ಮಂಗಳೂರು: 4,750 ಕೋಟಿ ರೂ. ನಲ್ಲಿ ಕಮಿಷನ್ ಎಷ್ಟು ಎಂದು ಶಾಸಕ ವೇದವ್ಯಾಸ ಕಾಮತ್‌ಗೆ ಆಮ್ ಆದ್ಮಿ ಪಾರ್ಟಿ ಪ್ರಶ್ನೆ

Update: 2023-01-19 15:26 GMT

ಮಂಗಳೂರು(Mangaluru): ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ 4,750 ಕೋ.ರೂ. ಅಭಿವೃದ್ಧಿ ಕೆಲಸಗಳು ನಡೆದಿದೆ ಎಂದಿರುವ ಶಾಸಕ ವೇದವ್ಯಾಸ ಕಾಮತ್, ಅದರಲ್ಲಿ ಶೇ.40 ಕಮಿಷನ್ ಎಷ್ಟಾಗುತ್ತದೆ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ರಾಜ್ಯದಲ್ಲಿ ಶೇ.40 ಕಮಿಷನ್ ಬಗ್ಗೆ ರಾಜ್ಯದೆಲ್ಲೆಡೆ ಕೇಳಿ ಬರುತ್ತಿದೆ. ಹಾಗಾಗಿ 4,750 ಕೋ. ರೂ. ನಲ್ಲಿ ಎಷ್ಟು ಕಮಿಷನ್ ಸಿಗುತ್ತದೆ ಎಂಬುದನ್ನು ಕೂಡ ಶಾಸಕರು ಲೆಕ್ಕ ನೀಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

4,750 ಕೋ.ರೂ. ಮೊತ್ತದ ಕಾಮಗಾರಿ ಆಗಿದ್ದರೆ ನಗರದ ಪ್ರತಿಯೊಬ್ಬನಿಗೂ ಅದು ಅನುಭವಕ್ಕೆ ಬರುತಿತ್ತು. ಹಾಗೇನು ಆಗಿಲ್ಲ. ಇಷ್ಟೊಂದು ಮೊತ್ತದ ಕಾಮಗಾರಿಗಳ ವಿವರವನ್ನು ಶಾಸಕರು ಜನರ ಮುಂದಿಡಲಿ. ಕುಕ್ಕರ್ ಸ್ಫೋಟದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಟೊ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಗೆ ಸರಕಾರದ ವತಿಯಿಂದ ಯಾಕೆ ಪರಿಹಾರ ನೀಡಲಾಗಿಲ್ಲ. ರಸ್ತೆ ಅವಘಡದಲ್ಲಿ ಅನ್ಯಾಯವಾಗಿ ಸಾವನ್ನಪ್ಪಿದ ಯುವಕರ ಸಾವಿಗೆ ನ್ಯಾಯ ಕೊಡುವವರು ಯಾರು? ರಸ್ತೆ ಗುಂಡಿಗಳನ್ನು ಮುಚ್ಚದೆ ಜನರ ಪಾಲಿಗೆ ಮರಣ ಗುಂಡಿ ಮಾಡಿರುವುದೇ ಇವರ ದೊಡ್ಡ ಸಾಧನೆ ಎಂದು ಸಂತೋಷ್ ಕಾಮತ್ ಟೀಕಿಸಿದ್ದಾರೆ.

ಕೆಲವು ವೃತ್ತಗಳನ್ನು ಮರುವಿನ್ಯಾಸ ಮಾಡಿ ಮರುನಾಮಕರಣ ಮಾಡಿದ್ದೇ ಹೊರತು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗಿಲ್ಲ. ನಗರದೊಳಗೆ ಹಲವು ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಘನತ್ಯಾಜ್ಯ ವಿಲೇವಾರಿ  ವೈಫಲ್ಯಕ್ಕೆ ಹೈಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಒಳಚರಂಡಿ ಕೊಳಚೆ ನೀರನ್ನು ರಾಜಕಾಲುವೆಗಳಲ್ಲಿ ಬಿಡಲಾಗುತ್ತಿದೆ. ನಗರದ ಬಹುತೇಕ ಕಡೆ ಯುಜಿಡಿ ಸೌಲಭ್ಯವೇ ಇಲ್ಲ. ಇವುಗಳ ಬಗ್ಗೆ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದು ಸಂತೋಷ್ ಕಾಮತ್ ಪ್ರಶ್ನಿಸಿದ್ದಾರೆ.
ನಗರದ ಉರ್ವ, ಅಳಕೆ, ಕಾವೂರು ಸೇರಿದಂತೆ ಬಹುತೇಕ ಎಲ್ಲ ಕಡೆ ನಿರ್ಮಾಣ ಮಾಡಲಾದ ಹೊಸ ಮಾರುಕಟ್ಟೆಗಳ ಸ್ಟಾಲ್‌ಗಳು ಇನ್ನೂ ತೆರೆದಿಲ್ಲ. ಸಾರ್ವಜನಿಕರ ಉಪಯೋಗಕ್ಕಾಗುವ ಯಾವ ಕೆಲಸವನ್ನು ಕೂಡ ಶಾಸಕರು ಮಾಡಿಸಿಲ್ಲ. ಸೆಂಟ್ರಲ್ ಮಾರ್ಕೆಟ್  ತೆರವು ಮಾಡಿ ವ್ಯಾಪಾರಿಗಳು ಬೀದಿಗೆ ಬಂದಿದ್ದಾರೆ. ‘ಸ್ಮಾರ್ಟ್ ಸಿಟಿ ಯೋಜನೆ’ಯಲ್ಲಿರುವಷ್ಟು ಆಸಕ್ತಿ ಇವರಿಗೆ ಮೂಲಭೂತ ಸೌಕರ್ಯ ನೀಡುವಲ್ಲಿಲ್ಲ ಎಂದರು.

ನಗರದ ಹಂಪನಕಟ್ಟೆ ಸಹಿತ ಬಹುತೇಕ ನಗರದ ರಸ್ತೆಗಳಲ್ಲಿ, ಫುಟ್‌ಪಾಟ್‌ಗಳಲ್ಲಿ ಗುಂಡಿ ಬಿದ್ದಿವೆ. ಅದನ್ನು ದುರಸ್ತಿ ಮಾಡುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಸರಕಾರದ ವಿವಿಧ ಇಲಾಖೆಗಳು, ಖಾಸಗಿ ಕಂಪೆನಿಗಳು ರಸ್ತೆ, ಫುಟ್ಪಾತುಗಳನ್ನು ಬೇಕಾಬಿಟ್ಟಿ ಅಗೆದು ಹಾಕಿ ನಗರದ ಸ್ವರೂಪವನ್ನು ಕೆಡಿಸಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆಯನ್ನು ಕೆಲವು ವಾರ್ಡುಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಗೋಲ್ಮಾಲ್ ನಡೆದಿರುವುದನ್ನು ಜನ ಸಾಮಾನ್ಯರು ಮಾತನಾಡುತ್ತಿದ್ದಾರೆ. ಶಾಸಕರು ಉಲ್ಲೇಖ ಮಾಡಿರುವ ಬಹುತೇಕ ಯೋಜನೆಗಳು ದಶಕಗಳಿಂದ ಚಾಲ್ತಿಯಲ್ಲಿದ್ದ ಯೋಜನೆಗಳಾಗಿವೆ ಎಂದವರು ಟೀಕಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ  4,750 ಕೋಟಿ ರೂ. ಅನುದಾನ : ವೇದವ್ಯಾಸ್ ಕಾಮತ್

Similar News