ಪಟ್ಟುಬಿಡದ ಕ್ರೀಡಾಪಟುಗಳು: ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧ ಎಫ್‌ಐಆರ್ ನಿರೀಕ್ಷೆ

Update: 2023-01-20 02:17 GMT

ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಭಾರತದ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್‌ಭೂಷಣ್ ಶರಣ್‌ಸಿಂಗ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಮನವೊಲಿಸಲು ಗುರುವಾರ ಕೇಂದ್ರ ಸರ್ಕಾರ ವಿಫಲವಾಗಿದೆ. ಶುಕ್ರವಾರ ಸಂಜೆಯೊಳಗೆ ಸಿಂಗ್ ರಾಜೀನಾಮೆ ನೀಡದಿದ್ದರೆ, ಅವರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಪ್ರತಿಭಟನಾಕಾರ ನಿರತ ಕುಸ್ತಿಪಟುಗಳು ಬೆದರಿಕೆ ಹಾಕಿದ್ದಾರೆ.

ಗುರುವಾರ ತಡರಾತ್ರಿ ಕ್ರೀಡಾ ಸಚಿವ ಅನುಗಾರ್ ಠಾಕೂರ್ ಅವರು ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವುದಾಗಿ ಭರವಸೆ ನೀಡಿದರು. ಸಚಿವರ ಕೋರಿಕೆಯಂತೆ ಶನಿವಾರ ಸಂಜೆವರೆಗೆ ಕಾಯಲು ಪ್ರತಿಭಟನಾಕಾರರು ನಿರಾಕರಿಸಿದರು. ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲಿಕ್, ಎರಡುಬಾರಿಯ ವಿಶ್ವಚಾಂಪಿಯನ್‌ಶಿಪ್ ಪದಕ ವಿಜೇತರಾದ ವಿನೇಶ್ ಫೋಗಟ್ ನೇತೃತ್ವದಲ್ಲಿ ನಡೆಯುತ್ತಿರುವ ಶಾಂತಿಯುತ ಧರಣಿ ಪ್ರತಿಭಟನೆ ಎರಡನೇ ದಿನವೂ ಮುಂದುವರಿಯಿತು. ಸಿಂಗ್ ರಾಜೀನಾಮೆ ನೀಡುವ ಜತೆಗೆ ಇಡಿ ಡಬ್ಲ್ಯುಎಫ್‌ಐ ಹಾಗೂ ಅದರ ರಾಜ್ಯ ಘಟಕಗಳನ್ನು ವಿಸರ್ಜಿಸಬೇಕು ಎನ್ನುವುದು ಪ್ರತಿಭಟನಾಕಾರರ ಆಗ್ರಹ.

ಪ್ರತಿಭಟನೆ ಹಿನ್ನೆಲೆಯಲ್ಲಿ ಸಿಂಗ್, ವಿವಾದಾತ್ಮಕ ಅಂಶಗಳ ಬಗ್ಗೆ ಚರ್ಚಿಸಲು ಭಾನುವಾರ ಅಯೋಧ್ಯೆಯಲ್ಲಿ ಡಬ್ಲ್ಯುಎಫ್‌ಐ ವಿಶೇಷ ಸಾಮಾನ್ಯ ಸಭೆಯನ್ನು ಕರೆದಿದ್ದಾರೆ. ಸಿಂಗ್ ರಾಜೀನಾಮೆ ನೀಡಿದರೂ, ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಪ್ರಮುಖ ಬಿಜೆಪಿ ಮುಖಂಡನನ್ನು ಮೂಲೆಗುಂಪು ಮಾಡುವುದು ಅಸಾಧ್ಯ ಎನ್ನುವ ವದಂತಿಗಳು ಕೇಳಿಬರುತ್ತಿವೆ.

ಸಿಂಗ್ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು, ಗೋಂಡಾದ ಕೇಸರ್‌ಗಂಜ್ ಲೊಕಸಭಾ ಕ್ಷೇತ್ರದ ಹಾಲಿ ಸದಸ್ಯ. ಪೂರ್ವ ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಅವರ ಪ್ರಭಾವ ಇದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜೈತ್ರಯಾತ್ರೆಗೆ ಗಣನೀಯ ಕೊಡುಗೆ ನೀಡಿದ್ದರು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

Similar News