ಕಾರ್ಪೊರೇಟ್ ಕಂಪೆನಿಗಳ ಪರ ನಿಂತ ಸರಕಾರ: ತಪನ್ ಸೇನ್ ಆಕ್ರೋಶ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿಐಟಿಯು 17ನೆ ಅಖಿಲ ಭಾರತ ಸಮ್ಮೇಳನ

Update: 2023-01-18 16:08 GMT

ಬೆಂಗಳೂರು, ಜ.18: ಆಳುವ ಸರಕಾರಗಳು ನವ ಉದಾರವಾದಿ ನೀತಿಗಳ ಏಜೆಂಟರಂತೆ, ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿರುವುದರಿಂದ ದೇಶದ ಜನರು ದಿವಾಳಿ ಆಗುತ್ತಿದ್ದಾರೆ ಎಂದು ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬುಧವಾರ ನಗರದ ಅರಮನೆ ಮೈದಾನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು)ನ 17ನೆ ಅಖಿಲ ಭಾರತ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರದ ವಿಷಕಾರಿ ನೀತಿಗಳ ಪರಿಣಾಮಗಳ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಾಶವಾಗುತ್ತಿವೆ. ಸರಕಾರದ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದೆ. ಇದನ್ನು ಸಮರ್ಥವಾಗಿ ಪ್ರಶ್ನಿಸಬೇಕಾದ ದೇಶದ ಮಾಧ್ಯಮಗಳು ಸರಕಾರದ ಬೆಂಬಲ ನಿಂತಿವೆ ಎಂದರು. 

ಆಳುವ ಸರಕಾರವು ಜನರ ಒಗ್ಗಟ್ಟನ್ನು ಮುರಿಯುವ ವಿಭಜನಕಾರಿ ನೀತಿಗಳನ್ನು ಹೇರುತ್ತಾ ಸಮಾಜದ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುತ್ತಿದೆ. ದೇಶದ ಹಿತಾಸಕ್ತಿಗೆ ಮತ್ತು ದುಡಿಯುವ ವರ್ಗದ ವರ್ಗಗಳಿಗೆ ವಿರುದ್ಧವಾಗಿ ಇಂತಹ ಕ್ರಿಮಿನಲ್ ದಾಳಿಗಳನ್ನು ನಡೆಸುತ್ತಿರುವ ಸರಕಾರವನ್ನು ರೈತ-ಕಾರ್ಮಿಕ ಚಳುವಳಿಯನ್ನು ರೂಪಿಸಬೇಕು ಎಂದು ಅವರು ಹೇಳಿದರು. 

ನವ ಉದಾರೀಕರಣ ನೀತಿಗಳ ಸವಾಲು ಕೇವಲ ಕಾರ್ಮಿಕ ವರ್ಗಕ್ಕೆ ಮಾತ್ರ ಸೀಮಿತವಲ್ಲ. ಇದು ಇಡೀ ಮನುಕುಲದ ಮುಂದಿನ ಸವಾಲಾಗಿದೆ. ಪ್ರಜಾಸತ್ತಾತ್ಮಕ ಸಮಾಜಕ್ಕೆ ಅದು ಮಾರಕವಾಗಲಿದೆ. ಕೆಲವು ಸ್ವದೇಶಿ ಮತ್ತು ವಿದೇಶಿ ಕಾರ್ಪೊರೇಟ್ ಹಿತರಕ್ಷಣೆಗಾಗಿ, ವಿಶಾಲ ಜನ ಸಮುದಾಯಗಳ ಜನರ ಹಿತವನ್ನು ಬಲಿ ಕೊಡಲಾಗುತ್ತಿದೆ ಎಂದು ಹೇಳಿದರು.

ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಮಾತನಾಡಿ, ಭಾರತದಲ್ಲಿ ಹೆಚ್ಚುತ್ತಿರುವ ಅಸಮಾನತೆ, ಸಂಪತ್ತಿನ ಕೇಂದ್ರೀಕರಣ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ವರ್ಗದ ಐಕ್ಯ ಹೋರಾಟವನ್ನು ಬಲಗೊಳಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಲ್‍ಐಸಿ ನೌಕರರ ಮಾಜಿ ರಾಷ್ಟೀಯ ಅಧ್ಯಕ್ಷ ಅಮಾನುಲ್ಲಾ ಖಾನ್, ಮೀನಾಕ್ಷಿ ಸುಂದರಂ, ಪಂಬೀಸ್ ಕ್ರಿಸ್ಟಿಸಿಸ್, ಕೆ.ಸುಬ್ಬರಾವ್, ಎಸ್.ವರಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.  

‘ದೇಶದಲ್ಲಿ ಇಂದಿನ ಪರಿಸ್ಥಿತಿ ತುಂಬಾ ವಿಷಮವಾಗಿದೆ. ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ದಿನಗೂಲಿ ನೌಕರರು ಉದ್ಯೋಗ ಸಿಗದೆ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ನಿರುದ್ಯೋಗದ ಪ್ರಮಾಣ ದಿನೇದಿನೇ ಏರಿಕೆ ಕಂಡಿದೆ. ಆದರೂ ಮೋದಿ ನೇತೃತ್ವದ ಕೇಂದ್ರ ಸರಕಾರ ಖಾಸಗೀಕರಣದ ಹಾದಿಯನ್ನು ಕೈಬಿಟ್ಟಿಲ್ಲ’

-ಅಮರ್ಜಿತ್ ಕೌರ್ ಎಐಟಿಯುಸಿಯ ಪ್ರತಿನಿಧಿ

Similar News