×
Ad

ಬ್ಯಾಂಕ್ ದರೋಡೆ ತಪ್ಪಿಸಿದ ಇಬ್ಬರು ಮಹಿಳಾ ಪೊಲೀಸರು; ವಿಡಿಯೋ ವೈರಲ್

Update: 2023-01-19 16:09 IST

ಪಾಟ್ನಾ: ಬಿಹಾರದ ಇಬ್ಬರು ಮಹಿಳಾ ಪೇದೆಗಳು ತಮ್ಮ ಸಮಯ ಪ್ರಜ್ಞೆಯಿಂದ ಸಂಭವನೀಯ ಬ್ಯಾಂಕ್ ದರೋಡೆಯನ್ನು ತಪ್ಪಿಸಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬುಧವಾರ ಜೂಹಿ ಕುಮಾರಿ ಹಾಗೂ ಶಾಂತಿ ಕುಮಾರಿ ಎಂಬ ಇಬ್ಬರು ಮಹಿಳಾ ಪೇದೆಗಳು ಬಿಹಾರದ ಹಾಜಿಪುರದಲ್ಲಿನ ಸರ್ದಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಂದೂರಿ ಚೌಕದಲ್ಲಿರುವ ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ನ ಪ್ರವೇಶ ದ್ವಾರದಲ್ಲಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಮೂವರು ಸಶಸ್ತ್ರಧಾರಿ ದರೋಡೆಕೋರರು ಬ್ಯಾಂಕ್ ಒಳಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಆಗ ಆ ಮಹಿಳಾ ಪೊಲೀಸ್ ಪೇದೆಗಳು ಅವರ ಗುರುತಿನ ದಾಖಲೆಗಳನ್ನು ಕೇಳಿದ್ದಾರೆ. ಕೂಡಲೇ ಈ ಪೈಕಿ ಒಬ್ಬಾತ ಪಿಸ್ತೂಲ್ ಹೊರತೆಗೆದು ಅವರಿಗೆ ಗುರಿಯಿಟ್ಟಿದ್ದಾನೆ. ಕೂಡಲೇ ಸಮಯ ಪ್ರಜ್ಞೆ ಮೆರೆದ ಮಹಿಳಾ ಪೊಲೀಸ್ ಪೇದೆಗಳು ಕ್ಷಣಾರ್ಧದಲ್ಲಿ ಆ ಮೂವರು ಬ್ಯಾಂಕ್ ದರೋಡೆಕೋರರು ಹಿಮ್ಮೆಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ದೃಶ್ಯವು ಬ್ಯಾಂಕ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಪೇದೆ ಜೂಹಿ, "ನಾನು ಆ ಮೂವರನ್ನೂ ನಿಮಗೇನಾದರೂ ಬ್ಯಾಂಕ್‌ನಲ್ಲಿ ಕೆಲಸವಿದೆಯಾ ಎಂದು ಪ್ರಶ್ನಿಸಿದಾಗ, ಅವರು 'ಹೌದು' ಎಂದು ಉತ್ತರಿಸಿದರು. ಪಾಸ್‌ಬುಕ್ ತೋರಿಸುವಂತೆ ಕೇಳಿದಾಗ ಪಿಸ್ತೂಲ್ ಹೊರತೆಗೆದರು" ಎಂದು ತಿಳಿಸಿದ್ದಾರೆ.

"ಅವರು ನಮ್ಮ ಬಂದೂಕುಗಳನ್ನು ಕಿತ್ತುಕೊಳ್ಳಲು ಯತ್ನಿಸಿದರಾದರೂ, ನಾವು ಮಾತ್ರ ಏನಾದರೂ ಸರಿಯೇ ಅವರಿಗೆ ಬ್ಯಾಂಕ್ ದರೋಡೆಗಾಗಲಿ ಅಥವಾ ನಮ್ಮ ಆಯುಧವನ್ನು ಕಿತ್ತುಕೊಳ್ಳಲಾಗಲಿ ಅವಕಾಶ ನೀಡಕೂಡದು ಎಂಬ ನಿರ್ಧಾರಕ್ಕೆ ಬಂದಿದ್ದೆವು. ಅವರು ಪರಾರಿಯಾಗುವ ಸಮಯದಲ್ಲಿ ಜೂಹಿ ತನ್ನ ಬಂದೂಕಿನ ಕೀಲಿ ತೆಗೆದು ಅವರ ವಿರುದ್ಧ ಗುಂಡು ಚಲಾಯಿಸಲು ಸಿದ್ಧವಾಗಿದ್ದಳು" ಎಂದು ಮತ್ತೊಬ್ಬ ಪೊಲೀಸ್ ಪೇದೆ ಶಾಂತಿ ತಿಳಿಸಿದ್ದಾರೆ.

ಪೊಲೀಸರೀಗ ಆ ದರೋಡೆಕೋರರಿಗಾಗಿ ಶೋಧ ಕೈಗೊಂಡಿದ್ದು, ಬ್ಯಾಂಕ್ ದರೋಡೆ ಪ್ರಯತ್ನ ಕುರಿತು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್, "ಸೆಂದೂರಿಯಲ್ಲಿ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮೂವರು ವ್ಯಕ್ತಿಗಳು ಬ್ಯಾಂಕ್ ದರೋಡೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಮಹಿಳಾ ಪೊಲೀಸ್ ಪೇದೆಗಳು ಅಸಾಧಾರಣ ಧೈರ್ಯ ಪ್ರದರ್ಶಿಸಿ, ಅವರು ದಿಗಿಲುಗೊಂಡು ಪರಾರಿಯಾಗುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಗುಂಡಿನ ದಾಳಿ ಜರುಗಿಲ್ಲ. ಪೇದೆಗಳನ್ನು ಪುರಸ್ಕರಿಸಲಾಗುವುದು" ಎಂದು ತಿಳಿಸಿದ್ದಾರೆ.

Similar News