ಸರ್ಕಾರಿ ಹರಾಜಿನಲ್ಲಿ ಹೊಸ ವಿಮಾನ ನಿಲ್ದಾಣಗಳ ಖರೀದಿಗೆ ಎದುರು ನೋಡುತ್ತಿದ್ದೇವೆ: ಅದಾನಿ ಏರ್‌ಪೋರ್ಟ್ಸ್ ಸಿಇಒ

Update: 2023-01-19 11:18 GMT

ಹೊಸದಿಲ್ಲಿ: ಅದಾನಿ ಏರ್‌ಪೋರ್ಟ್ಸ್ ಸರ್ಕಾರಿ ಹರಾಜು ಮೂಲಕ ಮತ್ತಷ್ಟು ವಿಮಾನ ನಿಲ್ದಾಣಗಳನ್ನು ಹೊಂದುವ ಭಾರಿ ಮಹತ್ವಾಕಾಂಕ್ಷೆ ಹೊಂದಿದೆ ಎಂದು ಅದಾನಿ (Adani) ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಬನ್ಸಲ್ (Arun Bansal) ತಿಳಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅರುಣ್ ಬನ್ಸಲ್, ಇದು ನೀತಿ ನಿರೂಪಣೆಗೆ ಸಂಬಂಧಿಸಿದ್ದರೂ, ಹೊಸ ವಿಮಾನ ನಿಲ್ದಾಣಗಳನ್ನು ಹೊಂದಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ. ಲಕ್ನೊ ಹಾಗೂ ಅಹಮದಾಬಾದ್‌ನ ಅದಾನಿ ಏರ್‌ಪೋರ್ಟ್ಸ್ ಒಡೆತನದ ವಿಮಾನ ನಿಲ್ದಾಣಗಳನ್ನು ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣಗಳು ಎಂದು ಅಸೋಚಾಮ್ ಪ್ರಕಟಿಸಿದ ನಂತರ ANI ಸುದ್ದಿ ಸಂಸ್ಥೆಯೊಂದಿಗೆ ಪ್ರತ್ಯೇಕವಾಗಿ ಮಾತನಾಡಿರುವ ಅವರು, "ಇದು ನೀತಿ ನಿರೂಪಣೆಯ ವಿಷಯವಾಗಿದ್ದು, ಮುಂದಿನ ಹರಾಜಿನ ಸುತ್ತನ್ನು ಸರ್ಕಾರ ಯಾವಾಗ ನಿರ್ಣಯಿಸುತ್ತದೆ ಎಂಬುದನ್ನು ಅವಲಂಬಿಸಿದೆ. ನಾವು ಖಂಡಿತ ಮತ್ತಷ್ಟು ಹೊಸ ವಿಮಾನ ನಿಲ್ದಾಣಗಳನ್ನು ಹೊಂದುವ ಮಹತ್ವಾಕಾಂಕ್ಷೆ ಹೊಂದಿದ್ದೇವೆ" ಎಂದು ತಿಳಿಸಿದ್ದಾರೆ.

"ಈ ಪ್ರಶಸ್ತಿಗಳನ್ನು ಸ್ವೀಕರಿಸಿರುವುದರಿಂದ ಹಾಗೂ ದೇಶದಲ್ಲಿನ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನಾಗಿ ಲಕ್ನೊ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳನ್ನು ಗುರುತಿಸಿರುವುದರಿಂದ ನಮಗೆ ಸಂತಸವಾಗಿದೆ" ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಾಯು ಯಾನ ಉದ್ಯಮ ಬೆಳವಣಿಗೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಇನ್ನು ಐದತ್ತು ವರ್ಷಗಳಲ್ಲಿ ಭಾರತದ ವಿಮಾನ ನಿಲ್ದಾಣಗಳಿಂದ ತೆರಳುವ ಪ್ರಯಾಣಿಕರ ಸಂಖ್ಯೆ 900 ದಶಲಕ್ಷವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯ ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ದೇಶದಲ್ಲಿ ಏಳು ವಿಮಾನ ನಿಲ್ದಾಣಗಳ ಒಡೆತನ ಹೊಂದಿದೆ.

ಇದನ್ನೂ ಓದಿ: ಬ್ಯಾಂಕ್ ದರೋಡೆ ತಪ್ಪಿಸಿದ ಇಬ್ಬರು ಮಹಿಳಾ ಪೊಲೀಸರು; ವಿಡಿಯೋ ವೈರಲ್

Similar News