ಕೋವಿಡ್ ನಡುವೆ ಮಕ್ಕಳ ಮೂಲ ಓದುವ ಸಾಮರ್ಥ್ಯ ಇಳಿಕೆ: ವರದಿಯಲ್ಲಿ ಬಹಿರಂಗ

Update: 2023-01-18 17:41 GMT

ಹೊಸದಿಲ್ಲಿ, ಜ. 18:  ಕೋವಿಡ್ ಸಾಂಕ್ರಾಮಿಕದ ನಡುವೆ ದೇಶಾದ್ಯಂತದ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ದಾಖಲಾಗಿರುವ 5ರಿಂದ 16 ವರ್ಷ ಪ್ರಾಯ ಗುಂಪಿನ ಮಕ್ಕಳ ಮೂಲ ಓದುವ ಸಾಮರ್ಥ್ಯ ತೀವ್ರವಾಗಿ ಇಳಿಕೆಯಾಗಿದೆ ಎಂದು ಬುಧವಾರ ಬಿಡುಗಡೆಯಾದ ಶಿಕ್ಷಣದ ವಾರ್ಷಿಕ ಮಟ್ಟ ವರದಿ (ASER) ಸಮೀಕ್ಷೆ ಹೇಳಿದೆ.

ಶಾಲೆಗಳು ದೀರ್ಘಕಾಲ ಮುಚ್ಚಿದ್ದ ಹೊರತಾಗಿಯೂ ದೇಶಾದ್ಯಂತದ ಶಾಲೆಗಳಲ್ಲಿ ಒಟ್ಟು ದಾಖಲಾತಿ ಎಲ್ಲ ಮಟ್ಟದಲ್ಲಿ ಏರಿಕೆಯಾಗಿದೆ. ಶಾಲೆಯಲ್ಲಿ ಪ್ರಸಕ್ತ 6ರಿಂದ 14ರ ಪ್ರಾಯ ಗುಂಪಿನ ಶೇ. 98.4 ಮಕ್ಕಳು ದಾಖಲಾಗಿದ್ದಾರೆ. ಈ ಸಂಖ್ಯೆ 2018ರಲ್ಲಿ 97.2 ಇತ್ತು ಎಂದು ಪ್ರಥಮ್ ಫೌಂಡೇಶನ್ ನೇತೃತ್ವದ ಎಎಸ್‌ಇಆರ್ ಸಮೀಕ್ಷೆ ಹೇಳಿದೆ. 

2022ರಲ್ಲಿ ದೇಶಾದ್ಯಂತ ಶಾಲೆಯಿಂದ ಹೊರಗುಳಿಯುವ ಹೆಣ್ಣು ಮಕ್ಕಳ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪೂರ್ವ ಪ್ರಾಥಮಿಕ ಪ್ರಾಯ ಗುಂಪಿನ ಮಕ್ಕಳು ಶಾಲೆಗೆ ದಾಖಲಾಗುವ ಸಂಖ್ಯೆ ಶೇ. 7.1ಕ್ಕೆ ಏರಿಕೆಯಾಗಿದೆ ಎಂದು ವರದಿ ಗಮನ ಸೆಳೆದಿದೆ. ನಾಲ್ಕು ವರ್ಷಗಳ ಬಳಿಕ ಈ ಸಮೀಕ್ಷೆ ನಡೆಸಲಾಗಿದೆ.

ದೇಶದ 616 ಜಿಲ್ಲೆಗಳ 19,060 ಅಧಿಕ ಗ್ರಾಮಗಳ ಸುಮಾರು 7 ಲಕ್ಷ ಮಕ್ಕಳನ್ನು ಒಳಗೊಂಡ ರಾಷ್ಟ್ರವ್ಯಾಪಿ ನಾಗರಿಕ ನೇತೃತ್ವದ ಗ್ರಾಮೀಣ ಮನೆ ಮನೆ ಸಮೀಕ್ಷೆ ನಡೆಸುವ ಮೂಲಕ ಈ ವರದಿ ರೂಪಿಸಲಾಗಿದೆ

Similar News