ್ರಯೋಜನದ ಕುರಿತು ಕೇಳಲು ಅವರು ಯಾರೆಂದು ಕೇಳಿದೆ. ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಆದರೆ ಅವರು ರಾಷ್ಟ್ರಪತಿ ತಮ್ಮನ್ನು ಆರಿಸಿದ್ದಾರೆ ಎಂದು ಹೇಳಿದರು," ಎಂದು ಕೇಜ್ರಿವಾಲ್‌ ಹೇಳಿದರು.

"ಎಂಸಿಡಿ ಚುನಾವಣೆಯಲ್ಲಿ ತಮ್ಮ ಕಾರಣ ಬಿಜೆಪಿಗೆ 104 ಸ್ಥಾನಗಳು ದೊರೆತವು. ತಾವಲ್ಲದೇ ಇದ್ದರೆ ಬಿಜೆಪಿಗೆ 20 ಸ್ಥಾನಗಳು ದಕ್ಕುತ್ತಿರಲಿಲ್ಲ ಎಂದು ಎಲ್‌ಜಿ ತಮಗೆ ಹೇಳಿದರು," ಎಂದು ಕೇಜ್ರಿವಾಲ್‌ ಹೇಳಿಕೊಂಡರಲ್ಲದೆ  ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮಿಂದಾಗಿ ಬಿಜೆಪಿ ದಿಲ್ಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಲ್‌ಜಿ ಹೇಳಿದರು ಎಂದು ಕೇಜ್ರಿವಾಲ್‌ ಹೇಳಿಕೊಂಡರು.

Similar News