ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಉತ್ತರಪ್ರದೇಶದ ಕಾಲೇಜು: ಪ್ರತಿಭಟನೆ

Update: 2023-01-19 17:13 GMT

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್ ಪಟ್ಟಣದ ಕಾಲೇಜೊಂದು ಬುಧವಾರದಂದು 'ಬುರ್ಖಾ' ಧರಿಸಿದ ಹಲವಾರು ಮುಸ್ಲಿಂ ಯುವತಿಯರಿಗೆ ಕಾಲೇಜಿಗೆ ಪ್ರವೇಶ ನಿರಾಕರಿಸಿ ವಿವಾದ ಸೃಷ್ಟಿಸಿದೆ.

ಮೂಲಗಳ ಪ್ರಕಾರ, ಪ್ರವೇಶ ನಿರಾಕರಿಸಿದ ಯುವತಿಯರು ಕಾವಲುಗಾರರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದರು. ನಂತರ ಕಾಲೇಜು ಆಡಳಿತ ಮಂಡಳಿಯ ನಿರ್ಧಾರವನ್ನು ವಿರೋಧಿಸಿ ಗೇಟ್ ಮುಂದೆ ಧರಣಿ ನಡೆಸಿದರು.

ಬುರ್ಖಾ ಧರಿಸಲು ತಮಗೆ ಎಲ್ಲ ಹಕ್ಕಿದೆ ಎಂದು ಬಾಲಕಿಯರು ಹೇಳಿದರೆ, ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿನಿಯರಿಗೆ ಡ್ರೆಸ್ ಕೋಡ್ ಇದ್ದು ಬೇರೆ ಯಾವುದೇ ಡ್ರೆಸ್‌ನಲ್ಲಿ ಪ್ರವೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

"ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಾವು ಡ್ರೆಸ್ ಕೋಡ್ ಅನ್ನು ಜಾರಿಗೆ ತಂದಿದ್ದೇವೆ.... ನಮ್ಮಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದಾರೆ ಮತ್ತು ಅದು ಎಲ್ಲರಿಗೂ ತಿಳಿದಿದೆ.... ನಾವು ಯಾವುದೇ ಪರಿಸ್ಥಿತಿಯಲ್ಲಿ ನಿಯಮವನ್ನು ಜಾರಿಗೊಳಿಸುತ್ತೇವೆ,'' ಎಂದು ಕಾಲೇಜಿನ ಹಿರಿಯ ಕಾರ್ಯನಿರ್ವಾಹಕರೊಬ್ಬರು ಹೇಳಿದರು.

ಕಾಲೇಜಿನ ಗೇಟ್ ಬಳಿಯೇ 'ಚೇಂಜಿಂಗ್ ರೂಂ' ಇದ್ದು, ಅವರಿಗೆ ಅದನ್ನು ಬಳಸಬಹುದು ಎಂದು ಅವರು ಹೇಳಿದರು.

ಸ್ಥಳೀಯ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡರು ಸಹ ನಂತರ ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದು, ಬುರ್ಖಾದಲ್ಲಿ ಕಾಲೇಜಿಗೆ ಪ್ರವೇಶಿಸಲು ಅವಕಾಶ ನೀಡಬೇಕೆಂಬ ವಿದ್ಯಾರ್ಥಿನಿಯರ ಬೇಡಿಕೆಯನ್ನು ಬೆಂಬಲಿಸಿದರು. ನಂತರ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ದಾಖಲಿಸಿ ಕಾಲೇಜು ಆಡಳಿತ ಮಂಡಳಿಗೆ ಮನವಿ ಪತ್ರ ನೀಡಿ ಧರಣಿ ಹಿಂಪಡೆದರು.

ಕಾಲೇಜು ಡ್ರೆಸ್ ಕೋಡ್‌ಗೆ ಒತ್ತಾಯಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಸ್‌ಪಿ ಮಾಜಿ ಶಾಸಕ ಜಮೀರುಲ್ಲಾ ಬೆದರಿಕೆ ಹಾಕಿದ್ದಾರೆ. ಬುರ್ಖಾ ಧರಿಸಿ ತರಗತಿಗಳಿಗೆ ಹಾಜರಾಗಲು ಯಾವುದೇ ನಿರ್ಬಂಧ ಇರಬಾರದು ಮತ್ತು ಅದನ್ನು ಅನುಮತಿಸದವರಿಗೆ ಶಿಕ್ಷೆಯಾಗಬೇಕು ಎಂದು ಅವರು ಹೇಳಿದರು.

Similar News