ಅಲ್ಪಸಂಖ್ಯಾತರ ಗುರುತಿಸುವಿಕೆ ಕುರಿತು ಕೆಲ ರಾಜ್ಯಗಳಿಂದ ಬಾರದ ಪ್ರತಿಕ್ರಿಯೆಗೆ ಸುಪ್ರೀಂ ಅಸಮಾಧಾನ

Update: 2023-01-17 12:21 GMT

ಹೊಸದಿಲ್ಲಿ: ಆರು ರಾಜ್ಯಗಳು ಮತ್ತು ಜಮ್ಮು ಕಾಶ್ಮೀರ ಒಳಗೊಂಡಂತೆ ಕೇಂದ್ರಾಡಳಿತ ಪ್ರದೇಶಗಳು ತಮ್ಮ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಗುರುತಿಸುವಿಕೆ ಕುರಿತಂತೆ ಇನ್ನೂ ಕೇಂದ್ರ ಸರ್ಕಾರಕ್ಕೆ ತಮ್ಮ ಪ್ರತಿಕ್ರಿಯೆ ನೀಡದೇ ಇರುವುದಕ್ಕೆ ಸುಪ್ರೀಂ ಕೋರ್ಟ್‌ ಇಂದು ಅಸಮಾಧಾನ ವ್ಯಕ್ತಪಡಿಸಿದೆ.

"ಈ ನಿರ್ದಿಷ್ಟ ರಾಜ್ಯಗಳು ಮತ್ತು ಕೇಂದ್ರಾಡಳಿತಗಳ ಪ್ರತಿಕ್ರಿಯೆ ಪಡೆಯಲು ನಾವು ಕೇಂದ್ರಕ್ಕೆ ಕೊನೆಯ ಅವಕಾಶ ನೀಡುತ್ತೇವೆ ಹಾಗೂ ನಂತರ ಅವುಗಳಿಗೆ ಹೇಳಲು ಏನೂ ಇಲ್ಲ ಎಂದು ಅಂದುಕೊಳ್ಳುತ್ತೇವೆ," ಎಂದು ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್‌, ಎ ಎಸ್‌ ಓಕ ಮತ್ತು ಜೆ ಬಿ ಪರ್ಡಿವಾಲ ಅವರನ್ನೊಳಗೊಂಡ ಪೀಠ ಹೇಳಿದೆ.

ಇಲ್ಲಿಯ ತನಕ 24 ರಾಜ್ಯಗಳು ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪ್ರತಿಕ್ರಿಯೆ ನೀಡಿವೆ ಎಂದು  ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಇತ್ತೀಚಿನ ವರದಿಯೊಂದನ್ನು ಉಲ್ಲೇಖಿಸಿ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಸುಪ್ರೀಂ ಕೋರ್ಟಿಗೆ ತಿಳಿಸಿದರು.

ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಜಾರ್ಖಂಡ್‌, ಲಕ್ಷದ್ವೀಪ, ರಾಜಸ್ಥಾನ ಮತ್ತು ತೆಲಂಗಾಣದಿಂದ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಿದೆ ಎಂದು ಅವರು ಹೇಳಿದಾಗ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌, ಅವರು ಹೀಗೆಯೇ ಮುಂದುವರಿಯಲು ಸಾಧ್ಯವಿಲ್ಲ ಅವರಿಗೆ ಪ್ರತಿಕ್ರಿಯೆ ನೀಡಲು ಏನೂ ಇಲ್ಲ ಎಂದು ಅಂದುಕೊಳ್ಳುವೆವು ಎಂದು  ಹೇಳಿದೆ..

ಮುಂದಿನ ವಿಚಾರಣೆಯನ್ನು ಮಾರ್ಚ್‌ 21 ಕ್ಕೆ ನಿಗದಿಪಡಿಸಲಾಗಿದೆ.

Similar News