ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಬಹುಮುಖ್ಯ ಘೋಷಣೆ

Update: 2023-01-20 04:26 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ,  ಭರವಸೆಗಳ ಸುರಿಮಳೆಯಾಗುತ್ತಿವೆ. ಕಾಂಗ್ರೆಸ್ ಈಗಾಗಲೇ ಹಲವು ಸಮಾವೇಶಗಳನ್ನು ಹಮ್ಮಿಕೊಂಡು ಜನರನ್ನು ತಲುಪುವುದಕ್ಕೆ ಶತಪ್ರಯತ್ನ ಮಾಡಿದೆ. ಇತ್ತೀಚಿನ  ಸಮಾವೇಶಗಳಲ್ಲಿ  ಕಾಂಗ್ರೆಸ್ ಪಕ್ಷ ಘೋಷಿಸಿರುವ ೨೦೦ ಯುನಿಟ್ ಉಚಿತ ವಿದ್ಯುತ್ ಮತ್ತು ಗೃಹ ಲಕ್ಷ್ಮಿ ಯೋಜನೆ  ಬಿಜೆಪಿಯ ನಿದ್ದೆಗೆಡಿಸಿದೆ. ಕಾಂಗ್ರೆಸ್ ಈ ಭರವಸೆಯನ್ನು ನೀಡಿದ ಬೆನ್ನಿಗೇ ‘ಚುನಾವಣಾ ಪ್ರಚಾರದ ಗಿಮಿಕ್’ ಎಂದು ಬಿಜೆಪಿ ಅದರ ವಿರುದ್ಧ ಅಪಪ್ರಚಾರ ಆರಂಭಿಸಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡಿತ್ತು ಎನ್ನುವುದನ್ನು ನಾವು ಮರೆಯುವಂತಿಲ್ಲ. ಒಂದು ರೂಪಾಯಿಗೆ ಅಕ್ಕಿಯೂ ಸೇರಿದಂತೆ ಬಡವರನ್ನೇ ಕೇಂದ್ರವಾಗಿಟ್ಟುಕೊಂಡು ಸರಕಾರ ಯೋಜನೆಗಳನ್ನು ಘೋಷಣೆ ಮಾಡಿದಾಗ, ಬಿಜೆಪಿ ಸರಕಾರ ಅದನ್ನು ಟೀಕಿಸಿತ್ತು. ‘ಸರಕಾರ ಜನರನ್ನು ಸೋಮಾರಿಯನ್ನಾಗಿ ಮಾಡುತ್ತಿದೆ’ ಎಂದು ಸಂಘಪರಿವಾರ ವ್ಯಂಗ್ಯ ಮಾಡಿತ್ತು. ಟೀಕೆ, ವ್ಯಂಗ್ಯಗಳ ನಡುವೆಯೂ  ಸಿದ್ದರಾಮಯ್ಯ ನೇತೃತ್ವದ ಸರಕಾರದ ಜನಪರ ಯೋಜನೆಗಳ ಪ್ರಯೋಜನವನ್ನು ಲಕ್ಷಾಂತರ ಬಡವರು ತಮ್ಮದಾಗಿಸಿಕೊಂಡಿದ್ದರು. ಆದರೆ ಆ ಜನಪರ ಯೋಜನೆಗಳು ಅನಂತರದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕೈ ಹಿಡಿಯಲಿಲ್ಲ ಎನ್ನುವುದು ವಾಸ್ತವ. ಕಾಂಗ್ರೆಸ್‌ನೊಳಗಿನ ಭಿನ್ನಮತ, ಬಿಜೆಪಿಯ ದ್ವೇಷ ರಾಜಕಾರಣ, ಮೋದಿಯ ಕುರಿತಂತೆ ಜನರಿಗಿದ್ದ ಭ್ರಮೆ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ್ನು ಮೂಲೆಗುಂಪು ಮಾಡಿತ್ತು. ಬಳಿಕ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂತಾದರೂ ಬಹುಸಮಯ ಬಾಳಲಿಲ್ಲ.

ಸದ್ಯದ ದಿನಗಳಲ್ಲಿ ಬಡವರ ಪರವಾಗಿ ನೀಡುವ ಭರವಸೆಗಳು, ಪ್ರಣಾಳಿಕೆಯಲ್ಲಿ ಬಡವರಿಗೆ ಉಚಿತ ಯೋಜನೆಗಳು ಮತಗಳಾಗಿ ಮಾರ್ಪಡುವುದು ಕಷ್ಟ ಎನ್ನುವುದು ಕಾಂಗ್ರೆಸ್‌ಗೂ ಗೊತ್ತಿದೆ. ಒಂದು ವೇಳೆ ಚುನಾವಣೆಗಳನ್ನು ಇಂತಹ ಭರವಸೆಗಳು ಗೆಲ್ಲಿಸಿಕೊಡುತ್ತದೆ ಎಂದಾಗಿದ್ದರೆ, ಪ್ರಧಾನಿ ಮೋದಿಯವರು ಇಂದು ಅಧಿಕಾರದಲ್ಲಿರುವ ಸಂದರ್ಭವೇ ಬರುತ್ತಿರಲಿಲ್ಲ. ಭಾರತದ ಅರ್ಥವ್ಯವಸ್ಥೆಗೆ ಮಾಡಿದ ಹಾನಿಗಾಗಿ ಅವರು ಎಂದೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿರುತ್ತಿತ್ತು. ಬಿಜೆಪಿಯು ತನ್ನ ಉಳಿವಿಗಾಗಿ ಅವರ ಕೈಯಿಂದ ರಾಜೀನಾಮೆ ಕೊಡಿಸುತ್ತಿತ್ತು. ಆದರೆ ಇಂದಿಗೂ ಪ್ರಧಾನಿ ಮೋದಿಯೇ ಬಿಜೆಪಿಯ ಗೆಲುವಿನ ರೂವಾರಿ ಎಂದು ಗುರುತಿಸಲ್ಪಡುತ್ತಿದ್ದಾರೆ. ಬಡವರಿಗೆ ನೀಡಿದ ಉಚಿತಗಳನ್ನು ಕಿತ್ತುಕೊಂಡದ್ದನ್ನೇ ಸಾಧನೆಯಾಗಿ ಮಾಧ್ಯಮಗಳು ಬಿಂಬಿಸುತ್ತಿವೆ. ಮೇಲ್ವರ್ಗ ಮತ್ತು ಮೇಲ್‌ಜಾತಿ ಚುನಾವಣೆಯ ಸೋಲುಗೆಲುವುಗಳನ್ನು  ಸಂಪೂರ್ಣವಾಗಿ ನಿಯಂತ್ರಿಸುತ್ತಿರುವುದರ ಪರಿಣಾಮ ಇದು. ಇಂದು ಬಡವರ ಪರವಾಗಿ ನೀಡುವ ಭರವಸೆಗಳನ್ನು ‘ಗಿಮಿಕ್’ ‘ಓಲೈಕೆ’ಯಾಗಿ ವ್ಯಾಖ್ಯಾನಿಸಲಾಗುತ್ತಿದೆ. ಕಾರ್ಪೊರೇಟ್ ಶಕ್ತಿಗಳು ಮಾಧ್ಯಮಗಳನ್ನು ಕೈವಶ ಮಾಡಿಕೊಂಡು, ದೇಶದ ಇಂದಿನ ಸ್ಥಿತಿಗೆ ಬಡವರ ಪರವಾದ ನೀತಿಗಳೇ ಕಾರಣ ಎನ್ನುವುದನ್ನು ಜನರ ಮೆದುಳಿಗಿಳಿಸುವಲ್ಲಿ ಬಹುತೇಕ ಯಶಸ್ವಿಯಾಗಿವೆ. ಎಲ್ಲ ಸಬ್ಸಿಡಿಗಳನ್ನು ಕಳೆದುಕೊಂಡು ಸಂಕಟಗಳಲ್ಲಿ ದಿನ ದೂಡುತ್ತಿರುವ ಜನರೇ, ಮೋದಿಯ ಆರ್ಥಿಕ ನೀತಿಗಳನ್ನು ಕೊಂಡಾಡುವಂತೆ ಮಾಡಲಾಗಿದೆ. ದೇಶ ಆರ್ಥಿಕವಾಗಿ ಮಕಾಡೆ ಮಲಗಿದ್ದರೂ, ಮಾಧ್ಯಮಗಳ ಮೂಲಕ ದೇಶವನ್ನು ವಿಶ್ವಗುರುವಾಗಿಸುವಲ್ಲಿ ಅದಾನಿ, ಅಂಬಾನಿಗಳು ಯಶಸ್ವಿಯಾಗಿದ್ದಾರೆ. ಜನರ ನಿಜವಾದ ಸಮಸ್ಯೆ ‘ಮತಾಂತರ’ ‘ಲವ್‌ಜಿಹಾದ್’ ‘ಗೋಹತ್ಯೆ’ ಎನ್ನುವುದನ್ನು ಬಡಜನರ ತಲೆಗೆ ತುಂಬಲಾಗಿದೆ. ಕೋಮು ದ್ವೇಷದ ಅಮಲನ್ನು ಅವರಿಗೆ ಉಚಿತವಾಗಿ ಹಂಚಿ ಮೈಮರೆಯುವಂತೆ ಮಾಡಲಾಗಿದೆ. ತಮ್ಮ ಪರವಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಪಕ್ಷಗಳನ್ನು ಅನುಮಾನದಿಂದ ನೋಡುವ ಸ್ಥಿತಿಯಲ್ಲಿ ಅವರನ್ನು ತಳ್ಳಲಾಗಿದೆ. ಇಂತಹ ವಾತಾವರಣದಲ್ಲಿ ರಾಜಕೀಯ ಪಕ್ಷವೊಂದು, ಜನಪರವಾಗಿ ಭರವಸೆಗಳನ್ನು ನೀಡಿ ಚುನಾವಣೆಯನ್ನು ಎದುರಿಸಲು ಮುಂದಾಗುವುದು ಸಣ್ಣ ವಿಷಯವೇನೂ ಅಲ್ಲ.

ಬಿಜೆಪಿ ಜನಸಾಮಾನ್ಯರಿಗೆ ಉಚಿತ ಶಿಕ್ಷಣ, ಆರೋಗ್ಯ, ವಿದ್ಯುತ್ ಮೊದಲಾದವುಗಳನ್ನು ಕೊಡುವ ಬದಲು ‘ಸಮಾನ ನಾಗರಿಕ ಸಂಹಿತೆ’ ‘ಮತಾಂತರ ನಿಷೇಧ ಕಾಯ್ದೆ’ ಮೊದಲಾದ ಭರವಸೆಗಳನ್ನು ನೀಡಿ  ಸುಲಭವಾಗಿ ಅಧಿಕಾರ ಹಿಡಿಯುವ ಅಡ್ಡ ದಾರಿಯನ್ನು ಕಂಡುಕೊಂಡಿದೆ.ಆದರೆ ಇತ್ತೀಚೆಗೆ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೊ’ ಸಣ್ಣ ಪ್ರಮಾಣದಲ್ಲಾದರೂ ಶ್ರೀಸಾಮಾನ್ಯರನ್ನು ಜಾಗೃತಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಭಾರತ್ ಜೋಡೊ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿಯುತ್ತದೆ ಎನ್ನಲಾಗದಿದ್ದರೂ, ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಜನರಲ್ಲಿ ಸಣ್ಣದೊಂದು ಭರವಸೆಯನ್ನು ಹುಟ್ಟಿಸಿರುವುದನ್ನು ನಿರಾಕರಿಸಲಾಗುವುದಿಲ್ಲ. ಇಂತಹ ಹೊತ್ತಿನಲ್ಲೇ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜನರ ಪರವಾದ ತನ್ನ ಪ್ರಣಾಳಿಕೆಗಳನ್ನು ಒಂದೊಂದಾಗಿ ಬಹಿರಂಗಗೊಳಿಸುತ್ತಿದೆ. ಅದರಲ್ಲಿ  ಮುಖ್ಯವಾದದ್ದು ಉಚಿತ ವಿದ್ಯುತ್ ಮತ್ತು ಗೃಹಲಕ್ಷ್ಮಿ ಯೋಜನೆ. ಕಾಂಗ್ರೆಸ್ ಈ ಘೋಷಣೆ ಮಾಡಿದ ಬೆನ್ನಿಗೇ ರಾಜ್ಯಬಿಜೆಪಿಯೊಳಗೆ ತಳಮಳ ಆರಂಭವಾಗಿದೆ. ತನ್ನ  ಜನಪರ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಬದಲಿಗೆ, ಕಾಂಗ್ರೆಸ್‌ನ ಭರವಸೆ ಅನುಷ್ಠಾನಗೊಂಡರೆ ನಾಡಿಗೆ ಆಗುವ ನಷ್ಟವನ್ನು ಜನರಿಗೆ ಮನದಟ್ಟು ಮಾಡಲು ಮುಂದಾಗಿದೆ. ವಿಪರ್ಯಾಸವೆಂದರೆ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜನಸಾಮಾನ್ಯರ ಒಂದೊಂದೇ ಸಬ್ಸಿಡಿಗಳನ್ನು ಕಿತ್ತುಕೊಳ್ಳಲಾಯಿತು. ಆದರೂ ದೇಶ ಅಭಿವೃದ್ಧಿಗೊಳ್ಳದೆ ಪತನದ ಕಡೆಗೆ ಸಾಗುತ್ತಿದೆ. ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಅದಾನಿ ಮತ್ತು ಅಂಬಾನಿಗಳು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಹಾಗಾದರೆ, ಚುನಾವಣೆಗಳಿರುವುದು ಅಂಬಾನಿಯನ್ನು ಇನ್ನಷ್ಟು ಶ್ರೀಮಂತಗೊಳಿಸುವುದಕ್ಕೋ, ಅಥವಾ ಬಡಜನರು ನೆಮ್ಮದಿಯಿಂದ ದೈನಂದಿನ ಬದುಕನ್ನು ಮುನ್ನಡೆಸುವ ವಾತಾವರಣ ನಿರ್ಮಾಣ ಮಾಡುವುದಕ್ಕೋ ಎನ್ನುವುದು ಮುಂದಿನ ಚುನಾವಣೆಯ ವಿಷಯವಾಗಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಜನಪರ, ಅಭಿವೃದ್ಧಿ ಪರ ಘೋಷಣೆಗಳನ್ನು ಜನರ ಮುಂದಿಡಲು ಧೈರ್ಯ ತೋರಿಸಿರುವುದು ಶ್ಲಾಘನೀಯವಾಗಿದೆ.

ವಿಪರ್ಯಾಸವೆಂದರೆ, ಕಾಂಗ್ರೆಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘‘ಪಕ್ಷ ಅಧಿಕಾರಕ್ಕೆ ಬಂದರೆ ವರ್ಗಾವಣೆ, ಪೋಸ್ಟಿಂಗ್‌ಗೆ ಲಂಚ ಪಡೆಯುವುದಿಲ್ಲ’’ ಎಂದು ಘೋಷಿಸಿಕೊಂಡಿದೆ.  ಬುಧವಾರ ಬಾಗಲಕೋಟೆಯಲ್ಲಿ ಪ್ರಜಾಧ್ವನಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್ ಅವರು ‘‘ನಾವು ಯಾವುದೇ ಲಂಚ ಪಡೆಯದೇ ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ ಹಾಗೂ ಪೋಸ್ಟಿಂಗ್’’ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಕುತೂಹಲಕಾರಿಯಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ಈ ಹಿಂದಿನ ಅಧಿಕಾರಾವಧಿಯಲ್ಲಿ ವರ್ಗಾವಣೆ ಹಾಗೂ ಪೋಸ್ಟಿಂಗ್‌ಗಳಿಗೆ ಲಂಚ ಪಡೆದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಒಪ್ಪಿಕೊಂಡರೂ, ಒಪ್ಪಿಕೊಳ್ಳದಿದ್ದರೂ ಪೋಸ್ಟಿಂಗ್ ಮತ್ತು ವರ್ಗಾವಣೆಗಳಿಗಾಗಿ ಎಲ್ಲ ಸರಕಾರಗಳ ಅವಧಿಯಲ್ಲೂ ಲಂಚ ಅನಿವಾರ್ಯವಾಗಿದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆದುದರಿಂದ ಕಾಂಗ್ರೆಸ್ ಲಂಚ ಪಡೆಯುವುದಿಲ್ಲ ಎಂದು ಘೋಷಿಸಿರಬೇಕು. ಇದರ ಜೊತೆ ಜೊತೆಗೇ   ‘‘ಚುನಾವಣೆಯಲ್ಲಿ ಗೆದ್ದರೆ ನಮ್ಮ ಪಕ್ಷದ ಯಾವ ಶಾಸಕರೂ ಯಾವ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ’’ ಎನ್ನುವ ಈ ಭರವಸೆಯನ್ನು ಎಲ್ಲ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡರೆ ಇನ್ನಷ್ಟು ಅರ್ಥಪೂರ್ಣ. ಪಕ್ಷಾಂತರ ಶಾಸಕರಿಂದಲೇ ಸರಕಾರ ರಚಿಸಿ ರಾಜ್ಯವನ್ನು ಆಳುತ್ತಿರುವ ಬಿಜೆಪಿ, ‘ಬಿಜೆಪಿಯ ಶಾಸಕರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ, ಸರಕಾರ ಶೀಘ್ರ ಪತನಗೊಳ್ಳಲಿದೆ’ ಎಂದು ಕಾಯುತ್ತಿರುವ ಕಾಂಗ್ರೆಸ್ ನಾಯಕರು , ತಮ್ಮ ಶಾಸಕರನ್ನು ಮಾರಾಟಕ್ಕಾಗಿ ಬುಟ್ಟಿಯಲ್ಲಿಟ್ಟು ಒಳ್ಳೆಯ ದರದ ನಿರೀಕ್ಷೆಯಲ್ಲಿರುವ  ಜೆಡಿಎಸ್‌ತಮ್ಮ ಪ್ರಣಾಳಿಕೆಗಳಲ್ಲ್ ಈ ಘೋಷಣೆಯನ್ನು ಸೇರಿಸಿಕೊಂಡ ದಿನ ಚುನಾವಣೆಯ ಕುರಿತಂತೆ ಜನಸಾಮಾನ್ಯರು ಒಂದಿಷ್ಟು ಭರವಸೆಯನ್ನು ಹೊಂದಬಹುದಾಗಿದೆ.

Similar News