ಆಪ್ ಮಾದರಿಯಲ್ಲಿ ಕ್ರಮ ಕೈಗೊಳ್ಳುವ ಧಮ್ಮು, ತಾಕತ್ ಬೊಮ್ಮಾಯಿ ಸರಕಾರಕ್ಕಿಲ್ಲ: ಬೃಜೇಶ್ ಕಾಳಪ್ಪ

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವಿರುದ್ಧ ಕಮಿಷನ್ ಆರೋಪ ವಿಚಾರ

Update: 2023-01-17 12:02 GMT

ಬೆಂಗಳೂರು, ಜ.17: ರಾಜ್ಯ ಗುತ್ತಿಗೆದಾರರ ಸಂಘವು ಬಿಜೆಪಿ ಸರಕಾರ ಹಾಗೂ ಶಾಸಕರ 40 ಪರ್ಸೆಂಟ್ ಕಮಿಷನ್ ದಂಧೆಯನ್ನು ಬಯಲು ಮಾಡುತ್ತಿದ್ದರೂ ಯಾವುದೇ ತನಿಖೆ ನಡೆಸದೆ ಸರಕಾರ ಸುಮ್ಮನಿದೆ. ಆಮ್ ಆದ್ಮಿ ಪಾರ್ಟಿ ಸರಕಾರಗಳ ಮಾದರಿಯಲ್ಲಿ ಭ್ರಷ್ಟರ ವಿರುದ್ಧ ಕ್ರಮಕೈಗೊಳ್ಳುವ ದಮ್ಮು, ತಾಕತ್ ಸಿಎಂ ಬಸವರಾಜ ಬೊಮ್ಮಾಯಿಗಿಲ್ಲ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಬೃಜೇಶ್ ಕಾಳಪ್ಪ ಟೀಕಿಸಿದರು.

ಮಂಗಳವಾರ ನಗರದಲ್ಲಿರುವ ಆಮ್ ಆದ್ಮಿ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗೋಷ್ಠಿ ನಡೆಸಿ ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿಯವರ ಭ್ರಷ್ಟಾಚಾರವನ್ನು ಬಯಲಿಗೆ ತಂದಿದ್ದಾರೆ ಎಂದರು.

ಗುತ್ತಿಗೆದಾರ ಮಂಜುನಾಥ್ ಎಂಬವರಿಂದ ತಿಪ್ಪಾರೆಡ್ಡಿ 90 ಲಕ್ಷ ರೂಪಾಯಿ ಮೊತ್ತದ ಕಮಿಷನ್ ಪಡೆದಿರುವುದನ್ನು ಬಹಿರಂಗ ಮಾಡಿದ್ದಾರೆ. 40 ಪರ್ಸೆಂಟ್ ಭ್ರಷ್ಟಾಚಾರದ ವಿರುದ್ಧ ಕೆಂಪಣ್ಣ ನಿರಂತರವಾಗಿ ಹೋರಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೂ ದೂರು ನೀಡಿದ್ದರು ಎಂದು ಬೃಜೇಶ್ ಕಾಳಪ್ಪ ತಿಳಿಸಿದರು.

ಆದರೆ, ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಣ್ಣ ತನಿಖೆಯನ್ನೂ ನಡೆಸಿಲ್ಲ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್‍ರವರನ್ನು ಮೌನಿ ಎಂದು ಲೇವಡಿ ಮಾಡುತ್ತಿದ್ದ ನರೇಂದ್ರ ಮೋದಿ ರಾಜ್ಯ ಬಿಜೆಪಿ ಸರಕಾರದ 40 ಪರ್ಸೆಂಟ್ ಕಮಿಷನ್ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ? ಎಂದು ಅವರು ಪ್ರಶ್ನಿಸಿದರು.

ಪಂಜಾಬ್‍ನ ಎಎಪಿ ಸರಕಾರದ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ವಿರುದ್ಧ 1 ಪರ್ಸೆಂಟ್ ಕಮಿಷನ್ ಪಡೆದ ಆರೋಪ ಕೇಳಿಬಂದಿತ್ತು. ಎಎಪಿ ಸರಕಾರವು ತಕ್ಷಣವೇ ಅವರನ್ನು ವಜಾ ಮಾಡಿ ತನಿಖೆಗೆ ಆದೇಶಿಸಿತು. ಪೆÇಲೀಸರು ಅವರನ್ನು ಕೂಡಲೇ ಬಂಧಿಸಿದರು. ಆದರೆ ಕರ್ನಾಟಕದಲ್ಲಿ ಶಾಸಕರು ಹಾಗೂ ಸಚಿವರ ವಿರುದ್ಧ ನಿರಂತವಾಗಿ ಆರೋಪ ಕೇಳಿಬರುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.

ಚುನಾವಣೆ ಹೊತ್ತಿನಲ್ಲಿ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಎಎಪಿ ಸರಕಾರದ ಯೋಜನೆಗಳನ್ನು ಕಾಪಿ ಮಾಡುತ್ತಿರುವ ಬಿಜೆಪಿ ಸರಕಾರವು ಭ್ರಷ್ಟಾಚಾರ ವಿರೋಧಿ ನಿಲುವನ್ನು ಏಕೆ ಕಾಪಿ ಮಾಡುತ್ತಿಲ್ಲ? ಕೆಂಪಣ್ಣನವರ ಆರೋಪಕ್ಕೆ ಸಾಕ್ಷಿ ಕೇಳುವ ಮೂಲಕ ಬಿಜೆಪಿ ನಾಯಕರು ಅಕ್ರಮವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಹಗಲಿನ ಬದಲು ರಾತ್ರಿ ನಡೆಯುವ ಇಂತಹ ಅಕ್ರಮಗಳಿಗೆ ಸಾಕ್ಷಿ ಹೇಗಿರಲು ಸಾಧ್ಯ? ಎಂದು ಬೃಜೇಶ್ ಕಾಳಪ್ಪ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಜಗದೀಶ್ ವಿ ಸದಂ ಹಾಗೂ ರುದ್ರಯ್ಯ ನವಲಿ ಹಿರೇಮಠ್ ಭಾಗವಹಿಸಿದ್ದರು.

Similar News