ಮಂಡೆಕೋಲು: ಆನೆ ಹಾವಳಿಗೆ ಜೇನು ಪೆಟ್ಟಿಗೆ ಜೋಡನೆ

Update: 2023-01-19 18:17 GMT

ಸುಳ್ಯ: ಖಾದಿ ಭಾರತದ ರೀಹಬ್ ಯೋಜನೆಯಡಿ ಆನೆ ಮತ್ತು ಮಾನವರ ನಡುವಿನ ಸಂಘರ್ಷ ತಪ್ಪಿಸಲು ಕಾಡಾನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆ ಜೋಡಿಸುವ ರಾಜ್ಯದ ಪ್ರಥಮ ಪ್ರಯೋಗದ ಉದ್ಘಾಟನೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಪಂಚಾಯಿತಿ ಸದಸ್ಯ ಬಾಲಚಂದ್ರ ದೇವರಗುಂಡ ಅವರ ಮನೆ ಬಳಿ ಗುರುವಾರ ನಡೆಯಿತು.

ಬಾಲಚಂದ್ರ ದೇವರಗುಂಡ ಅವರ ತೋಟದಲ್ಲಿ ಕಾಡಾನೆ ಬರುವ ಹಾದಿಯಲ್ಲಿ ಜೋಡಿಸಲಾದ ಜೇನು ಪೆಟ್ಟಿಗೆಗಳ ಪ್ರಯೋಗವನ್ನು ಕೇಂದ್ರ ಸರಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್ ಉದ್ಘಾಟಿಸಿದರು. 

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯದಂಚಿನ ಪ್ರದೇಶಗಳಲ್ಲಿ ಪ್ರಾಣಿಗಳು ಮತ್ತು ಮಾನವರ ನಡುವೆ ಸಂಘರ್ಷಗಳು ನಿರಂತರವಾಗಿ ನಡೆಯುತ್ತಿದೆ. ಈ ಸಂಘರ್ಷವನ್ನು ತಡೆಗಟ್ಟುವ ಸಲುವಾಗಿ ಕಾಡಾನೆಗಳು ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಅಸ್ತ್ರವಾಗಿ ಬಳಕೆ ಮಾಡುವ ಮೂಲಕ ಸಂಘರ್ಷ ತಡೆಗೆ ಸಹಕಾರಿ. ಹನಿಮಿಷನ್ ಯೋಜನೆಯ ಮೂಲಕ ದೇಶದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಕೃಷಿಕರು ಬೆಳೆದ ಕೃಷಿ ನಷ್ಟವಾಗುತ್ತಿದ್ದು ಇದನ್ನು ತಡೆಯಲು ಹೊಸ ಯೋಜನೆ ಸಹಕಾರಿ ಆಗುತ್ತದೆ. ಖಾದಿ ಮತ್ತು ಗ್ರಾಮೋದ್ಯೋಗದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರಕಬೇಕು ಎನ್ನುವುದು ನಮ್ಮ ಮತ್ತು ಸರಕಾರದ ಉದ್ದೇಶ. ಜೇನು ಪೆಟ್ಟಿಗೆಯನ್ನು ತೋಟಗಳಲ್ಲಿ ಇಡುವುದರಿಂದ ಜೇನು ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದಂತಾಗುವುದು. ಅಲ್ಲದೆ ಕೃಷಿಕರ ಕೃಷಿಯೂ ಉತ್ತಮವಾಗುತ್ತದೆ ಎಂದು ಅವರು ತಿಳಿಸಿದರು. 

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ದಕ್ಷಿಣ ವಲಯ ಸಿಇಒ ಆರ್.ಎಸ್. ಪಾಂಡೇ ಪ್ರಾಸ್ತಾವಿಕ ಮಾತನಾಡಿದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಕೆಂಚವೀರಪ್ಪ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ರಾಜ್ಯ ನಿರ್ದೇಶಕ ಡಾ. ಇ. ಮೋಹನ್ ರಾವ್, ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಾ ಕೋಲ್ಚಾರ್, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸಹ ನಿರ್ದೇಶಕ ಸೆಂಥಿಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸಹಾಯಕ ನಿರ್ದೇಶಕ ಪಿ.ಎಸ್. ಬಾಲಕೃಷ್ಣನ್ ಸ್ವಾಗತಿಸಿದರು. ಸೆಂಥಿಲ್ ಕುಮಾರ್ ವಂದಿಸಿದರು. ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಕಾರ್ಯಕ್ರಮ ನಿರೂಪಿಸಿದರು.

Similar News