ಕೋಟ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Update: 2023-01-17 18:23 GMT

ಕೋಟ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಕಳವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಐರೋಡಿ ಗ್ರಾಮದ ಸಂಗೀತಾ ಭಟ್(40) ಎಂಬವರು ಡಿ.24ರಂದು  ಬೆಳಗ್ಗೆ ಗೋವಾದ ಪಣಜಿಯಿಂದ ಪುತ್ತೂರಿಗೆ ಹೊರಡುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಊರಿಗೆ ಹೊರಟಿದ್ದರು. ಸಂಗೀತಾ ಭಟ್ ಬಟ್ಟೆ ಬರೆ ಹಾಗೂ ಚಿನ್ನಾಭರಣಗಳಿದ್ದ ಟ್ರಾಲಿ ಬ್ಯಾಗ್‌ನ್ನು ತಮ್ಮ ಸೀಟಿನ ಕೆಳಗಡೆ ಇಟ್ಟುಕೊಂಡಿದ್ದರು. ಇವರು ಪ್ರಯಾಣ ಮುಗಿಸಿ ಮಧ್ಯಾಹ್ನ ವೇಲೆ ಮಾಬುಕಳದಲ್ಲಿ ಇಳಿದಿದು ಮನೆಗೆ ಹೋಗಿದ್ದರು.

ಮರುದಿನ ಬೆಳಿಗ್ಗೆ ಎದ್ದು ಟ್ರಾಲಿ ಬ್ಯಾಗನ್ನು ನೋಡಿದಾಗ ಅದರಲ್ಲಿದ್ದ ಚಿನ್ನದ ಆಭರಣಗಳಾದ ಕರಿಮಣಿ ಸರ, ಮುತ್ತಿನ ಸರ, ಪೆಂಡೆಟ್ ಸಹಿತ ಸರ, ಲಾಂಗ್ ಚೈನ್, 2 ಮಕ್ಕಳ ಚೈನ್, 3 ಬ್ರಾಸ್‌ಲೈಟ್, 2 ಎಲಿಜೆಬೆತ್ ರಾಣಿ ಉಂಗುರ, 7 ಉಂಗುರ, ನೆಕ್ಲೇಸ್, ಕಿವಿ ಓಲೆ ಒಂದು ಜೊತೆ, 4 ಬಳೆ, ಮಕ್ಕಳ ಸಣ್ಣ ಕಿವಿಯ ಒಲೆ, 3 ಬೆಳ್ಳಿಯ ಉಡಿದಾರ, ಬೆಳ್ಳಿಯ ಕಾಲುಂಗುರ ಒಂದು ಜೊತೆ, ಬೆಳ್ಳಿಯ ಕಿವಿಯೋಲೆ ಒಂದು ಜೊತೆ ಕಳವಾಗಿರುವುದು ಕಂಡುಬಂದಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 18 ರಿಂದ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಸಂಗೀತಾ ಭಟ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ  ಹಿಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ.  ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Similar News