ಸಂವಿಧಾನದ ಆಶಯಗಳನ್ನು ರಕ್ಷಿಸಲು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ: ಉಲಮಾಗಳ ಕರೆ

Update: 2023-01-17 14:22 GMT

ಬೆಂಗಳೂರು, ಜ.17: ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯು ಅತ್ಯಂತ ಮಹತ್ವದ ಕಾಲಘಟ್ಟದಲ್ಲಿ ಬರುತ್ತಿದೆ. ಈ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆ ಮೂಲಕ ಸಂವಿಧಾನದ ಆಶಯಗಳನ್ನು ರಕ್ಷಿಸಲು ಮುಂದಾಗಬೇಕು ಎಂದು ಉಲಮಾಗಳು ಕರೆ ನೀಡಿದ್ದಾರೆ.

ಮಂಗಳವಾರ ನಗರದ ಖಾದ್ರಿಯಾ ಮಸ್ಜಿದ್‍ನಲ್ಲಿ ಆಯೋಜಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೌಲಾನ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ, 18 ವರ್ಷ ತುಂಬಿದಂತಹ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಿಕೊಳ್ಳಬೇಕು. ಅಲ್ಲದೆ, ಮತದಾನದ ದಿನ ತಪ್ಪದೆ ತಮ್ಮ ಸಂವಿಧಾನಬದ್ಧ ಹಕ್ಕನ್ನು ಚಲಾಯಿಸಬೇಕು ಎಂದರು.

ಮತದಾನದ ಹಕ್ಕಿನ ಮಹತ್ವವನ್ನು ಸರಿಯಾಗಿ ಅರ್ಥೈಸಿಕೊಂಡರೆ ಕನಿಷ್ಠ ಶೇ.90-95ರಷ್ಟು ಮತದಾನ ಆಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶಗಳ ಮತದಾನದ ಪ್ರಮಾಣ ಶೇ.50ರಷ್ಟು ದಾಟುತ್ತಿಲ್ಲ. ಪ್ರಮುಖವಾಗಿ ಯುವಕರು, ಮಹಿಳೆಯರು ಮತದಾನ ಮಾಡಲು ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.

ಕೆಲವು ದಿನಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಅರ್ಹ ಮತದಾರರು ಮೊದಲು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಒಂದು ವೇಳೆ ಹೆಸರು ಇಲ್ಲದೆ ಇದ್ದರೆ ಕೂಡಲೆ ನಿಗದಿತ ಅರ್ಜಿ ಸಲ್ಲಿಸಿ ಹೆಸರು ಸೇರಿಸಿಕೊಳ್ಳಬೇಕು. ಮತದಾರರ ಪಟ್ಟಿ ಪರಿಶೀಲನೆ, ಮಾಹಿತಿ ಪರಿಷ್ಕರಣೆ ಮಾಡಲು ಸ್ಥಳೀಯ ಮಸೀದಿಗಳು, ಸಂಘ ಸಂಸ್ಥೆಗಳು ವಿದ್ಯಾವಂತ ಯುವಕರ ತಂಡಗಳನ್ನು ರಚಿಸಿ ಕೆಲಸ ಮಾಡಿಸಬೇಕು ಎಂದು ಶಬ್ಬೀರ್ ನದ್ವಿ ಹೇಳಿದರು.

ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ ಮಾತನಾಡಿ, ಈ ವಿಧಾನಸಭೆ ಚುನಾವಣೆಯು ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ಬರುತ್ತಿದೆ. ಬೆಲೆ ಏರಿಕೆ ಗಗನ ಮುಟ್ಟಿದೆ. ಯುವಕರು ನಿರುದ್ಯೋಗದಿಂದ ಕಂಗೆಟ್ಟಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಕೆಲವು ದುಷ್ಟ ಶಕ್ತಿಗಳು ದೇಶ ಹಾಗೂ ರಾಜ್ಯದಲ್ಲಿ ದ್ವೇಷದ ವಾತಾವರಣ ಸೃಷ್ಟಿಸುತ್ತಿವೆ ಎಂದರು.

ಆದುದರಿಂದ, ಮುಸ್ಲಿಮ್ ಯುವಕರು ನ್ಯಾಯಪರ, ಜಾತ್ಯತೀತ ಮನಸ್ಥಿತಿ ಹೊಂದಿರುವ ಇತರ ಧರ್ಮದವರು, ತುಳಿತಕ್ಕೆ ಒಳಗಾದವರೊಂದಿಗೆ ಸೇರಿ, ಸಂವಿಧಾನದ ರಕ್ಷಣೆ ಮಾಡಲು ಒಂದಾಗಬೇಕು. ಇದಕ್ಕಾಗಿ ಮಸೀದಿಗಳ ಆಡಳಿತ ಸಮಿತಿಯವರು, ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ ಹಾಗೂ ಮುಫ್ತಿ ಸೈಯ್ಯದ್ ಆಸಿಮ್ ಉಪಸ್ಥಿತರಿದ್ದರು.

Similar News